November 25, 2026
Mumbai News Kannada
ಸುದ್ದಿ

ದುಬೈಯಲ್ಲಿ ‘ದುಬೈ ಯಕ್ಷೋತ್ಸವ–2026’ – “ಶ್ರೀ ಹರಿಲೀಲಾಮೃತಂ” ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ





















ದುಬೈ: ಯುಎಇಯ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ’ಯ ಹನ್ನೊಂದನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಿರುವ ‘ದುಬೈ ಯಕ್ಷೋತ್ಸವ–2026’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನವೆಂಬರ್ 15ರಂದು ದುಬೈಯ ಮ್ಯಾಂಚೆಸ್ಟರ್ ಪ್ಲಾಜಾ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಸಹಯೋಗದೊಂದಿಗೆ ಡಿಸೆಂಬರ್ 20ರಂದು ನಡೆಯಲಿರುವ ಈ ಯಕ್ಷೋತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಯುಎಇಯ ವಿವಿಧ ಕನ್ನಡ ಹಾಗೂ ತುಳು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಯಕ್ಷೋತ್ಸವಕ್ಕೆ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುವ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್‌ಆರ್‌ಐ ವೇದಿಕೆಯ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಹಾಗೂ ಕಲಾಪೋಷಕ ವಾಸುದೇವ ಭಟ್ ಪುತ್ತಿಗೆ, ಚಿತ್ರನಟ ವಿನೀತ್ ಕುಮಾರ್, ಉದ್ಯಮಿ ಸುಂದರ್ ಶೆಟ್ಟಿ ಅಬುಧಾಬಿ, ಸಾಹಿತಿ ಹಾಗೂ ಬಿಲ್ಲವಾಸ್ ಅಬುಧಾಬಿಯ ಪ್ರತಿನಿಧಿ ಮನೋಹರ್ ತೋನ್ಸೆ, ಉದ್ಯಮಿ ಕಾರ್ತಿಕ್ ಶೆಟ್ಟಿ, ಕರ್ನಾಟಕ ಸಂಘ ದುಬೈಯ ನಾಗರಾಜ್ ರಾವ್ ಉಡುಪಿ, ಮನೋಹರ ಹೆಗ್ಡೆ, ಸಂಘದ ಗೌರವ ಸಲಹೆಗಾರ ಜಯಂತ್ ಶೆಟ್ಟಿ, ಗಮ್ಮತ್ ಕಲಾವಿದೆರ್ ದುಬೈಯ ಅಧ್ಯಕ್ಷ ವಾಸುಕುಮಾರ್ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಸುವರ್ಣ ಕರ್ನಿರೆ, ವೀರಶೈವ ಲಿಂಗಾಯತ ಸಮಾಜ ದುಬೈಯ ಮಲ್ಲಿಕಾರ್ಜುನ ಗೌಡ, ಹಿರಿಯ ಹಿಮ್ಮೇಳ ವಾದಕ ವೆಂಕಟೇಶ ಶಾಸ್ತ್ರಿ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಯಕ್ಷಗಾನ ಗುರು ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಉಪಸ್ಥಿತರಿದ್ದರು.

ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿಯವರು, ಕಳೆದ ಹತ್ತು ವರ್ಷಗಳಿಂದ ಯಕ್ಷಗಾನ ಅಭ್ಯಾಸ ಕೇಂದ್ರದ ಕಾರ್ಯಕ್ರಮಗಳನ್ನು ಗಮನಿಸುತ್ತಾ ಬಂದಿದ್ದು, ಕೇಂದ್ರವು ನಿರಂತರವಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಶ್ರಮಿಸುತ್ತಿರುವ ಯಕ್ಷಗಾನ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಹಾಗೂ ಶರತ್ ಕುಡ್ಲ ಅವರನ್ನು ಅಭಿನಂದಿಸಿ, ಡಿಸೆಂಬರ್ 20ರಂದು ನಡೆಯಲಿರುವ ಯಕ್ಷೋತ್ಸವಕ್ಕೆ ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಗುರು ಶೇಖರ್ ಡಿ. ಶೆಟ್ಟಿಗಾರ್ ಅವರು, ‘ದುಬೈ ಯಕ್ಷೋತ್ಸವ–2026’ರ ರೂಪುರೇಷೆ, ಕಾರ್ಯಕ್ರಮಗಳ ವಿವರ ಹಾಗೂ ಯಕ್ಷಗಾನದ ವಿವಿಧ ವೇಷ ವೈವಿಧ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಡಿಸೆಂಬರ್ 20ರಂದು ದುಬೈ ಅಲ್ ಗಿಸೈಸ್‌ನ ಜೇಮ್ಸ್ ಕ್ಯಾಂಬ್ರಿಡ್ಜ್ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ (ದುಬೈ ಏರ್‌ಪೋರ್ಟ್ ಫ್ರೀ ಝೋನ್ ಮೆಟ್ರೋ ನಿಲ್ದಾಣದ ಹತ್ತಿರ) ಮಧ್ಯಾಹ್ನ 1.30ರಿಂದ ಯಕ್ಷೋತ್ಸವ ನಡೆಯಲಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿಮ್ಮೇಳದಲ್ಲಿ ಪ್ರಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಡಾ. ಪ್ರಖ್ಯಾತ್ ಶೆಟ್ಟಿ ಹಾಗೂ ಮದ್ದಳೆಗಾರರಾದ ಆನಂದ ಪಡ್ರೆಯವರು ಭಾಗವಹಿಸಲಿದ್ದಾರೆ. ಜೊತೆಗೆ ಕೇಂದ್ರದ ಕಲಾವಿದರಾದ ನೆಲ್ಲಿತೀರ್ಥ ಭವಾನಿ ಶಂಕರ ಶರ್ಮ, ಪುತ್ತಿಗೆ ವೆಂಕಟೇಶ ಶಾಸ್ತ್ರಿ, ರಿತೇಶ್ ಆಚಾರ್ಯ ಬಾರ್ಕೂರು, ಸಂದೇಶ್ ಆಚಾರ್ಯ ಬ್ರಹ್ಮಾವರ, ಆದಿತ್ಯ ದಿನೇಶ್ ಶೆಟ್ಟಿ ಮೊದಲಾದವರು ಚೆಂಡೆ-ಮದ್ದಳೆ ಮತ್ತು ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ. ಸಂಗೀತದಲ್ಲಿ ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಕುಮಾರಿ ಶ್ರೀಶ ಪ್ರಭಾಕರ ಪೂಜಾರಿ, ಕುಮಾರಿ ಐಶಾನಿ ದೀಪಕ್ ಸುಳ್ಯ, ಕುಮಾರಿ ನ್ಯೋಮಿ ಸಾಯಿನಾಥ ಶೆಟ್ಟಿ ಮೊದಲಾದವರ ಸುಶ್ರಾವ್ಯ ಕಂಠದಲ್ಲಿ ಕೇಂದ್ರದ ಕಲಾವಿದರು “ಶ್ರೀ ಹರಿಲೀಲಾಮೃತಂ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.

ಪ್ರಸಾಧನ ಮತ್ತು ವೇಷಭೂಷಣದ ಜವಾಬ್ದಾರಿಯನ್ನು ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ ಹಾಗೂ ಸಾತ್ವಿಕ್ ಅಂಚನ್ ಕಾರ್ಕಳ ನಿರ್ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕೇಂದ್ರದ ಸದಸ್ಯ ಗಿರೀಶ್ ನಾರಾಯಣ್ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ, ವಂದಿಸಿದರು.



Related posts

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನ, ಆಡಳಿತ ಮೊತ್ತೇಸರರಾಗಿ ಸುಂದರ್ ಕುಲಾಲ್ ಶಕ್ತಿನಗರ ಆಯ್ಕೆ.

Mumbai News Desk

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk

ವಿಶ್ವ ಭಾರತಿ ಫ್ರೆಂಡ್ ಸರ್ಕಲ್ (ರಿ) ಕೋಡಿಕಲ್ : ಶಾಲೆಗೆ ಅನ್ನ ಬಡಿಸುವ ಟ್ರಾಲಿ ವಿತರಣೆ

Mumbai News Desk

ಬಿಲ್ಲವ ಸಮುದಾಯದ ವಿರುದ್ಧ ಅನಿತಾ ಕಾಸರಗೋಡು ಹೇಳಿಕೆ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ತೀವ್ರ ಖಂಡನೆ

Mumbai News Desk

” ಸಾಧನೆಯ ಮೂಲಕ ಮನಸ್ಸನ್ನು ತಿಳಿಗೊಳಿಸುವುದೇ ಜೀವನದ ಮುಖ್ಯ ಉದ್ದೇಶ “: ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ.

Mumbai News Desk

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

Mumbai News Desk