ಇನ್ನಂಜೆ: ಇಲ್ಲಿನ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಸದಾಶಿವ ಪೂಜಾರಿ (ಸಾಧು) ಅವರು ನವೆಂಬರ್ 21ರಂದು ನಿಧನರಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉತ್ತಮ ಆಡಳಿತ ನೀಡುವುದರ ಜೊತೆಗೆ, ಸಂಘಟನೆಯ ಅಭಿವೃದ್ಧಿ ಹಾಗೂ ಪ್ರಗತಿಗೆ ಪೂರಕವಾದ ಹಲವಾರು ಕಾರ್ಯಗಳನ್ನು ಕೈಗೊಂಡು ಇನ್ನಂಜೆ ಬಿಲ್ಲವ ಸಂಘವನ್ನು ಮುನ್ನಡೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರ ನಾಯಕತ್ವ, ಸೇವಾ ಮನೋಭಾವ ಮತ್ತು ಸಂಘದ ಮೇಲಿನ ಕಾಳಜಿ ಸದಾ ಸ್ಮರಣೀಯವಾಗಿದೆ.
ಸಂಘಟನಾ ಚಟುವಟಿಕೆಗಳಷ್ಟೇ ಅಲ್ಲದೆ, ವೈಯಕ್ತಿಕ ಜೀವನದಲ್ಲಿಯೂ ಸದಾ ನಗುಮುಖದಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರು, ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡಲು ಸದಾ ಸಿದ್ಧರಾಗಿದ್ದ ಹೃದಯವಂತರಾಗಿದ್ದರು. ತಮ್ಮ ಸ್ನೇಹಪರ ಸ್ವಭಾವ, ಸರಳತೆ, ಸಹೃದಯತೆ ಹಾಗೂ ಪರೋಪಕಾರಿ ಗುಣಗಳಿಂದ ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಅವರ ಅಗಲಿಕೆಯು ಇನ್ನಂಜೆ ಬಿಲ್ಲವ ಸಂಘಕ್ಕೆ, ಬಂಧುಗಳಿಗೆ, ಸ್ನೇಹಿತರಿಗೆ ಹಾಗೂ ಆಪ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.












