———————————————-
ಮುಂಬಯಿ ಅ 12. ಜೋಗೇಶ್ವರಿ ಪೂರ್ವ ಗುಂಫಾ ರಸ್ತೆ, ಜೈನ ಮಂದಿರದ ಎದುರಿರುವ, ಬಿಲ್ಲವರ ಅಸೋಸಿಯೇಶನಿನ ಜೋಗೇಶ್ವರಿ ಸ್ಥಳೀಯ ಕಚೇರಿಯಲ್ಲಿ ಇದೇ ಭಾನುವಾರ ಆ.4ರಂದು ಸಂಜೆ 6-00ರಿಂದ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ “ಆಟಿದ ಒಂಜಿ ದಿನ”ವನ್ನು ಅತಿ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು.
ಪ್ರಥಮದಲ್ಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ನಾರಾಯಣ ಪೂಜಾರಿಯವರಿಂದ ಗುರುದೇವರಿಗೆ ದೀಪ ಪ್ರಜ್ವಲಿಸಲ್ಪಟ್ಟು, ಗುರುವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಗೋರೆಗಾಂವ್ ಸ್ಥಳೀಯ ಕಚೇರಿಯ ಮಾಜಿ ಕಾರ್ಯದರ್ಶಿ ಶಶಿಧರ ಬಂಗೇರ ಇವರು ತುಳು ಸಂಸ್ಕೃತಿ, ಆಚಾರ ವಿಚಾರ, ಆಟಿ ತಿಂಗಳ ವಿಶೇಷತೆಯನ್ನು ಅರ್ಥವತ್ತಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕರಾದ ಮೋಹನ್ ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ವಿಭಾಗದವರು ತಾವು ಅತಿ ಮುತುವರ್ಜಿಯಿಂದ ತಯಾರಿಸಿರುವ ತುಳುನಾಡಿನ ತಿಂಡಿತಿನಸು ಆಹಾರಗಳನ್ನು ಪ್ರದರ್ಶಿಸಿ ಆಟಿ ಕಡoಜ ಹಾಡು ಹಾಗೂ ಜಾನಪದ ಹಾಡುಗಳನ್ನು ಹಾಡಿದರು. ಆ ಸಂದರ್ಭ ಆ ಖಾದ್ಯಗಳ ಪರಿಮಳ ಎಲ್ಲೆಡೆ ಪಸರಿಸಿ ಎಲ್ಲರ ಮನದಲ್ಲೂ ಸಂತೋಷದ ಭಾವನೆಗಳು ಸುಳಿಯಲಾರಂಬಿಸಿತು. ತಿಂಡಿತಿನಸುಗಳ ರುಚಿಯಂತೂ ಒಂದನ್ನೊಂದು ಮೀರಿಸುವಂತಿತ್ತು.
ಸ್ಥಳೀಯ ಕಚೇರಿಯ ಉಪಾಧ್ಯಕ್ಷೆ ಕಲಾವತಿ ಡಿ. ಅಮೀನ್ ಇವರೊಂದಿಗೆ ಸರ್ವ ಮಹಿಳಾ ಸದಸ್ಯೆಯರು, ಗೌ। ಕೋಶಾಧಿಕಾರಿ ಸಂತೋಷ್ ಪೂಜಾರಿ ಹಾಗೂ ಸರ್ವ ಸದಸ್ಯರು, ಯುವ ಸದಸ್ಯರು ಕಾರ್ಯಕ್ರಮದ ಸಫಲತೆಗಾಗಿ ಶ್ರಮಿಸಿರುವರು.
ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರುವರೇ ಸಹಕರಿಸಿದ ಎಲ್ಲರಿಗೂ ಪ್ರೇಮಪೂರ್ವಕ ಧನ್ಯವಾದಗಳೊಂದಿಗೆ ಕಾರ್ಯದರ್ಶಿ ಚಂದ್ರೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.