
ಮುಂಬಯಿ : ಜನಸಾಮಾನ್ಯರ ಸೇವೆಗಾಗಿ ಸುಮಾರು ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕರಾವಳಿಯ ಮೋಯಾ ಸಮುದಾಯದ ಮುಂಬಯಿಯ ಸಂಘಟನೆ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಅಲ್ಪಾವಧಿಯಲ್ಲಿಯೇ ಉನ್ನತ ಮಟ್ಟದ ಸಾಧನೆ ಮಾಡಿ ಜನಪ್ರಿಯವಾಗಿದೆ.
ಈಗಾಗಲೇ ಈ ಸಂಘಟನೆ ಮುಂಬಯಿ ಹಾಗೂ ಮಹಾರಾಷ್ಟ್ರದ ಇತರೆಡೆ ಮಾತ್ರವಲ್ಲದೆ ಗಡಿನಾಡಲ್ಲಿಯೂ ಸುಮಾರು 3000 ಕ್ಕೂ ಅಧಿಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ ಹಾಗೂ 85ಕ್ಕೂ ಹೆಚ್ಚು ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿವೆ.
ಮೋಯರ್ ಸಮುದಾಯದವರು ನಾಡಿನ ಹನ್ನೊಂದು ಕ್ಷೇತ್ರಗಳಲ್ಲಿ ಮಾತೆ ಭಗವತಿಯನ್ನು ಆರಾಧಿಸುತ್ತಿದ್ದು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಹನ್ನೊಂದು ದೇವಸ್ಥಾನಗಳಲ್ಲಿ 25 ವರ್ಷಕ್ಕಿಂತ ಅಧಿಕ ಕಾಲ ಸೇವೆ ಸಲ್ಲಿಸಿದ, ಗೌರವಾನ್ವಿತ ದೈವ ಪಾತ್ರಿ (ಅಚ್ಚಮಾರರು)ಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಮೇ 19ರಂದು ಅಪರಾಹ್ನ 2.30 ರಿಂದ ಉಪ್ಪಳ ರೈಲು ನಿಲ್ಧಾಣದ ಸಮೀಪ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಸಂಸ್ಥೆಯ ಅಧ್ಯಕ್ಷರಾದ ರವಿ ಉಚ್ಚಿಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಯುವ ಸಮಾಜ ಸೇವಕ ಶ್ರೀ ಶಿವ ಮಾದೇಗೌಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಮಾಜದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ . ಸಮಾಜ ಬಾಂಧವರು ಹಾಗೂ ಭಗವತಿ ಮಾತೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ನ ಕಾರ್ಯಕಾರಿ ಸಮಿತಿಯ ಪರವಾಗಿ ಪ್ರಧಾನ ಕಾರ್ಯದರ್ಶಿ ರಾಧೇಶ್ ಉಚ್ಚಿಲ್, ಇತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.