
ಮಹಾರಾಷ್ಟ್ರ ದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯ ಬೊಯಿಸರ್ ಪಶ್ಚಿಮದಲ್ಲಿನ ಸುಪ್ರಸಿದ್ಧ ಸದ್ಗುರು ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ನಿತ್ಯಾನಂದ ಗುರುಪೂರ್ಣಿಮೆ ಉತ್ಸವವು ಇದೇ ಜುಲೈ ತಾ. 21ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರಾತಃಕಾಲದ ಕಳಶ ಪೂಜೆಯನ್ನು ಶ್ರೀಮತಿ ಪದ್ಮಾವತೀ ಹಾಗೂ ಸತ್ಯಾ ಕೋಟ್ಯಾನ್ ನೆರವೇರಿಸಿದರು. ಬೆಳಿಗ್ಗೆ 6.30 ಕ್ಕೆ ಶ್ರೀ ಗುರು ನಿತ್ಯಾನಂದರಿಗೆ ಪಂಚಾಮೃತ ಅಭಿಷೇಕ ಹಾಗೂ ಸರ್ವ ಭಕ್ತಾದಿಗಳಿಂದ ಗುರು ದೇವರಿಗೆ ಸೀಯಾಳ ಅಭಿಷೇಕ ಕಾರ್ಯಕ್ರಮ ಜರಗಿತು. ಬೆಳಗ್ಗಿನ ಆರತಿಯನ್ನು ಶ್ರೀನಿವಾಸ್ ಕೋಟ್ಯಾನ್ ದಂಪತಿಗಳು ನೆರವೇರಿಸಿದರು.
ಆನಂತರ ಸದ್ಗುರು ನಿತ್ಯಾನಂದ ಭಜನಾ ಮಂಡಳಿಯ ವತಿಯಿಂದ ಭಕ್ತಿಗೀತೆ ಮತ್ತು ಭಜನಾ ಕಾರ್ಯಕ್ರಮವಿತ್ತು. ಮದ್ಯಾಹ್ನ 12 ಕ್ಕೆ ಶ್ರೀ ನಿತ್ಯಾನಂದ ಸ್ವಾಮಿಯವರ ವಿಶೇಷ ಗುರುಪೂಜೆ ಜರಗಿತು. ಮದ್ಯಾಹ್ನದ ಮಂಗಳ ಆರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯು ಜರಗಿತು. ಪೂಜೆಯ ವಿಧಿ ವಿಧಾನಗಳನ್ನು ಶ್ರೀ ಹರೀಶ್ ಶಾಂತಿ ಮತ್ತು ಪುರೋಹಿತ ರಾಜೇಶ್ ಶಾಂತಿ ನೆರವೇರಿಸಿದರು.
ಆಷಾಡ ಪೂರ್ಣಿಮೆಯಂದು ಜರಗಿದ ಈ ಗುರುಪೂರ್ಣಿಮಾ ಉತ್ಸವದಲ್ಲಿ ಗುರು ಭಕ್ತರಾದ ನಾರಾಯಣ್ ಶೆಟ್ಟಿ , ತಾರಾನಾಥ್ ಅಡಪ , ಭಾಸ್ಕರ್ ಶೆಟ್ಟಿ , ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಕೆ. ಭುಜಂಗ ಶೆಟ್ಟಿ , ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಷನ್ ಅದ್ಯಕ್ಷರಾದ ರಘುರಾಮ್.ಎಮ್.ರೈ , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಮಂದಿರದ ವಿಶ್ವಸ್ಥ ಮಂಡಳಿ , ಶ್ರೀ ನಿತ್ಯಾನಂದ ಭಕ್ತ ಮಂಡಳಿ ಹಾಗೂ ಮಂದಿರದ ಭಜನಾ ಮಂಡಳಿಯ ಸದಸ್ಯರು ಮತ್ತು ಮುಂಬೈ , ಪಾಲ್ಘರ್ ಇನ್ನಿತರ ವಿವಿಧ ಭಾಗಗಳಿಂದ ಆಗಮಿಸಿದ ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ ಹಾಗೂ ವರದಿ :
ಪಿ.ಆರ್.ರವಿಶಂಕರ್
8483980035
