ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅ. 3ರಂದು ಮುಹೂರ್ತ ನೆರವೇರಿಸಲಾಯಿತು.
ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿಯು ಭಕ್ತರ ಸಹಕಾರದಿಂದ ಮಾರಿಯಮ್ಮನಿಗೆ ಸ್ವರ್ಣ ಗದ್ದುಗೆ ನಿರ್ಮಿಸುತ್ತಿದ್ದು, ಉಡುಪಿಯ ಹೆಸರಾಂತ ಚಿನ್ನಾಭರಣ ಮಳಿಗೆ ಗುಜ್ಜಾಡಿ ಸ್ವರ್ಣ ಜುವೆಲರ್ಸ್ ಗದ್ದುಗೆ ನಿರ್ಮಾಣ ಮಾಡಲಿದೆ.
ಗದ್ದುಗೆ 20 ಕೆ. ಜಿ ಚಿನ್ನ, ಮತ್ತು 160 ಕೆ ಜಿ ಬೆಳ್ಳಿಯೊಂದಿಗೆ ನಿರ್ಮಾಣಗೊಳ್ಳಲಿದೆ. ಗುಜ್ಜಾಡಿ ಸ್ವರ್ಣ ಜುವೆಲರ್ಸ್ ನ ದೀಪಕ್ ನಾಯಕ್ ಮತ್ತು ಶೈಲೇಶ್ ನಾಯಕ್ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದರು.
ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ ಹೆಗ್ಡೆ ಕಲ್ಯ, ಕೋಶಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್ ಕೆ, ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ತಂತ್ರಿ, ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಕಾರ್ಯಧ್ಯಕ್ಷರಾದ ನಡಿಕೆರೆ ರತ್ನಾಕರ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಕಾರ್ಯದರ್ಶಿ ರವಿ ಭಟ್ ಮಂದಾರ, ಪ್ರಮುಖರಾದ ಮನೋಹರ್ ಶೆಟ್ಟಿ, ಮಾದವ ಪಾಲನ್, ಜಯರಾಮ್ ಆಚಾರ್ಯ, ಬೀನಾಶೆಟ್ಟಿ, ಅನುರಾಧ ಶೆಟ್ಟಿ, ಶಿಲ್ಪಾ ಜಿ ಸುವರ್ಣ, ಸಾವಿತ್ರಿ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಮಾರಿಯಮ್ಮನ ದೇವಸ್ಥಾನದ ನವ ನಿರ್ಮಾಣ ಕಾರ್ಯಗಳೊಂದಿಗೆ ನೂತನ ಸ್ವರ್ಣ ಗದ್ದುಗೆ ಸಮರ್ಪಣೆ ಯೋಜನೆ ಹಾಕಿಕೊಳ್ಳಲಾಗಿದ್ದು ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಭಕ್ತರಿಗೆ 9 ಗ್ರಾಂ, 18 ಗ್ರಾಂ, 99 ಗ್ರಾಂ, 450 ಗ್ರಾಂ ಹಾಗೂ 999 ಗ್ರಾಂ ಸ್ವರ್ಣ ಸಮರ್ಪಣೆಗೆ ಅಕ್ಟೋಬರ್ 29 ರವರೆಗೆ ಅವಕಾಶ ಮಾಡಿಕೊಳ್ಳಲಾಗಿದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿ ತಿಳಿಸಿದೆ.

previous post