
ಮುಂಬಯಿ, ಜ. 22: ಬೊರಿವಲಿ ಪೂರ್ವದ ದೇವುಲ್ನಾಡಾದ ಮಾಗಾಠಾಣೆ ಮೆಟ್ರೋ ಸ್ಟೇಷನ್ನ ಮುಂಭಾಗದಲ್ಲಿರುವ ತುಳುನಾಡಿನ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿಯ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ 51 ನೇ ವಾರ್ಷಿಕ ಮಹಾಪೂಜೆ ಮತ್ತು ಬ್ರಹ್ಮ ಬೈದರ್ಕಳ ನೇಮೋತ್ಸವವು ಜ. 25ರಂದು ಸಂಜೆ 6.30ರಿಂದ ಕ್ಷೇತ್ರದ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲ್ಯಾನ್ ಕಟಪಾಡಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಜ. 24ರಂದು ಅಪರಾಹ್ನ 3.30ರಿಂದ ಕಲಶ ಪ್ರತಿಷ್ಠೆ ರಾತ್ರಿ 9.30ರಿಂದ ಅಗೆಲ ತಂಬಿಲ ಅನಂತರ ಬೈದರ್ಕಳ ದರ್ಶನ ಜರಗಲಿದೆ. ಜ. 25ರಂದು ಬೆಳಗ್ಗೆ 7ರಿಂದ ಗಣಪತಿ ಹೋಮ, ದುರ್ಗಾಪೂಜೆ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, ಸಂಜೆ 6ರಿಂದ ದೇವಿ ದರ್ಶನ ಮತ್ತು 6.30ರಿಂದ ಬೈದರ್ಕಳ ನೇಮ, ಅನಂತರ ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಾಲಮ್ಮನ ನೇಮ, ಜ. 26ರಂದು ಮುಂಜಾನೆ 5ಕ್ಕೆ ಮಂಗಳ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
ತುಳುನಾಡಿನ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೊಂಡಿರುವ ದೇವುಲ್ನಾಡಾ ಅಶ್ವತ್ವದಡಿ ಕ್ಷೇತ್ರದಲ್ಲಿ ಜಗನ್ಮಾತೆಯು ಓಂ ಶ್ರೀ ಜಗದೀಶ್ವರೀ ಎಂಬ ನಾಮದಿಂದ ನೆಲೆಯಾಗಿ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಮೆರೆಯುತ್ತಿದ್ದು, ಗರೋಡಿಯಲ್ಲಿ ಮಾಯಂದಾಳ್ ಮತ್ತು ಜೋಗಿ ಪುರುಷರ ನೇಮೋತ್ಸವವು ಪ್ರತೀ ವರ್ಷ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಸಮಗ್ರ ತುಳುನಾಡ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ಜಗಧೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಎಸ್. ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಅಭಿಜಿತ್ ಜೆ. ಶೆಟ್ಟಿ ಮತ್ತು ಗೌರವ ಕೋಶಾಧಿಕಾರಿ ಆಶೀಷ್ ಆರ್. ಕೋಟ್ಯಾನ್ ವಿನಂತಿಸಿಕೊಂಡಿದ್ದಾರೆ .