
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.

ಮಾ. 25 ರಂದು ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಕೆ ಪಿ ಜಗದೀಶ್ ಅಧಿಕಾರಿಯವರು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಅವರ ಕಛೇರಿಯಲ್ಲಿ ಬೇಟಿಯಾಗಿ ಸದ್ಯ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತದಿಂದಾಗಿ ಜನಸಾಮಾನ್ಯರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ವಿವರಿಸಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ಮನವಿ ಸಲ್ಲಿಸಲಾಯಿತು. ಮಾನ್ಯ ಉಪಮುಖ್ಯಮಂತ್ರಿಗಳು ಜಿಲ್ಲೆಗಳ ಅಭಿವೃದ್ದಿಗಾಗಿ ಸಮಿತಿಯು ಕೈಗೊಂಡ ಕಾರ್ಯದ ಬಗ್ಗೆ ಈ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ ವಿದ್ಯುತ್ ಪೂರೈಕೆ ಬಗ್ಗೆ
ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆಯಿತ್ತರು. ಅಲ್ಲದೆ ಈ ಬಗ್ಗೆ ಕರ್ನಾಟಕ ಸರ್ಕಾರದ ಮಾನ್ಯ ಸಭಾಪತಿ ಯು.ಟಿ. ಖಾದರ್ ಅವರನ್ನು ಮಾರ್ಚ್ 18ರಂದು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಮಾರ್ಚ್ 19ರಂದು ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್, ಉಪಾಧ್ಯಕ್ಷರಾದ ಜಗಧೀಶ್ ಅಧಿಕಾರಿ, ಮಾಜಿ ಮುಖ್ಯ ಮಂತ್ರಿ, ಕಾಂಗ್ರೇಸ್ ನಾಯಕ ಡಾ. ವೀರಪ್ಪ ಮೊಯ್ಲಿ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಸಮಿತಿಯ ಕಾರ್ಯ, ಸಾಧನೆಯನ್ನು ವಿವರಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಕೆಯ ಅಗತ್ಯತೆಯನ್ನು ಒತ್ತಿ ಹೇಳಿದರು.

ಸಮಿತಿಯು ಮಾರ್ಚ್ 15ರಂದು ಈ ಬಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ಯನ್ನು ಆಯೋಜಿಸಿದ್ದು, ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್, ಉಪಾಧ್ಯಕ್ಷರಾದ ಕೆ ಪಿ ಜಗದೀಶ್ ಅಧಿಕಾರಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರೊಫೆಸರ್ ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್, ಜೊತೆ ಕಾರ್ಯದರ್ಶಿ ಶೇಖರ್ ಗುಜ್ಜರಬೆಟ್ಟು ಹಾಗೂ ಸದಸ್ಯರಾದ ಅರುಣ್ ಸನಿಲ್ ಮೊದಲಾದವರು ಉಪಸ್ಥಿತರಿದ್ದು ಉಡುಪಿಯ ಪಡುಬಿದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಜಿಲ್ಲೆಗಳಿಗೆ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಕೆ ಮಾಡಬೇಕಾದ ಬಗ್ಗೆ ಸರಕಾರದ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ತೀರ್ಮಾನಿಸಲಾಗಿತ್ತು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ತಿಳಿಸಿದ್ದಾರೆ.