
ರಾಜ್ಯದ ಪ್ರತಿಷ್ಠಿತವಿಶ್ವವಿದ್ಯಾನಿಲಯಗಳನ್ನು ಉಳಿಸುವ ಗುರಿ ನಮ್ಮ ಮುಂದಿದೆ. ಅದಕ್ಕಾಗಿ ಸರಕಾರದ ಸಂಪುಟ ಉಪಸಮಿತಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಅದನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಖಾತೆ ಸಚಿವ ಡಾ| ಎಂ. ಸಿ. ಸುಧಾಕರ್ ಹೇಳಿದ್ದಾರೆ.
ಅವರು ಕೊಣಾಜೆಯ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿವಿಯ 43ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್, ಪಿಎಚ್‌ಡಿ, ಸ್ನಾತಕೋತ್ತರ ಮತ್ತು ಪದವಿ ತರಗತಿಯ ರ್‍ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಂಬಯಿ ಸೋಮಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ವಿ.ಎನ್.ರಾಜಶೇಖರನ್ ಪಿಳ್ಳೆ.ಕುಲಪತಿ ಪ್ರೊ| ಪಿ.ಎಲ್.ಧರ್ಮ ಪ್ರಸ್ತಾವಿಸಿದರು. ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಸಂಗಪ್ಪ, ವಿ.ವಿ.ಯ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಪರಿಷತ್ ಸದಸ್ಯರು, ವಿವಿಧ ಮುಖ್ಯಸ್ಥರು ಉಪಸ್ಥಿತರಿದ್ದರು.
ಮೂವರಿಗೆ ಗೌರವ ಡಾಕ್ಟರೆಟ್ ಪ್ರದಾನ
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್, ನಿರ್ಮಾಣ ಕ್ಷೇತ್ರದ ಸಾಧಕ ರೋಹನ್ ಮೊಂತೆರೋ, ಉದ್ಯಮಿ, ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು .
ರವಿ ಮೂಲ್ಯ ನಡುಬೆಟ್ಟು ಅವರಿಗೆ ಪಿಎಚ್.ಡಿ.:
ನಡುಬೆಟ್ಟಿನ ಶ್ರೀ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಧರ್ಮದರ್ಶಿ ಯಾಗಿ ಸೇವೆ ಸಲ್ಲಿಸಲು ಕೆನರಾ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿ ಹುದ್ದೆಯನ್ನು ತ್ಯಜಿಸಿದ್ದ ರವಿ ಎನ್ ಮೂಲ್ಯ, “ಪಂಜುರ್ಲಿ ದೈವದ ಪ್ರಾಧಾನ್ಯ, ಪ್ರದರ್ಶನಾತ್ಮಕತೆ: ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ’ ವಿಷಯದಲ್ಲಿ ಪಿಎಚ್. ಡಿ. ಪದವಿಯನ್ನು ಸ್ವೀಕರಿಸಿದ್ದಾರೆ.