
ಮೊಗವೀರ ಮಹಿಳೆಯರು ಧೈರ್ಯವಂತರು – ಡಾ. ಜಿ. ಪಿ. ಕುಸುಮ
ಮೊತ್ತ ಮೊದಲ ಬಾರಿಗೆ ಮೊಗವೀರ ಸಮುದಾಯದ ಬೇರೆ ಬೇರೆ ಮೂಲಸ್ಥಾನ ಸಭಾಗಳ ಮುಂಬಯಿ ಶಾಖೆಗಳಲ್ಲಿ ಮಹಿಳಾ ವಿಭಾಗವನ್ನು ಪ್ರಾರಂಭಿಸಿದ ಕೀರ್ತಿಗೆ ತಿಂಗಳಾಯ ಮೂಲಸ್ಥಾನ ಪಾತ್ರವಾಗಿದೆ ಎನ್ನಲು ಅತೀವ ಸಂತಸವಾಗುತ್ತಿದೆ. ಇದು ಸ್ವಾಗತಾರ್ಹವಾದುದು. ಮೊಗವೀರ ಮಹಿಳೆಯರು ಧೈರ್ಯಕ್ಕೆ ಹೆಸರಾದವರು. ಬಹಳ ಹಿಂದಿನಿಂದಲೇ ಅವರು ಕಾಲ್ನಡಿಗೆಯಿಂದಲೇ ದೂರ ದೂರದವರೆಗೆ ಸಾಗಿ ಮೀನು ಮಾರಾಟ ಮಾಡಿ ಉದ್ಯೋಗದಲ್ಲಿ ನಿರತರಾಗಿದ್ದವರು. ತದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ ಇಚ್ಛಾಶಕ್ತಿ, ಮನೋಬಲ ಇದ್ದರೆ ಮಹಿಳೆಯರು ಏನನ್ನೂ ಸಾಧಿಸಬಲ್ಲರು ಎನ್ನುವುದನ್ನು ತೋರಿಸಿಕೊಟ್ಟವರು. ತಿಂಗಳಾಯ ಮೂಲಸ್ಥಾನದ ಮಹಿಳೆಯರು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೀರ್ತಿ ಪಡೆಯುವಂತಾಗಲೆಂದು ಡಾ. ಜಿ.ಪಿ .ಕುಸುಮಾ ಅವರು ಶುಭ ಹಾರೈಸಿದರು. ತಿಂಗಳಾಯ ಮೂಲಸ್ಥಾನ ಮುಂಬಯಿ ಶಾಖೆಯ ಮಹಿಳಾ ವಿಭಾಗದವರು ದಿ.23/03/2025 ರಂದು ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಭಾಗೃಹದಲ್ಲಿ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.

ಮುಂಬಯಿಯಲ್ಲಿ ಪ್ರಥಮ ಬಾರಿಗೆ ಮಹಿಳಾ ವಿಭಾಗವನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟ ತಿಂಗಳಾಯ ಮೂಲಸ್ಥಾನ ಮುಂಬಯಿ ಶಾಖೆಯ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಮಹಿಳಾ ವಿಭಾಗದ ಅಧ್ಯಕೆ ಶ್ರೀಮತಿ ಜಯಂತಿ ಉತ್ತಮ್ ಸಾಲ್ಯಾನ್ ಅವರು ನಮ್ಮ ಮೂಲಸ್ಥಾನದ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸುವ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತಿರುವುದು ಅತೀವ ಸಂತಸವನ್ನು ತಂದಿದೆ. ಹತ್ತು ಹಲವು ಯೋಜನೆಗಳನ್ನು ನಮ್ಮ ಮಹಿಳಾ ವಿಭಾಗವು ಹೊಂದಿದ್ದು ಸದಸ್ಯರೆಲ್ಲರ ಸಹಕಾರವು ಅತ್ಯಗತ್ಯವಾಗಿದೆ ಎಂದು ನುಡಿದರು.

ಮುಂಬಯಿ ಶಾಖೆಯ ಗೌ.ಪ್ರ.ಕಾರ್ಯದರ್ಶಿ ಶ್ರೀ ನಾರಾಯಣ ತಿಂಗಳಾಯ ಅವರು ಮುಂಬಯಿ ಶಾಖೆಯು ನಡೆದು ಬಂದ ದಾರಿಯನ್ನು ತಿಳಿಸಿದರಲ್ಲದೆ ಮಹಿಳಾ ವಿಭಾಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇದರ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಶಾಖೆಯ ಪೂರ್ಣ ಬೆಂಬಲವಿದೆ ಎಂದು ನುಡಿದರು.

ಮುಂಬಯಿ ಶಾಖೆಯ ಅಧ್ಯಕ್ಷ ಶ್ರೀ ಯಜ್ಞೇಶ್ ಅಮೀನ್
ಅವರು ಮಹಿಳಾ ವಿಭಾಗದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರಲ್ಲದೆ ಭವಿಷ್ಯದಲ್ಲಿ ಈ ಮಹಿಳಾ ವಿಭಾಗವು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲೆಂದು ಹಾರೈಸಿದರು.

ವೇದಿಕೆಯಲ್ಲಿ ಗೌ.ಕೋಶಾಧಿಕಾರಿ ಶ್ರೀಮತಿ ಹೇಮಾವತಿ ಸುಕುಮಾರ್ ತಿಂಗಳಾಯ ಉಪಸ್ಥಿತರಿದ್ದರು.
ಬಳಿಕ ಅತಿಥಿ ಭಾಷಣಕಾರರಾಗಿ ಆಗಮಿಸಿದ ಯೋಗ ಆಚಾರ್ಯ ಕವಿತಾ ಸುವರ್ಣ ಇವರು ಯೋಗಾಭ್ಯಾಸದ ಬಗ್ಗೆ ಒಳ್ಳೆಯ ಮಾಹಿತಿಯನ್ನು ನೀಡಿದರು. ಮನೋರಂಜನೆಯ ಅಂಗವಾಗಿ ಫ್ಯಾಷನ್ ಶೋ, ನೃತ್ಯ ವೈಭವ ಪ್ರಸ್ತುತಗೊಂಡು ಜನಮನ ರಂಜಿಸಿತು.
ಪ್ರಾರಂಭದಲ್ಲಿ ಶ್ರೀಮತಿ ಯಾದವಿ ಮಾಧವ ಕರ್ಕೇರ, ಶ್ರೀಮತಿ ಲತಾ ಸುವರ್ಣ ಹಾಗೂ ಜ್ಯೋತಿ ಧನರಾಜ್ ಹೆಜಮಾಡಿ ಅವರಿಂದ ಪ್ರಾರ್ಥನೆಯಾದ ಬಳಿಕ ಅತಿಥಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಜನಿ ತಿಂಗಳಾಯ ಅವರು ಫ್ಯಾಷನ್ ಶೋ ದ ತೀರ್ಪುಗಾರರಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ ಗೌ.ಪ್ರ.ಕಾರ್ಯದರ್ಶಿ ಸುಪ್ರೀತಾ ಯಾದವಿ ಮಾಧವ ಕರ್ಕೇರ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.