ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ (ಏ. 19)ರಂದು ವರ್ಷವಧಿ ಉತ್ಸವದಂದು ಮಹಾರಥೋತ್ಸವದ ಸಂದರ್ಭದಲ್ಲಿ ರಥದ
ಮೇಲ್ಭಾಗ ಕುಸಿದು ಬಿದ್ದಿದ್ದು ಈ ಬಗ್ಗೆ ಶೀಘ್ರದಲ್ಲಿ ಒಂಬತ್ತು ಮಾಗಣೆಯ ಸಭೆ ಕರಿದು ಮುಂದಿನ ನಿರ್ಣಯ ತೆಗೆದುಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.
ರಥದ ಮೂಲ ಸ್ವರೂಪದಲ್ಲಿ ಹೊಸ ರಥ ನಿರ್ಮಾಣಕ್ಕೆ ಚಿಂತನೆ ನಡೆಯುತ್ತಿದ್ದು, ಇದಕ್ಕೆ 2 ವರ್ಷ ತಗಲಬಹುದು.
ಹಳೆಯ ರಥ ದುರಸ್ತಿಗೋಳಿಸಲು 30 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರಸರು ಮುಂಬಯಿ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಸುಮಾರು 400 ವರ್ಷ ಹಳೆಯ ಬ್ರಹ್ಮರಥವನ್ನು, ಹಿಂದೆ ಹಲವು ಬಾರಿ ನವೀಕರಣಗೊಳಿಸಲಾಗಿದ್ದು, ಕಳೆದ ರಥೋತ್ಸವ ಸಂಧರ್ಭ ಮುಂಭಾಗದ ಎಡ ಚಕ್ರ ಹೂತು ಹೋಗಿತ್ತು, ಈ ಬಾರಿಯೂ ಅದೇ ಚಕ್ರದ ಒಳಭಾಗದ ಅಕ್ಸಿಲ್ ತುಂಡಾಗಿ ರಥದ ಮೇಲ್ಭಾಗ ಮುರಿದು ಬೀಳಲು ಕಾರಣವಾಯಿತು.
ರಥ ಮುರಿದ ಘಟನೆ ಬಗ್ಗೆ ಶೀಘ್ರದಲ್ಲಿ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ 32 ಗ್ರಾಮಗಳ ಭಕ್ತರ ಸಭೆ ನಡೆಸಿ, ಅಷ್ಟಮಂಗಳ ಪ್ರಶ್ನೆ ಇಡಲು ನಿರ್ಧಾರ ಮಾಡಲಾಗಿದೆ ಎಂದು ದುಗ್ಗಣ್ಣ ಸಾವಂತರಸರು ತಿಳಿಸಿದ್ದಾರೆ.
