ಮುಂಬೈ ಉಪನಗರದ ಜಿಲ್ಲಾ ಕ್ರೀಡಾ ಕಚೇರಿ (District Sports Office – DSO) ಆಯೋಜಿಸಿದ್ದ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ, ಅಂಡರ್-14 ಬಾಲಕರ ವಿಭಾಗದ ಮುಂಬೈ ವಲಯದ ಪ್ರಶಸ್ತಿಯನ್ನು ಚೆಂಬೂರು ಸಂಘದ, ಚೆಂಬೂರು ಕರ್ನಾಟಕ ಪ್ರೌಢಶಾಲೆ (Chembur Karnataka High School) ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಅಕ್ಟೋಬರ್ 15, 2025ರ ಬುಧವಾರದಂದು ಓವಲ್ ಮೈದಾನದಲ್ಲಿ (Oval Maidan) ನಡೆದ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ, ಶಾಲೆಯ ಕಿರಿಯ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡಿದರು.
320 ತಂಡಗಳ ಪೈಕಿ ವಿಭಾಗೀಯ ಮಟ್ಟಕ್ಕೆ ಆಯ್ಕೆ :
ಈ ಪಂದ್ಯಾವಳಿಯಲ್ಲಾದ ಪ್ರಮುಖ ಸಾಧನೆ ಎಂದರೆ, ಮುಂಬೈ ವಲಯದ ವಿಜೇತರಾಗಿ, ಒಟ್ಟು 320 ತಂಡಗಳ ಪೈಕಿ ಚೆಂಬೂರು ಕರ್ನಾಟಕ ಪ್ರೌಢಶಾಲೆ ತಂಡವು ವಿಭಾಗೀಯ ಮಟ್ಟಕ್ಕೆ (Division Level) ಆಯ್ಕೆಯಾಗಿದೆ. ಇದು ಶಾಲೆಯ ಕ್ರೀಡಾ ಇತಿಹಾಸದಲ್ಲಿ ಒಂದು ಹೆಮ್ಮೆಯ ಮೈಲಿಗಲ್ಲು.
ಅದೇ ರೀತಿ ಅಂಡರ್-16ರ ಪಂದ್ಯಾಟದಲ್ಲಿ ಚೆಂಬೂರು ಕರ್ನಾಟಕ ಪ್ರೌಢಶಾಲೆ ತಂಡವು ಫೈನಲ್ ಮಟ್ಟಕ್ಕೆ ತಲಪಿದ್ದು ಒಂದು ಸಾಧನೆಯಾಗಿದೆ.
ಶಾಲೆಯ ಈ ವಿಜಯಕ್ಕೆ ಶ್ರಮಿಸಿದ ವಿದ್ಯಾರ್ಥಿಗಳಿಗೆ, ಹಾಗೆಯೇ ಅವರಿಗೆ ಮಾರ್ಗದರ್ಶನ ನೀಡಿದ ತರಬೇತುದಾರರಾದ ದಿನೇಶ್ ಸಾಳುಂಖೆ ಸರ್, ಅಂಕುಶ್ ಸರ್ ಮತ್ತು ರಾಜಿಂದರ್ ಸಿಂಗ್ ಸರ್ ಅವರಿಗೆ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮುಂದಿನ ವಿಭಾಗೀಯ ಮಟ್ಟದ ಪಂದ್ಯಾವಳಿಗಾಗಿ ತಂಡಕ್ಕೆ ಶುಭ ಹಾರೈಕೆಗಳು!




