ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಅವರು ಸೆಪ್ಟೆಂಬರ್ 18ರಂದು ಹೊರಡಿಸಿದ್ದ ಗಡಿಪಾರು ಆದೇಶವನ್ನು ಪ್ರಶ್ನಿಸಿ, ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ, ಈ ಆದೇಶವನ್ನು ಹೊರಡಿಸಿದೆ.
ಸದ್ಯ ಪುತ್ತೂರು ಉಪವಿಭಾಗಾಧಿಕಾರಿಗಳು ಈ ಹಿಂದೆ ಹೊರಡಿಸಿದ್ದ ಗಡಿಪಾರು ಆದೇಶವನ್ನು ರದ್ದುಗೊಳಿಸಿದ ನ್ಯಾಯಪೀಠ, ಪ್ರಕರಣವನ್ನು ಮರುವಿಚಾರಣೆಗೆ ಒಳಪಡಿಸುವಂತೆ ಸೂಚಿಸಿದೆ.
ʻಪ್ರಕರಣದ ಕುರಿತು ಹೊಸದಾಗಿ ವಿಚಾರಣೆಯನ್ನು ನಡೆಸಿ, ಮುಂದಿನ 15 ದಿನಗಳೊಳಗೆ ಸೂಕ್ತವಾದ ಕಾರಣಗಳು ಮತ್ತು ಕಾನೂನಿನ ಸೆಕ್ಷನ್ಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಹೊಸ ಆದೇಶವನ್ನು ಹೊರಡಿಸಬೇಕು,ʼಎಂದು ಪೀಠವು ಪುತ್ತೂರಿನ ಉಪವಿಭಾಗಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೈಕೋರ್ಟ್ನ ಈ ಆದೇಶದಿಂದಾಗಿ, ತಿಮರೋಡಿ ಅವರ ಮೇಲಿದ್ದ ಗಡೀಪಾರು ಭೀತಿ ಸದ್ಯಕ್ಕೆ ದೂರವಾಗಿದ್ದು, ಉಪವಿಭಾಗಾಧಿಕಾರಿ ನಡೆಸುವ ಹೊಸ ವಿಚಾರಣೆ ಮತ್ತು ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.




