ಮುಂಬಯಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಶ್ರೀ ರಾಮ ಕಥಾ ಹೃದಯಂ’ ತಾಳಮದ್ದಳೆ ಸರಣಿಯ ಎರಡನೇ ಭಾಗವು ಮಾರ್ಚ್ 1ರಂದು ಜರುಗಲಿದೆ.
ವಿದ್ಯಾವಿಹಾರ್ನ ಗಾಮ್ದೇವಿ ರಸ್ತೆಯಲ್ಲಿರುವ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನದಲ್ಲಿ ಅಪರಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಭು ರಾಮಚಂದ್ರನ ಅವತಾರದಿಂದ ನಿರ್ಯಾಣದವರೆಗಿನ ಸಂಪೂರ್ಣ ರಾಮ ಚರಿತ್ರೆಯನ್ನು 24 ಕಂತುಗಳಲ್ಲಿ ಪ್ರಸ್ತುತಪಡಿಸುವ ಈ ಸರಣಿಯ ಎರಡನೇ ಭಾಗದಲ್ಲಿ ‘ಯಜ್ಞ ಸಂರಕ್ಷಣೆ, ಸೀತಾ ಕಲ್ಯಾಣ ಹಾಗೂ ಭಾರ್ಗವ ಗರ್ವಭಂಗ’ ಪ್ರಸಂಗಗಳು ಮೇಳೈಸಲಿವೆ.
ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಹಾಗೂ ಆಡಳಿತ ಮುಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಯೋಜಕರಾದ ವಾಸು ಶೆಟ್ಟಿ ಮಾರ್ನಾಡ್ ಮತ್ತು ಸುರೇಶ್ ನಂದ್ರೋಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.




