ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಉದ್ಯಮಿಯೊಬ್ಬರಿಗೆ ಮಿನಿ ಟೆಂಪೋ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಿಕೂರು ಬಳಿ ನಡೆದಿದೆ. ಮೂಲತಃ ಮೂಲ್ಕಿ-ಚಿತ್ರಾಪುನವರಾದ ಪ್ರಸ್ತುತ ಇನ್ನಾದಲ್ಲಿ ವಾಸವಿರುವ ಲಿಂಗಪ್ಪ ಶೆಟ್ಟಿ (76) ಮೃತರು. ನಂದಿಕೂರು ರಾಮ ಮಂದಿರದ ಎದುರಿನ ತಮ್ಮ ಸ್ವಂತ ಕಟ್ಟಡದತ್ತ ಶುಕ್ರವಾರ ರಾತ್ರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಿನಿ ಟೆಂಪೋ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರು ಮುಂಬಯಿ ಮಾತ್ರವಲ್ಲದೆ ಮೂಲ್ಕಿ, ನಂದಿಕೂರು, ಉಡುಪಿಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಮೂಲ್ಕಿಯಲ್ಲಿ ಹೆದ್ದಾರಿ ಬಳಿ ಗ್ಯಾರೇಜ್ ಉದ್ಯಮ ತೆರೆದು ಮೆಕ್ಯಾನಿಕ್ ಆಗಿ ಜೀವನ ಆರಂಭಿಸಿದ್ದ ಲಿಂಗಪ್ಪ ಶೆಟ್ಟಿ, ಬಳಿಕ ಮುಂಬಯಿಗೆ ತೆರಳಿ ಚೆಂಬೂರಿನಲ್ಲಿ ನೆಲೆಸಿ ಸಾರಿಗೆ ಉದ್ಯಮ ಕಟ್ಟಿದ್ದರು. ಧಾರ್ಮಿಕ ಕ್ಷೇತ್ರ ಸಹಿತ ಕಂಬಳ ಕ್ಷೇತ್ರದಲ್ಲಿ ಕೊಡುಗೆ ದಾನಿಯಾಗಿ ಅವರು ಗುರುತಿಸಿಕೊಂಡಿದ್ದರು. ಟೆಂಪೋ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.




