
ಮುಂಬಯಿ: ಶ್ರೀ ರಜಕ ಸಂಘ ಮುಂಬಯಿಯ 87ನೇ ಮಹಾಸಭೆಯು ಜುಲೈ 12ರಂದು ಅಂಧೇರಿ ಪಶ್ಚಿಮದಲ್ಲಿರುವ ಮೊಗವೀರ ಭವನದಲ್ಲಿ ಸಂಘದ ಅಧ್ಯಕ್ಷ ಸಿ.ಎ. ವಿಜಯ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವ ಕಾರ್ಯದರ್ಶಿ ಸುಮಿತ್ರ ಆರ್. ಪಲಿಮಾರ್ ಅವರು ಸಭೆಯನ್ನು ಸ್ವಾಗತಿಸಿದ ನಂತರ, ಶ್ರೀ ರಜಕ ಗುರು ಮಾಚಿದೇವ ಭಜನಾ ಮಂಡಳಿಯ ಮಹಿಳೆಯರ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲನ ಮಾಡಲಾಯಿತು. ಕಾರ್ಯದರ್ಶಿ ಸುಮಿತ್ರ ಪಲಿಮಾರ್ ಅವರು ಗತ ವರ್ಷದ ಮಹಾಸಭೆಯ ವರದಿ ವಾಚನ ಮಾಡಿದ ನಂತರ, ಕೋಶಾಧಿಕಾರಿ ಜಯ ಕುಂದರ್ ಅವರು ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸದಸ್ಯರು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

2026-2027ನೇ ಸಾಲಿಗೆ, ಸಭೆಯಲ್ಲಿ ನೆರೆದ ಸದಸ್ಯರ ಅನುಮತಿಯ ಮೇರೆಗೆ ಶಾಸನಬದ್ಧ ಲೆಕ್ಕ ಪರಿಶೋಧಕರಾಗಿ ಮೆ. ಆರ್.ಕೆ. ಕಾರಂತ್ ಅಂಡ್ ಕಂ. ಚಾರ್ಟರ್ಡ್ ಅಕೌಂಟೆಂಟ್ಸ್, ಮುಂಬಯಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಸಿ.ಎ. ಪ್ರದೀಪ್ ಕುಂದರ್ ಹಾಗೂ ಶ್ರೀಯುತ ಹರೀಶ್ ಯು. ಸಾಲಿಯಾನ್ ಅವರನ್ನು ಆಯ್ಕೆ ಮಾಡಲಾಯಿತು.
ತದನಂತರ 5 ಪ್ರಾದೇಶಿಕ ವಲಯಗಳಿಗೆ ಅಧ್ಯಕ್ಷರನ್ನಾಗಿ ಡೊಂಬಿವಲಿ ವಲಯಕ್ಕೆ ಜಯರಾಜ್ ಬಂಗೇರ, ನವಿಮುಂಬಯಿ ವಲಯಕ್ಕೆ ಸಂತೋಷ್ ಸಾಲಿಯಾನ್, ವಸಾಯಿ ವಲಯಕ್ಕೆ ರಮೇಶ್ ಕುಂದರ್, ವೆಸ್ಟರ್ನ್ ವಲಯಕ್ಕೆ ಪ್ರಸಾದ್ ಸಾಲಿಯಾನ್ ಹಾಗೂ ಸೆಂಟ್ರಲ್ ವಲಯಕ್ಕೆ ಶಂಕರ್ ಸಾಲಿಯಾನ್ ಅವರನ್ನು ನೇಮಕ ಮಾಡಲಾಯಿತು. ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಶುಭ ಡಿ. ಗುಜರನ್ ಹಾಗೂ ಯುವ ರಜಕ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಸಂದೀಪ್ ಸಾಲಿಯಾನ್ ಅವರನ್ನು ಆರಿಸಲಾಯಿತು.
ಶ್ರೀ ರಜಕ ಸಂಘ ಮುಂಬಯಿಯ 2026-28ರ ಅವಧಿಗೆ ಮುಖ್ಯ ಸಮಿತಿಯ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು:
ಅಧ್ಯಕ್ಷರು: ಹರೀಶ್ ವಿ. ಸಾಲಿಯಾನ್
ಉಪಾಧ್ಯಕ್ಷರು: ವಿಶಾಲ್ ಮಡಿವಾಳ್
ಕಾರ್ಯದರ್ಶಿ: ಉಮೇಶ್ ಆರ್. ಸಾಲಿಯಾನ್
ಜೊತೆ ಕಾರ್ಯದರ್ಶಿ: ಪ್ರವೀಣ್ ಪಿ. ಕುಂದರ್
ಕೋಶಾಧಿಕಾರಿ: ಜಯ ಕುಂದರ್
ಜೊತೆ ಕೋಶಾಧಿಕಾರಿ: ಸುರೇಶ್ ಎನ್. ಸಾಲಿಯಾನ್
ಸಮಿತಿ ಸದಸ್ಯರು: ಸುಂದರ್ ಎಚ್. ಮಡಿವಾಳ್, ಸುಮಿತ್ರ ಪಲಿಮಾರ್, ರೋನಕ್ ಕುಂದರ್, ಸುಭಾಷ್ ಸಾಲಿಯಾನ್, ಶ್ರೀನಿವಾಸ್ ಮಡಿವಾಳ್, ದಯಾನಂದ್ ಸಾಲಿಯಾನ್, ಪ್ರಕಾಶ್ ಗುಜರನ್ ಮತ್ತು ಬಲರಾಜ್ ಬಂಗೇರ.
ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ
ಗತ ಶೈಕ್ಷಣಿಕ ವರ್ಷದಲ್ಲಿ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಪದಾಧಿಕಾರಿಗಳು ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಿದರು.

ತದನಂತರ, ಶ್ರೀ ರಜಕ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಕ್ಕೆ ನಿಧಿ ಸಂಗ್ರಹಿಸಿಕೊಟ್ಟ ವೆಸ್ಟರ್ನ್ ವಲಯದ ಅಧ್ಯಕ್ಷ ದಯಾನಂದ್ ಸಾಲಿಯಾನ್, ಉಪಾಧ್ಯಕ್ಷ ಪ್ರಸಾದ್ ಸಾಲಿಯಾನ್ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಸ್ವಾತಿ ಪ್ರಸಾದ್ ಅವರನ್ನು ಸಂಘದ ಅಧ್ಯಕ್ಷ ಸಿ.ಎ. ವಿಜಯ್ ಕುಂದರ್, ಉಪಾಧ್ಯಕ್ಷ ಹರೀಶ್ ವಿ. ಸಾಲಿಯಾನ್, ಕಾರ್ಯದರ್ಶಿ ಸುಮಿತ್ರ ಪಲಿಮಾರ್ ಹಾಗೂ ಕೋಶಾಧಿಕಾರಿ ಸುಮಿತ ಡಿ. ಸಾಲಿಯಾನ್ ಅವರು ಶಾಲು ಹೊದಿಸಿ, ಪುಷ್ಪಗುಚ್ಛ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಶಾರ್ಟ್‌ಪುಟ್, ಡಿಸ್ಕಸ್ ಮತ್ತು ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳನ್ನು ಗೆದ್ದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಶುಭ ದಯಾನಂದ್ ಗುಜರನ್ ಅವರನ್ನು ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕ್ರೀಡಾ ವಿಭಾಗದ ಅಧ್ಯಕ್ಷ ಉಮೇಶ್ ಸಾಲಿಯಾನ್, ಉಪಾಧ್ಯಕ್ಷ ಸುರೇಶ್ ಸಾಲಿಯಾನ್ ಹಾಗೂ ಕ್ರೀಡಾ ಸಲಹೆಗಾರರಾದ ಅಶೋಕ್ ಕುಂದರ್ ಅವರು ಶಾಲು ಹೊದಿಸಿ, ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಸಂಘದ ಅಧ್ಯಕ್ಷ ವಿಜಯ್ ಕುಂದರ್ ಅವರು ಮಾತನಾಡಿ, ಕಳೆದ 15 ವರ್ಷಗಳಿಂದ ಸಂಘದಲ್ಲಿ ಸೇವೆ ಸಲ್ಲಿಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಘದ ಭವಿಷ್ಯಕ್ಕಾಗಿ ಯುವ ಪೀಳಿಗೆಯು ಮುಂದೆ ಬಂದು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮಾರ್ಗದರ್ಶನ ನೀಡಿದರು. ಸಂಘದ ಏಳಿಗೆಗಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸದಸ್ಯರಿಗೆ, ಸಭೆಗೆ ಆಗಮಿಸಿ ಶುಭ ಹಾರೈಸಿದ ಹಿರಿಯ ಸದಸ್ಯರಿಗೆ ಮತ್ತು ತಮ್ಮ ಕಾರ್ಯಕಾಲದಲ್ಲಿ ಸಹಕರಿಸಿದ ಸಮಸ್ತ ಸಮಾಜ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಿದರು.
ಜೊತೆ ಕಾರ್ಯದರ್ಶಿ ರೋನಕ್ ಕುಂದರ್ ಅವರು ಇಡೀ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ಸಿಗೆ ಕಾರಣರಾದ ಎಲ್ಲಾ ರಜಕ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.





