October 17, 2026
Mumbai News Kannada
ತುಳುನಾಡು

ಗುರುಪುರ ಬಂಟರ ಮಾತೃ ಸಂಘ (ರಿ.)13ನೇ ವಾರ್ಷಿಕ ಸಮಾವೇಶ ಹಾಗೂ ನೃತ್ಯ ಸಂಗಮ-2026




​ಬಂಟ ಸಮಾಜ ನನ್ನ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆ, ವಿಶ್ವಾಸವೇ ನನ್ನ ಆಸ್ತಿ: ಡಾ| ಕೆ. ಪ್ರಕಾಶ್ ಶೆಟ್ಟಿ


​ಮಂಗಳೂರು: “ನಾನು ಪ್ರೈವೇಟ್ ಜೆಟ್ ಅನ್ನು ಖರೀದಿಸಿರಬಹುದು, ಆದರೆ ಅದು ನನ್ನ ಜೀವನದ ಸೌಕರ್ಯಕ್ಕಾಗಿ ಮಾತ್ರ. ನನ್ನ ನಿಜವಾದ ಆಸ್ತಿಯೆಂದರೆ ನನ್ನ ಮೇಲೆ ನಂಬಿಕೆ, ಪ್ರೀತಿ ಮತ್ತು ವಿಶ್ವಾಸವನ್ನು ಇಟ್ಟಿರುವ ಬಂಟ ಸಮಾಜ ಎಂದು ಹೆಮ್ಮೆಯಿಂದ ಹೇಳುತ್ತೇನೆ,” ಎಂದು ಡಾ| ಕೆ. ಪ್ರಕಾಶ್ ಶೆಟ್ಟಿಯವರು ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘದ 13ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
​”ಗುರುಪುರ ಬಂಟರ ಮಾತೃ ಸಂಘದ ಕನಸಿನ ಕೂಸಾದ ಬಂಟರ ಭವನ ನಿರ್ಮಾಣದಲ್ಲಿ ನಾನೂ ಒಬ್ಬ ಸದಸ್ಯನಾಗಿ ಪ್ರಾಮಾಣಿಕವಾದ ಸೇವೆಯನ್ನು ಮಾಡುವುದರ ಮೂಲಕ ಭವನ ನಿರ್ಮಾಣ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ 60ನೇ ಹುಟ್ಟುಹಬ್ಬ 2019ರಲ್ಲಿ ನಡೆದಾಗ ಆ ಕಾರ್ಯಕ್ರಮದಲ್ಲಿ ಶ್ರಮಿಸಿದ ಗುರುಪುರ ಬಂಟರ ಮಾತೃ ಸಂಘದ ಕಾರ್ಯವು ಗಮನಾರ್ಹವಾದುದು. ನಂತರ ಪ್ರತೀ ವರ್ಷ ಡಿಸೆಂಬರ್ 25ರಂದು ನಡೆಯುವ ‘ನೆರವು’ ಯೋಜನೆಯಲ್ಲಿ ಗುರುಪುರ ಬಂಟರ ಮಾತೃ ಸಂಘವು ಎಲ್ಲರಿಗಿಂತ ಮೊದಲು ಬಂದು ತನಗಿತ್ತ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿರುವುದು ಶ್ಲಾಘನೀಯ. ಒಂದು ಕೋಟಿಯಿಂದ ಆರಂಭವಾದ ನನ್ನ ಈ ‘ನೆರವು’ ಯೋಜನೆಯು ಇಂದು 10 ಕೋಟಿ ರೂಪಾಯಿಗಳವರೆಗೂ ತಲುಪಿರುವುದು ನಿಮ್ಮೆಲ್ಲರ ಆಶೀರ್ವಾದ, ಭಗವಂತನ ಕೃಪೆ ಮತ್ತು ನನ್ನ ತಂದೆ-ತಾಯಿಯವರ ಆಶೀರ್ವಾದದಿಂದ,” ಎಂದು ಅವರು ತಿಳಿಸಿದರು.
​ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, “13 ವರ್ಷಗಳಲ್ಲಿ ಗುರುಪುರ ಬಂಟರ ಮಾತೃ ಸಂಘದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಅವರ ಕನಸಿನ ಬಂಟರ ಭವನವು ಪ್ರಕಾಶಣ್ಣನಂತಹ ಮಹಾದಾನಿಗಳಿಂದ ಉತ್ತಮ ರೀತಿಯಲ್ಲಿ ಮೂಡಿಬರಲಿ,” ಎಂದು ಹಾರೈಸಿದರು.
​ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಮಾತನಾಡಿ, “ನಾನು ಇಂದು ಅತ್ಯುತ್ತಮವಾದ ಸನ್ಮಾನ ಸಮಾರಂಭವನ್ನು ಕಂಡೆ. ನಾಡು ಕಂಡ ಶ್ರೇಷ್ಠ ಮಹಾದಾನಿಗಳಲ್ಲಿ ಒಬ್ಬರಾದ ಪ್ರಕಾಶಣ್ಣನಿಗೆ ಮಾಡಿದ ಈ ಸನ್ಮಾನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಮುದಾಯಗಳಿಗೆ ಮಾಡಿದ ಗೌರವ ಎಂದು ಭಾವಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಬಂಟ ಸಮಾಜದ ಪಾತ್ರ ಪ್ರಶಂಸನೀಯ,” ಎಂದರು.
​ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ| ಎಂ. ಮೋಹನ್ ಆಳ್ವ ಅವರು ಮಾತನಾಡಿ, “ಶಿಕ್ಷಣ ಕ್ಷೇತ್ರಕ್ಕೆ ಗುರುಪುರ ಬಂಟರ ಮಾತೃ ಸಂಘವು ನೀಡುತ್ತಿರುವ ಸೇವೆ ಶ್ಲಾಘನೀಯ. ನನ್ನ ಶಿಕ್ಷಣ ಸಂಸ್ಥೆಯಲ್ಲಿ ಓದಿದ, ಕಡು ಬಡತನ ಹಾಗೂ ತಾಯಿಯ ನಿಧನದ ಶೋಕದ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕು| ದಿಶಾ ಪೂಜಾರಿ ಅವರನ್ನು ಸನ್ಮಾನಿಸುವುದರ ಮೂಲಕ ನಮ್ಮ ಸಂಸ್ಥೆಯ ಕೀರ್ತಿಯು ಇನ್ನಷ್ಟು ಎತ್ತರಕ್ಕೇರಿತು. ಗುರುಪುರ ಬಂಟರ ಮಾತೃ ಸಂಘದ ಈ ಕಾರ್ಯವು ಅತ್ಯಂತ ಪ್ರಶಂಸನೀಯ,” ಎಂದು ನುಡಿದರು.
​ವೇದಿಕೆಯಲ್ಲಿ ದ.ಕ. ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡುಬಿದ್ರಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಮಂಗಳೂರು ನಗರ ಉತ್ತರ ವಿಧಾನಸಭಾ ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, Hubli-Dharwad ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಯುವ ಉದ್ಯಮಿ ಈಶ್ವರ್ ಶೆಟ್ಟಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ, ಬೆಂಗಳೂರು ಉದ್ಯಮಿ ರವೀಂದ್ರನಾಥ ಮಾರ್ಲ, ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
​ಸುದರ್ಶನ್ ಶೆಟ್ಟಿ ಪೆರ್ಮಂಕಿ ಹೊಸಮನೆ ಅವರು ಸ್ವಾಗತಿಸಿ, “ಬಂಟ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾದ ಪ್ರಕಾಶ್ ಶೆಟ್ಟಿ ಅವರ ಸೇವಾ ಕಾರ್ಯಗಳು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಬಂಟ ಸಮಾಜ ಮತ್ತು ವಿವಿಧ ಸಮಾಜದ ಬಂಧುಗಳಿಗೆ ನೆರವಾಗುತ್ತಿರುವ ಐಕಳ ಹರೀಶ್ ಶೆಟ್ಟಿ ಅವರ ಸೇವಾ ಕಾರ್ಯದೊಂದಿಗೆ ನಾವು ಸದಾ ಇರುತ್ತೇವೆ. ಇಂದು ವೇದಿಕೆಯಲ್ಲಿ ಎಲ್ಲಾ ಸಾಧಕರು ಮತ್ತು ಗಣ್ಯರು ನಮ್ಮೊಂದಿಗೆ ಉಪಸ್ಥಿತರಿರುವುದು ಹೆಮ್ಮೆಯ ವಿಷಯ,” ಎಂದರು.
​ಚಂದ್ರಹಾಸ ಶೆಟ್ಟಿ ನಾರಳ ಧನ್ಯವಾದ ಸಮರ್ಪಿಸಿದರು. ವೇಣುಗೋಪಾಲ ಶೆಟ್ಟಿ ಮೂಡುಬಿದ್ರಿ ಹಾಗೂ ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಕಾರ್ಯಕ್ರಮ ನಿರೂಪಿಸಿದರು.


​ಸಮಾಜದ ಸೇವೆಗಳು ಮಾತಿನಿಂದಲ್ಲ, ಸೇವಾ ಕಾರ್ಯಗಳಿಂದ ನಡೆಯಬೇಕು: ಐಕಳ ಹರೀಶ್ ಶೆಟ್ಟಿ


​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, “ಯಾವುದೇ ಸಂಘವು ಸಕ್ರಿಯವಾದಾಗ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಇದಕ್ಕೆ ಗುರುಪುರ ಬಂಟರ ಸಂಘವೇ ಸಾಕ್ಷಿ. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಗುರುಪುರ ಬಂಟರ ಸಂಘವು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದು, ಜಗತ್ತಿನಲ್ಲೇ ಒಂದು ಶ್ರೇಷ್ಠ ಸಂಘವಾಗಿ ಮೂಡಿಬಂದಿದೆ. ಪಿಯುಸಿಯಲ್ಲಿ ಪ್ರಥಮ ರ‍್ಯಾಂಕ್ ವಿಜೇತೆ ದಿಶಾ ಪೂಜಾರಿ ಅವರನ್ನು ಸನ್ಮಾನಿಸಿರುವುದು ಗುರುಪುರ ಬಂಟರ ಸಂಘದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಮಾಜದ ಸೇವೆಗಳು ಕೇವಲ ಮಾತಿಗೆ ಸೀಮಿತವಾಗದೆ ಕೆಲಸ ಕಾರ್ಯಗಳ ಮೂಲಕ ಸಾಬೀತಾಗಬೇಕು,” ಎಂದರು.



Related posts

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ 50ನೇ ವರ್ಷದ ಸಂಭ್ರಮಾಚರಣೆ

Mumbai News Desk

ಕಾಪು ಲೈಟ್ ಹೌಸ್ ರೆಸಾರ್ಟ್ ನಲ್ಲಿ ಯುವವಾಹಿನಿ (ರಿ.) ಕಾಪು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಮೂಲ್ಕಿ: ‘ಹೊಸ ಅಂಗಣ’ದ ‘ತಿಂಗಳ ಬೆಳಕು’ ಕಾರ್ಯಕ್ರಮ, ಪೋಸ್ಟ್‌ಮ್ಯಾನ್ ಪ್ರಕಾಶ್ ಕೆ. ಸಾಲ್ಯಾನ್‌ರಿಗೆ ಸನ್ಮಾನ

Mumbai News Desk

ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆ

Mumbai News Desk

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

Mumbai News Desk

ಮುಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ರಾಜ್ಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಮನೆಗೆ ಭೇಟಿ: ಗೌರವ ಸಮರ್ಪಣೆ

Mumbai News Desk