
ಕುಂದರ್ ಮೂಲಸ್ಥಾನ ಸಭಾ, ಮುಂಬಯಿ, ಇದರ 90 ನೇ ವಾರ್ಷಿಕ ಮಹಾ ಸಭೆಯು ಅಗಸ್ಟ್ 30 ರಂದು ಹೇಮಾನಂದ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮ ಎಂ.ವಿ.ಎಂ ಶಾಲೆಯಲ್ಲಿ ಜರುಗಿತು.
ದೇವತಾ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ನೀಲಾಧರ ಕುಂದರ್ ಉಪಸ್ಥಿತರಿದ್ದ ಸರ್ವರನ್ನೂ ಸ್ವಾಗತಿಸಿದರು. ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಸಂತಿ ಯು ಸಾಲ್ಯಾನ್ ಸುತ್ತೋಲೆಯನ್ನು ಓದಿ ಹೇಳಿದರು .
ಪ್ರಧಾನ ಕಾರ್ಯದರ್ಶಿಯವರು 89 ನೇ ವಾರ್ಷಿಕ ಮಹಾ ಸಭೆಯ ಟಿಪ್ಪಣಿ ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ವಾಚಿಸಿದರು. ವರದಿಯಲ್ಲಿ ನಮೂದಿಸಿದಂತೆ 2024-25 ರ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಹಾಗೂ ಉನ್ನತ ಪರೀಕ್ಷೆಯಲ್ಲಿ ಅತಿ ಉತ್ತಮ ಅಂಕಗಳಿಸಿದ 65 ಮಂದಿ ಕುಂದರ್ ಬಂಧುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಪ್ರಧಾನ ಕೋಶಾಧಿಕಾರಿ ಸಂತೋಷ್ ಐ ಸುವರ್ಣರು 31-3-2026 ರಂದು ಅಂತ್ಯಗೊಂಡ ವಾರ್ಷಿಕ ಆಯ-ವ್ಯಯ ಹಾಗೂ ಆಸ್ತಿ/ಸ್ವತ್ತುಗಳ ವಿವರವನ್ನು ಸಭೆಯ ಮುಂದಿಟ್ಟರು.
ಗೌರವ ಅಧ್ಯಕ್ಷರಾದ ಲೋಕನಾಥ್ ಕುಂದರ್ ಮಾತನಾಡುತ್ತಾ ಕುಂದರ್ ಮೂಲಸ್ಥಾನ 1892 ರಲ್ಲಿ ಹೆಜಮಾಡಿ ಗುಂಡಿಯಲ್ಲಿ ಸ್ಥಾಪನೆಯಾಗಿ ಕಳೆದ 134 ವರ್ಷಗಳಿಂದ, ನಾಗಬ್ರಹ್ಮ ದೇವರ ಹಾಗೂ ಮೂಲ ಮೈಷಂದಾಯ ಪರಿವಾರ ದೇವರಿಗೆ ಪೂಜೆ ಪುರಸ್ಕಾರ ಮಾಡುತ್ತಾ ಬಂದಿರುತ್ತದೆ, ಪ್ರತಿ ವರ್ಷವೂ ಕುಂದರ್ ಬಂಧುಗಳು ತಮ್ಮ ಕುಟುಂಬ ಸಮೇತ ಮೂಲಸ್ಥಾನಕ್ಕೆ ಬಂದು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಗಣೇಶ್ ಕೆ. ಕಾಂಚನ್, ಜೊತೆ ಕಾರ್ಯದರ್ಶಿ ನಾಗೇಶ ಕುಂದರ್, ಪುರಂದರ ಕೆ. ಕಾಂಚನ್, ಪುರುಷೋತ್ತಮ ಕೆ. ಕಾಂಚನ್, ಸದಾಶಿವ ಕುಂದರ್, ನಿರಂಜನ ಪುತ್ರನ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವೇದಾ ಕೆ. ಪುತ್ರನ್, ಉಪಾಧ್ಯಕ್ಷೆ ಶ್ರೀಮತಿ ಸುನೀತಿ ಬಂಗೇರ, ಕೋಶಾಧಿಕಾರಿ ಗೌರಿ ಪನಿಯಾಡಿಯವರು ಮೂಲಸ್ಥಾನದ ಸರ್ವಾಂಗೀಣ ಅಭಿವೃದ್ಧಿಗಾಗಿ ಸೂಕ್ತ ಸಲಹೆ ಸೂಚನೆ ನೀಡಿದರು.
ಅಧ್ಯಕ್ಷತೆ ವಹಿಸಿದ ಹೇಮಾನಂದ ಕುಂದರ್ ಮಾತನಾಡುತ್ತಾ, ಕುಂದರ್ ಮೂಲಸ್ಥಾನದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯವೆಸಗಬೇಕೆಂದು ತಿಳಿಸಿದರು. ಕುಂದರ್ ಮೂಲಸ್ಥಾನಕ್ಕೆ ಉದಾರ ಧನಸಹಾಯ ನೀಡಿದ ಎಲ್ಲಾ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ನೀಲಾಧರ ಕುಂದರ್ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.




