32 C
Mumbai
September 29, 2026
Mumbai News Kannada
ಸುದ್ದಿ

ಇತಿಹಾಸ ಪ್ರಸಿದ್ಧ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪೂರ್ವಭಾವಿ ಸಭೆ



ದೈವದ ನುಡಿ, ಭಕ್ತರ ಸಿರಿ ಒಂದಾಗಿ ನುಡಿಸಿರಿಯಾಗಲಿ; ಪುಣ್ಯಕಾರ್ಯ ಸಾಂಗವಾಗಿ ನಡೆಯಲಿ: ಪ್ರವೀಣ್ ಭೋಜ ಶೆಟ್ಟಿ

ಮುಂಬಯಿ: ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಜೀರ್ಣೋದ್ಧಾರ ಮುಂಬಯಿ ಸಮಿತಿಯ ಪೂರ್ವಭಾವಿ ಸಭೆಯು ಸೆಪ್ಟೆಂಬರ್ 27ರ ಭಾನುವಾರ ಬಾಂದ್ರಾ ಪೂರ್ವದ ಬಿಕೆಸಿ ಅರ್ಬನ್ ಪ್ಲಾಜಾ ಕಟ್ಟಡದ ಉಡುಪಿ 2 ಮುಂಬೈ ಹೋಟೆಲ್ ಸಭಾಂಗಣದಲ್ಲಿ ಮುಂಬಯಿ ಸಮಿತಿಯ ಅಧ್ಯಕ್ಷರಾದ ಪುತ್ತೂರು ಬಾಳಿಕೆ ಮನೆ ವಿಜಿತ್ ಟಿ. ಶೆಟ್ಟಿಯವರ ಗೌರವ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮುಕ್ತೇಸರರಾದ ಗುತ್ತಿನಾರ್ ಸುಧಾಕರ್ ಶೆಟ್ಟಿ ಮತ್ತು ಉದ್ಯಮಿ ಪಣಿಕೆರೆ ಮನೆ ಜಗದೀಶ ಪ್ರಭು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, “ನಮ್ಮ ನಾಡಿನಲ್ಲಿ ದೇವರಿಗಿಂತ ದೈವಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಆ ದೈವಗಳ ನಂಬಿಕೆಯ ಫಲವೇ ನಮ್ಮೆಲ್ಲರನ್ನು ಯಶಸ್ಸಿನತ್ತ ಮುನ್ನಡೆಸಿದೆ. ಈ ಸಭಾಂಗಣದಲ್ಲಿ ಸೇರಿರುವ ಭಕ್ತರನ್ನು ಕಂಡಾಗ ಒಬ್ಬೊಬ್ಬರಿಂದ ಮೂರು ಕೋಟಿ ರೂಪಾಯಿ ಸಂಗ್ರಹವಾಗಬಹುದು; ಆದರೆ ಈ ಕಾರ್ಯಕ್ಕೆ ಎಲ್ಲಾ ಭಕ್ತರ ಸಣ್ಣ-ದೊಡ್ಡ ದೇಣಿಗೆ ಸಂಗ್ರಹಗೊಂಡರೆ ಮಾತ್ರ ಪುಣ್ಯಕಾರ್ಯ ಸಾರ್ಥಕವಾಗುತ್ತದೆ. ಈ ಕ್ಷೇತ್ರದಲ್ಲಿ ನಡೆಯುವ ಕೋಲವನ್ನು ನಾನು ಕಣ್ಣಾರೆ ಕಂಡಿದ್ದೇನೆ, ಅದು ಅಪಾರ ಕಾರಣಿಕ ಶಕ್ತಿಯುಳ್ಳದ್ದು. ಈ ಭೂಮಿಗೆ ಬಂದ ಮೇಲೆ ಒಂದೋ ಕೊಟ್ಟು ಹೋಗಬೇಕು, ಇಲ್ಲವೇ ಬಿಟ್ಟು ಹೋಗಬೇಕು ಎಂಬ ಮಾತಿದೆ. ಬಿಟ್ಟು ಹೋಗುವುದು ಪರಿವಾರಕ್ಕೆ, ಕೊಟ್ಟು ಹೋಗುವುದು ಸಮಾಜಕ್ಕೆ. ಸಮಾಜಕ್ಕೆ ಉತ್ತಮ ಸೇವೆ ನೀಡಿದರೆ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಆದ್ದರಿಂದ ಈ ದೈವದ ಪುಣ್ಯಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ದೈವದ ನುಡಿ ಮತ್ತು ಭಕ್ತರ ಸಿರಿ ಒಂದಾಗಿ ನುಡಿಸಿರಿಯಾಗಲಿ, ಯಾವುದೇ ವಿಘ್ನಗಳಿಲ್ಲದೆ ಪುಣ್ಯಕಾರ್ಯ ಸಾಂಗವಾಗಿ ನೆರವೇರಲಿ,” ಎಂದು ಹಾರೈಸಿದರು.

ಪಯ್ಯಾಡಿ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಪಿ.ವಿ. ಶೆಟ್ಟಿ ಮಾತನಾಡಿ, “ಕ್ಷೇತ್ರದಲ್ಲಿ ಧಾರ್ಮಿಕ ಸೇವಾಕಾರ್ಯಗಳೊಂದಿಗೆ ಶೈಕ್ಷಣಿಕ ಸೇವಾಕಾರ್ಯಗಳೂ ನಡೆಯಬೇಕು. ಇದರಿಂದ ಊರು ಅಭಿವೃದ್ಧಿ ಹೊಂದಿ, ಪರಿಸರದ ಜನರಿಗೆ ಅನುಕೂಲವಾಗುತ್ತದೆ,” ಎಂದರು.

ಮುಂಬಯಿಯ ಪ್ರತಿಷ್ಠಿತ ಕಬೆತ್ತಿಗುತ್ತು ಸಿ.ಎ. ಸದಾಶಿವ ಶೆಟ್ಟಿ ಮಾತನಾಡಿ, “ದೈವದ ಶಕ್ತಿ ಮತ್ತು ಆರಾಧನೆಯ ಮಹತ್ವ ನಮಗೆಲ್ಲ ತಿಳಿದಿದೆ; ನಾವೆಲ್ಲರೂ ಒಗ್ಗೂಡಿ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳೋಣ,” ಎಂದು ಕರೆ ನೀಡಿದರು.

ಪಣಿಕೆರೆ ಮನೆ ಜಗದೀಶ ಪ್ರಭು ಮಾತನಾಡಿ, “ಎಲ್ಲಾ ಭಕ್ತರ ಸಹಕಾರದಿಂದ ಈ ಪುಣ್ಯದ ಕಾರ್ಯವನ್ನು ದೈವವೇ ಮುನ್ನಡೆಸಲಿ; ನಾವೆಲ್ಲರೂ ಒಗ್ಗಟ್ಟಿನಿಂದ ಅದರ ಪ್ರಸಾದಕ್ಕೆ ಪಾತ್ರರಾಗೋಣ,” ಎಂದರು.

ಪುತ್ತೂರು ಬಾಳಿಕೆಯ ರಾಮದಾಸ್ ಶೆಟ್ಟಿ ಮಾತನಾಡಿ, “ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ನೆರೆದಿರುವುದು ದೈವದ ಕಾರಣಿಕ ಶಕ್ತಿಗೆ ಸಾಕ್ಷಿ. ಮುಂಬೈ ನಗರದಿಂದ ಪ್ರತಿ ವರ್ಷ ದೈವದ ಸೇವಾಕಾರ್ಯಗಳಲ್ಲಿ ಭಾಗವಹಿಸುವ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಈ ಪುಣ್ಯಕಾರ್ಯದಲ್ಲಿ ಸೇವೆ ಮಾಡುವ ಭಾಗ್ಯ ನಮಗೆ ದೊರೆತಿದ್ದು, ಅದನ್ನು ಸಮರ್ಥವಾಗಿ ಸದ್ವಿನಿಯೋಗಪಡಿಸಿಕೊಳ್ಳಬೇಕು,” ಎಂದರು.

ಸಮಾರಂಭದಲ್ಲಿ ಊರಿನ ಸಮಿತಿಯ ಅಧ್ಯಕ್ಷರಾದ ದೆಪ್ಪುಣಿಗುತ್ತು ಶಿವಚಂದ್ರ ಶೆಟ್ಟಿ, ಮುಂಬಯಿಯ ಹಿರಿಯ ಕಸ್ಟಮ್ಸ್ ಅಧಿಕಾರಿ ಮೂಡುಮನೆ ಧರ್ಮಪಾಲ್ ಶೆಟ್ಟಿ, ಹಿರಿಯ ವೈದ್ಯ ಡಾ. ಸದಾನಂದ ಶೆಟ್ಟಿ, ಆರ್ಬಿಟ್ (Orbit) ಆಸ್ಪತ್ರೆಯ ಡಾ. ದಿನೇಶ್ ಶೆಟ್ಟಿ, ಬಾಂದ್ರಾ ಜನತಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶರದ್ ಕೋಟ್ಯಾನ್, ಔರಂಗಾಬಾದ್‌ನ ಖ್ಯಾತ ಉದ್ಯಮಿ ಬಟಾರ ಬಾಳಿಕೆ ಮನೆ ಕಿಶೋರ್ ಶೆಟ್ಟಿ, ಊರಿನ ಸಮಿತಿಯ ಕಾರ್ಯಾಧ್ಯಕ್ಷರಾದ ತಿಂಗೋಳೆ ಮನೆ ಜನಾರ್ದನ ಕೆ. ಶೆಟ್ಟಿ, ಪುತ್ತೂರು ಬಾವದ ರಾಜೀವನ್ ದಾಸ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ಬರ್ಕೆ ತೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಂಬಯಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಭೋಜ ಶೆಟ್ಟಿ ಹೊಸಮನೆ ಗಣ್ಯರನ್ನು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಉತ್ತಮ್ ಪೂಜಾರಿ ಮೈಲೊಟ್ಟು ಹಾಗೂ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು. ರಿದ್ದಿ ಆರ್. ಶೆಟ್ಟಿ ತಿಂಗೋಳೆ ಮನೆ ಪ್ರಾರ್ಥನೆ ನೆರವೇರಿಸಿದರು.

ಗೌರವ ಉಪಸ್ಥಿತರಾಗಿ ಉದ್ಯಮಿ ವೇಣುಗೋಪಾಲ ರೈ ಪಂಜಿಮೊಗರು ಗುತ್ತು, ಜಯಶೀಲ ಶೆಟ್ಟಿ ಪುತ್ತೂರು ಬಾಳಿಕೆ ಮನೆ, ಉದ್ಯಮಿಗಳಾದ ದರ್ಶನ್ ಸಿ. ಶೆಟ್ಟಿ ದಾದರ್, ಗುಣೇಶ್ ಶೆಟ್ಟಿ ಕೊಲಕಾಡಿ, ಕಿಶೋರ್ ಶೆಟ್ಟಿ ಕಾನೊಟ್ಟು ನಂದಳಿಕೆ, ಹರೀಶ್ ಶೆಟ್ಟಿ ಕಾನೊಟ್ಟು ನಂದಳಿಕೆ, ದಿವಾಕರ್ ಶೆಟ್ಟಿ ದೊಂಬಿವಲಿ, ದಯಾನಂದ ಶೆಟ್ಟಿ ಉಲ್ಲಾಸನಗರ, ರಾಜೀವ್ ಭಂಡಾರಿ ದೊಂಬಿವಲಿ, ಪ್ರಭಾಕರ ಶೆಟ್ಟಿ ದೊಂಬಿವಲಿ, ಉದಯ ಭಂಡಾರಿ ದೊಂಬಿವಲಿ, ಸುಕುಮಾರ್ ಎನ್. ಶೆಟ್ಟಿ ದೊಂಬಿವಲಿ, ಶಂಕರ ಶೆಟ್ಟಿ ದೊಂಬಿವಲಿ, ಮಹೇಶ್ ಶೆಟ್ಟಿ ದೊಂಬಿವಲಿ, ಸಂತೋಷ್ ಶೆಟ್ಟಿ ದೊಂಬಿವಲಿ, ಸುಬ್ಬಣ್ಣ ಶೆಟ್ಟಿ ಕಲ್ಯಾಣ್, ಹೇಮಂತ್ ಶೆಟ್ಟಿ ಕಾವೂರು ಗುತ್ತು, ಪ್ರಕಾಶ್ ಶೆಟ್ಟಿ ಪೇಟೆ ಮನೆ, ಗಂಗಾಧರ್ ಅಮೀನ್ ಕರ್ನಿರೆ, ಪ್ರಸಾದ್ ಶೆಟ್ಟಿ ಅಂಗಡಿಗುತ್ತು ಮುಂಡ್ಕೂರು, ನರಸಿಂಹ ಶೆಟ್ಟಿ ಅಂಗಡಿಗುತ್ತು ಮುಂಡ್ಕೂರು, ವಿಜಯ ಶೆಟ್ಟಿ ಮುಂಬಯಿ (ನಾಲದೆ ಮನೆ), ಸುಶೀನ್ ಶೆಟ್ಟಿ ಪಣಿಯೂರು ಗುತ್ತು, ಸುಕುಮಾರ್ ಶೆಟ್ಟಿ ಪಣಿಯೂರು ನಡುಮನೆ, ಪ್ರಶಾಂತ್ ಭೋಜ ಶೆಟ್ಟಿ ಬಾಳೆಹಿತ್ಲು, ಸದಾಶಿವ ಕರ್ಕೇರ ನಡಿಕೊಪ್ಪಲ, ಯತೀಶ್ ಕೋಟ್ಯಾನ್ ನಡಿಬೆಟ್ಟು ಸಾನದಮನೆ, ವಿಜಯಕುಮಾರ್ ಶೆಟ್ಟಿ ಮೈಲೊಟ್ಟು, ನಾಲದೆ ಮನೆ ಸುಧೀರ್ ಶೆಟ್ಟಿ, ತಿಮಿರುಗುತ್ತು ರವಿಶೆಟ್ಟಿ, ಬಾಳೆಹಿತ್ಲು ಮಾಧವ ಶೆಟ್ಟಿ, ಪದ್ಮನಾಭ ಪಂಬದ, ಕರುಣಾಕರ ಪೂಜಾರಿ, ಉಮೇಶ್ ಪೂಜಾರಿ ಮೈಲೊಟ್ಟು, ಮುಲುಂಡ್ ಗುರುಪ್ರಸಾದ್ ಹೋಟೆಲ್‌ನ ಶೇಖರ್ ಶೆಟ್ಟಿ, ಥಾಣೆ ಯುವರ್ ಹೋಟೆಲ್‌ನ ಯೋಗೀಶ್ ಶೆಟ್ಟಿ, ಸದಾನಂದ ಶೆಟ್ಟಿ ಬಾಳೆಹಿತ್ಲು, ತೋಕೂರು ಗುತ್ತು ಸುರಪಾಲ್ ಶೆಟ್ಟಿ ಮತ್ತು ಸಹೋದರರು, ದಿವಾಕರ ಪೂಜಾರಿ ನಡಿಕೊಪ್ಪಲ, ಸಂತೋಷ್ ರಾಮಣ್ಣ ಶೆಟ್ಟಿ, ಮೋಹನ ಕೂಸ ಪೂಜಾರಿ, ಕರುಣಾಕರ ಶೆಟ್ಟಿ ದೆಪ್ಪುಣಿಗುತ್ತು, ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಜಗದೀಶ ಶೆಟ್ಟಿ ದೆಪ್ಪುಣಿಗುತ್ತು, ಪ್ರಸಾದ್ ಶೆಟ್ಟಿ ದೆಪ್ಪುಣಿಗುತ್ತು, ಅಜಯ್ ಶೆಟ್ಟಿ ದೆಪ್ಪುಣಿಗುತ್ತು, ಮಹಾಪೆ ಹೋಟೆಲ್ ಸಾಯಿ ಸಹರ ಇನ್‌ನ ರವಿ ಶೆಟ್ಟಿ, ಸುಭಾಷ್ ಶೆಟ್ಟಿ ದೆಪ್ಪುಣಿಗುತ್ತು, ಅಶೋಕ್ ಶೆಟ್ಟಿ ಮೂಡುಮನೆ ಮುಂತಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಊರಿನ ಭಕ್ತರಾದ ದಿವಾಕರ್ ಶೆಟ್ಟಿ ಇಂದ್ರಾಳಿ, ಸದಾಶಿವ ಕರ್ಕೇರ, ರತ್ನಾಕರ್ ಶೆಟ್ಟಿ ಮತ್ತಿತರರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಊರ-ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಧಾರ್ಮಿಕ ಸೇವೆಯೊಂದಿಗೆ ಊರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಮಹತ್ವ: ಗುತ್ತಿನಾರ್ ಸುಧಾಕರ್ ಶೆಟ್ಟಿ

ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮುಕ್ತೇಸರರಾದ ಗುತ್ತಿನಾರ್ ಸುಧಾಕರ್ ಶೆಟ್ಟಿ ಮಾತನಾಡಿ, “ಈ ಕ್ಷೇತ್ರದಲ್ಲಿ ಹಲವು ಗಣ್ಯರು ಮುಕ್ತೇಸರರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 51 ವರ್ಷಗಳಿಂದ ಸಾಮಾನ್ಯ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಮುಕ್ತೇಸರರನ್ನಾಗಿ ಆಯ್ಕೆ ಮಾಡಿದಾಗ ಮನಸ್ಸಿನಲ್ಲಿ ಕೊಂಚ ಭಯವಿತ್ತು. ಆದರೆ ದೈವದ ಸನ್ನಿಧಿಯಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ದೈವವೇ ಧೈರ್ಯ ತುಂಬಿದೆ. ನಾವು ಯಾರ ಬಳಿಯೂ ಹಣ ಕೇಳುವುದಿಲ್ಲ; ನೀವು ಭಕ್ತಿಯಿಂದ ಸೇವೆ ಸಲ್ಲಿಸಿ, ನಿಮ್ಮನ್ನು ಅಭಿವೃದ್ಧಿಪಡಿಸುವ ಶಕ್ತಿ ನಮ್ಮ ದೈವಕ್ಕಿದೆ. ಇಲ್ಲಿ ನೆರೆದಿರುವ ಎಲ್ಲಾ ಭಕ್ತರು ದೈವದ ಮೇಲಿನ ಅಚಲ ನಂಬಿಕೆ ಮತ್ತು ಭಕ್ತಿಯಿಂದಲೇ ಒಗ್ಗೂಡಿದ್ದಾರೆ. ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಊರಿನ ಸಮಗ್ರ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಸಮಿತಿಯ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು,” ಎಂದರು.

ನಡಿಬೆಟ್ಟುದ ಜುಮಾದಿ: ಕರೆದು ಮಾತನಾಡುವ ಕಾರಣಿಕ ಶಕ್ತಿಯ ದೈವ

ನಡಿಬೆಟ್ಟು ಶ್ರೀ ಧೂಮಾವತಿ ದೈವವು ಕಾರ್ನಾಡು ಬೀದಿಸಾನದಿಂದ ಅತಿಕಾರಿಬೆಟ್ಟು ಗ್ರಾಮದ ಓಡಿಜಾರು ಮತ್ತು ಬಜ್ಜೆಯಿ ದುಗ್ಗ ಎಂಬಿಬ್ಬರು ಮೂರ್ತೆದಾರರ ಭಕ್ತಿಗೆ ಒಲಿದು, ಅತಿಕಾರಿಬೆಟ್ಟು ಗ್ರಾಮದ ನಾಲದಡಿ ಉಂಬು ಚೌಟರ ನೆಲದಲ್ಲಿ ಪುತ್ತೂರು ಬಾಳಿಕೆ ಮನೆಯ ಸತ್ಯವಾದಿ ಮೈಂದ ಶೆಟ್ಟಿಪಾಲರ ಮದಿಪಿಗೆ ತಲೆಬಾಗಿ ನೆಲೆನಿಂತಿತು. ಪುತ್ತೂರು ಬಾವದಲ್ಲಿ ತನ್ನ ಅಗಾಧ ಕಲೆ-ಕಾರಣಿಕಗಳನ್ನು ಪ್ರದರ್ಶಿಸಿ ರಾಜನ್ ದೈವವಾಗಿ ಮಾನ್ಯತೆ ಪಡೆದು, ಅತಿಕಾರಿಬೆಟ್ಟು ಗ್ರಾಮದ ಅತಿಕಾಯ ಎಂಬ ಅರಸನನ್ನು ಸಂಹರಿಸಿ, “ಪಾಲೆರ್ದು ಪಡ್ಡಾಯಿ, ತೋಡುರ್ದು ಮೂಡಾಯಿ ನಡುಜಾಗವೇ ನಡಿಬೆಟ್ಟು” ಎಂದು ನಿರ್ಣಯಿಸಿತು.

ಹದಿನಾರು ಮನೆತನಗಳವರನ್ನು ಒಗ್ಗೂಡಿಸಿ, ಊರನ್ನು ಎಡಬಲದಲ್ಲಿ ನಿಲ್ಲಿಸಿಕೊಂಡು, ಅತಿಕಾರಿಬೆಟ್ಟು ಗ್ರಾಮದಲ್ಲಿ “ದೈವಲ ಯಾನೆ, ದೇವರ್ಲ ಯಾನೆ” ಎಂದು ವಿರಾಜಮಾನವಾಯಿತು. ಬೆಳಗ್ಗಿನ ತೀರ್ಥ-ಜಲ ಪುತ್ತೂರು ಬಾಳಿಕೆ ಮನೆತನದಿಂದ, ಸಂಜೆಯ ಜಲ ನಾಲದೆ ಚೌಟರ ಮನೆತನದಿಂದ ಎಂದು ಗೊತ್ತುಪಡಿಸಿ, ಗಡಿಪತ್ತಿ ಭಾರವನ್ನು (ಗುತ್ತಿನಾರ್) ದೆಪ್ಪುಣಿಗುತ್ತು ಮನೆತನಕ್ಕೆ ವಹಿಸಿತು. ಸಾನದ ಮನೆ ಓಡಿಜಾರು ಹಾಗೂ ಪುತ್ತೂರು ಬಾಳಿಕೆ ಮನೆ ಮೈಂದ ಶೆಟ್ಟಿಯವರ ಹೆಸರನ್ನು ಚಂದ್ರ-ಸೂರ್ಯರಿರುವವರೆಗೂ ಮೆರೆಸುವ ವರ ನೀಡಿ, ಮೈಂದ ಶೆಟ್ಟಿ ಹಾಗೂ ಅವರ ಧರ್ಮಪತ್ನಿಯ ಪ್ರತಿರೂಪವನ್ನು ತನ್ನ ಮಂಚಾವಿನಲ್ಲಿ ಪ್ರತಿಷ್ಠಾಪಿಸಿಕೊಂಡಿತು. ಆ ಪ್ರತಿರೂಪವನ್ನು ದರ್ಶಿಸದೆ, ಓಡಿಜಾರು ಮತ್ತು ಮೈಂದ ಶೆಟ್ಟಿಪಾಲರ ಹೆಸರನ್ನು ಸ್ಮರಿಸದೆ ನಡಿಬೆಟ್ಟು ದೈವಸ್ಥಾನದಲ್ಲಿ ದರ್ಶನವಾಗಲಿ, ನೇಮೋತ್ಸವವಾಗಲಿ ನಡೆಯುವುದಿಲ್ಲ ಎಂಬ ಸತ್ಯವನ್ನು ಸಾರಿತು.

“ಬಪ್ಪನಾಡು ಉಲ್ಲಾಳ್ತಿಗೆ ಜಳಕದ ಬಳಿ, ನಡಿಬೆಟ್ಟು ಜುಮಾದಿಗೆ ಪಿರಿವುನ ಬಳಿ” ಎಂಬ ಖ್ಯಾತಿಯೊಂದಿಗೆ ಮೆರೆಯುತ್ತಾ, “ನಡಿಬೆಟ್ಟುದ ಜುಮಾದಿ ಲೆತ್ತದ್ ಪಾತೆರುವೆ” (ನಡಿಬೆಟ್ಟಿನ ಜುಮಾದಿ ಕರೆದು ಮಾತನಾಡುತ್ತದೆ) ಎಂಬ ಕೀರ್ತಿಗೆ ಪಾತ್ರವಾಗಿ, ಬೆಳ್ಳಿಯ ಬಂಡಿಯಲ್ಲಿ ಚಿನ್ನದ ಮುಖವಾಡ ಧರಿಸಿ ಅಭಯ ನೀಡುತ್ತಿರುವ ದೈವವೇ ನಡಿಬೆಟ್ಟು ಶ್ರೀ ಧೂಮಾವತಿ ಬಂಟ ದೈವಗಳು.

ಈ ಮಹತ್ಕಾರ್ಯಕ್ಕೆ ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸಿ ದೈವಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ. ರೂ. 50,000ಕ್ಕೂ ಅಧಿಕ ದೇಣಿಗೆ ನೀಡಿದ ದಾನಿಗಳ ಹೆಸರನ್ನು ಶಾಶ್ವತ ಶಿಲಾಫಲಕದಲ್ಲಿ ಕೆತ್ತಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.



Related posts

ಮಲಾಡ್ ಕುರಾರ್ ಶನೇಶ್ವರ ಮಂದಿರದ ವತಿಯಿಂದ ಉಳ್ಳಾಳ ಸೋಮೇಶ್ವರದಲ್ಲಿ, ಶ್ರೀ ಶನಿ ಮಹಾಪೂಜೆ.

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Mumbai News Desk

ಉಡುಪಿಯಲ್ಲಿ ನಡೆಯಲಿರುವ ‘ದೇವಾಡಿಗ ಮಹಾಧಿವೇಶನ 2026’: ಪಾವಂಜೆಯಲ್ಲಿ ಪೂರ್ವಭಾವಿ ಸಭೆ ಸಂಪನ್ನ

Mumbai News Desk

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk

ಮುಂಬೈ: ಅಪ್ಪಾಜಿ ಬೀಡು ರಮೇಶ್ ಗುರುಸ್ವಾಮಿ ಇನ್ನಿಲ್ಲ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (27/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk