
ಮುಂಬಯಿ: ಜಪಾನ್ ಆತಿಥ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಪುರುಷರ ಹಾಕಿ ವಿಭಾಗದ ಫೈನಲ್ ಪಂದ್ಯದಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಮಲೇಷ್ಯಾವನ್ನು 5-1 ಗೋಲುಗಳಿಂದ ಸೋಲಿಸಿದ ಭಾರತ, ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಆಯಿತು.

ಈ ಗೆಲುವಿನೊಂದಿಗೆ ಭಾರತ ಪುರುಷರ ಹಾಕಿ ತಂಡವು ಮೊದಲ ಬಾರಿಗೆ ಸತತ ಎರಡು ಏಷ್ಯನ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದ ಐತಿಹಾಸಿಕ ಸಾಧನೆಗೆ ಭಾಜನವಾಯಿತು. ಭಾರತ ತಂಡದಲ್ಲಿ ಮಹಾರಾಷ್ಟ್ರದ ಪ್ರತಿನಿಧಿಯಾಗಿ ಕಣಕ್ಕಿಳಿದ ಗೋಲ್‌ಕೀಪರ್ ಸೂರಜ್ ಎಚ್. ಕರ್ಕೇರಾ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪಂದ್ಯದುದ್ದಕ್ಕೂ ಭಾರತ ಆಕ್ರಮಣಕಾರಿ ಆಟ ಪ್ರದರ್ಶಿಸಿತು; ಮಲೇಷ್ಯಾ ಕೆಲ ಹಂತಗಳಲ್ಲಿ ಪ್ರತಿರೋಧ ತೋರಿದರೂ ಸೂರಜ್ ಅದ್ಭುತ ರಕ್ಷಣಾ ಕೌಶಲ ಮೆರೆದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ 100 ಪಂದ್ಯಗಳನ್ನು ಪೂರೈಸಿರುವ ಅವರು, ಈ ಬಾರಿಯ ಏಷ್ಯನ್ ಗೇಮ್ಸ್ ಮೂಲಕ 101ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೂರಜ್ ಕರ್ಕೇರಾ ಅವರು ಮಲಾಡ್ ಪೂರ್ವದ ಇರಾನಿ ಕಾಲೋನಿಯ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ಕರ್ಕೇರ ಹೆಜಮಾಡಿ ಹಾಗೂ ಆಶಾಲತಾ ಕರ್ಕೇರಾ ದಂಪತಿಯ ಸುಪುತ್ರ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೂರಜ್ ಅವರು ಅಕ್ಟೋಬರ್ 5ರಂದು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೇನಾ ಯೋಧರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಬಳಿಕ ಮಲಾಡ್ ಪೂರ್ವದ ಶ್ರೀ ಶನಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ತುಳು-ಕನ್ನಡಿಗರು, ಮಂದಿರದ ಅಧ್ಯಕ್ಷರಾದ ಮೋಹನ್ ಜಿ. ಬಂಗೇರ ಹಾಗೂ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ, ಕೇಕ್ ಕತ್ತರಿಸಿ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು. ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ಜಯ ಸುವರ್ಣ ಅಭಿಮಾನಿಗಳ ಕಾರ್ಯಕ್ರಮದಲ್ಲೂ ಸೂರಜ್ ಅವರನ್ನು ಸನ್ಮಾನಿಸಲು ಉದ್ದೇಶಿಸಲಾಗಿತ್ತು; ಆದರೆ ಅವರ ಅನಿವಾರ್ಯ ಗೈರುಹಾಜರಿಯಿಂದಾಗಿ ಅವರ ತಂದೆ-ತಾಯಿಯವರನ್ನು ಗೌರವಿಸಲಾಗಿತ್ತು.
ವರದಿ ಮತ್ತು ಚಿತ್ರ: ದಿನೇಶ್ ಕುಲಾಲ್



