October 29, 2026
Mumbai News Kannada
ಸುದ್ದಿ

ಕೊಂಕಣ ರೈಲ್ವೆ ಅಭಿವೃದ್ಧಿಗೆ ಹೊಸ ಆಶಾಕಿರಣ: ವಿಲೀನಕ್ಕೆ ಮಹಾರಾಷ್ಟ್ರದ ಒಲವು ಕೋರಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ



ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರಕಾರದ ಸಹಕಾರ ಪಡೆಯುವ ಉದ್ದೇಶದಿಂದ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನ ಮಂತ್ರಾಲಯದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಅಗತ್ಯ ಹಾಗೂ ಅದರ ಮಹತ್ವವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ ಕೋಟ ಶ್ರೀನಿವಾಸ ಪೂಜಾರಿ, ಈ ಪ್ರಸ್ತಾವನೆಗೆ ಮಹಾರಾಷ್ಟ್ರ ಸರಕಾರದ ಸಹಕಾರ ನೀಡುವಂತೆ ಮನವಿ ಮಾಡಿದರು.

ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಪ್ರಯತ್ನದಿಂದ ಕರಾವಳಿ ಭಾಗದ ಪ್ರಯಾಣಿಕರ ಜೀವನಾಡಿಯಾಗಿ ರೂಪುಗೊಂಡ ಕೊಂಕಣ ರೈಲ್ವೆ ಇಂದು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸುಮಾರು 750 ಕಿ.ಮೀ. ಉದ್ದದ ಈ ರೈಲ್ವೆ ಮಾರ್ಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ, ಭವಿಷ್ಯದಲ್ಲಿ ಹೆಚ್ಚಾಗಲಿರುವ ರೈಲು ಸಂಚಾರದ ಅಗತ್ಯಗಳನ್ನು ಪೂರೈಸಲು ಇಡೀ ಮಾರ್ಗವನ್ನು ದ್ವಿಪಥಗೊಳಿಸುವುದು ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದರು.

ಕೊಂಕಣ ರೈಲ್ವೆ ಮಾರ್ಗದ ಹಳಿಗಳನ್ನು ದ್ವಿಗುಣಗೊಳಿಸುವುದು ಹಾಗೂ ಪ್ರಸ್ತುತ ಸಮರ್ಪಕ ಸೌಲಭ್ಯಗಳಿಲ್ಲದ ರೈಲು ನಿಲ್ದಾಣಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಅಂದಾಜು 40,000 ಕೋಟಿ ರೂ. ಅಗತ್ಯವಿದೆ. ಆದರೆ, ಕೊಂಕಣ ರೈಲ್ವೆಯ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಇಷ್ಟು ಬೃಹತ್ ಮೊತ್ತವನ್ನು ಭರಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ, ಕೊಂಕಣ ರೈಲ್ವೆ ಹಾದುಹೋಗುವ ರಾಜ್ಯ ಸರಕಾರಗಳು ತಮ್ಮ ಪಾಲಿನ ಷೇರುಗಳನ್ನು ಬಿಟ್ಟುಕೊಟ್ಟರೆ ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದ ವಿಚಾರವನ್ನು ಕೋಟ ಶ್ರೀನಿವಾಸ ಪೂಜಾರಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈಗಾಗಲೇ ಗೋವಾ ಮತ್ತು ಕೇರಳ ಸರಕಾರಗಳು ಕೊಂಕಣ ರೈಲ್ವೆ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿವೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ರೈಲ್ವೆ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರ ಸರಕಾರವೂ ವಿಲೀನಕ್ಕೆ ಸಮ್ಮತಿ ಸೂಚಿಸಿದರೆ, ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸುವುದರೊಂದಿಗೆ ಕರಾವಳಿ ಭಾಗದ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ. ಅಲ್ಲದೆ, ಕರಾವಳಿ ರಾಜ್ಯಗಳ ಜನಪ್ರತಿನಿಧಿಗಳು ಒಗ್ಗೂಡಿ ರೈಲ್ವೆ ಮಾರ್ಗದ ಇತರ ಅಭಿವೃದ್ಧಿ ಕಾರ್ಯಗಳಿಗೂ ಕೇಂದ್ರ ಸರಕಾರದ ಗಮನ ಸೆಳೆಯಲು ಅನುಕೂಲವಾಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೊಂಕಣ ರೈಲ್ವೆ ವಿಲೀನವು ಅತ್ಯಂತ ಮಹತ್ವದ ವಿಚಾರವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಹಿತದೃಷ್ಟಿಯಿಂದ ವಿಲೀನಕ್ಕೆ ಸಹಮತ ವ್ಯಕ್ತಪಡಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು ಎಂದು ಕೋಟ ಶ್ರೀನಿವಾಸ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಚಂದಗಡ್ ಶಾಸಕ ಶಿವಾಜಿ ಪಾಟೀಲ್, ನವಿ ಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ್ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ ಹಾಗೂ ಸುನಿಲ್ ಪೂಜಾರಿ ಉಪಸ್ಥಿತರಿದ್ದರು.



Related posts

ಚೀನಾದ  ಮಿಲಿಯನ್ ಡಾಲರ್ ರೌಂಡ್ ಟೇಬಲ್ ಅಧೀವೇಶನಕ್ಕೆ ಸ್ಪೀಕ‌ರ್ ಆಗಿ   ಡಾ| ಆರ್.ಕೆ ಶೆಟ್ಟಿ ಆಯ್ಕೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಚ್ಚನಾಡಿ ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತಾ ಅಭಿಯಾನ.

Mumbai News Desk

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (12/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಶಿಕ್ಷಣತಜ್ಞ ಶ್ರೀಧರ್ ಸುವರ್ಣರಿಗೆ ‘ಭಾರತ ರತ್ನ ಐಕಾನಿಕ್ ಪ್ರಶಸ್ತಿ 2025’

Mumbai News Desk

ಉಡುಪಿ : ಕರ್ನಾಟಕದ ಪಿಯುಸಿ ಪ್ರತಿಭಾನ್ವಿತ ಸ್ಕೌಟ್, ಗೈಡ್ಸ್, ರೋವರ್, ರೆಂಜರ್ ವಿದ್ಯಾರ್ಥಿಗಳಿಗೆ ಸಮ್ಮಾನ

Mumbai News Desk