
ಬರಹ: ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು
ನೀರು ಬದುಕಿನ ಆಧಾರ. ಆದರೆ ಅದೇ ನೀರು ಕೆಲವೊಮ್ಮೆ ಜೀವಕ್ಕೆ ಮಾರಕವಾಗುವ ಅಪಾಯದ ರೂಪ ತಾಳುತ್ತದೆ. ಇಂತಹ ಸಂಕಷ್ಟದ ಕ್ಷಣಗಳಲ್ಲಿ ಸ್ವಂತ ಜೀವದ ಹಂಗು ತೊರೆದು, ನೀರಿನ ಆಳಕ್ಕೆ ಧುಮುಕಿ ಅಪಾಯದಲ್ಲಿರುವವರನ್ನು ರಕ್ಷಿಸುವ ಸಾಹಸಿ ಈಶ್ವರ್ ಮಲ್ಪೆ. ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆಯ ಈ ಮಾನವೀಯ ಜೀವರಕ್ಷಕ, ಹಲವು ವರ್ಷಗಳಿಂದ ನದಿ, ಸಮುದ್ರ, ಬಾವಿ ಸೇರಿದಂತೆ ವಿವಿಧ ಜಲಮೂಲಗಳಲ್ಲಿ ನಡೆಯುವ ಅವಘಡಗಳ ಸಂದರ್ಭದಲ್ಲಿ ಜನರ ಪಾಲಿನ ‘ನೀರಿನ ಸೈನಿಕ’ ಹಾಗೂ ‘ಆಪದ್ಬಾಂಧವ’ನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೊಗವೀರ ಸಮಾಜದ ದಿವಂಗತ ಶ್ರೀ ಆನಂದ ಪುತ್ರನ್ ಮತ್ತು ಶ್ರೀಮತಿ ಬೇಬಿ ಕರ್ಕೇರ ದಂಪತಿಯ ಮೂವರು ಮಕ್ಕಳಲ್ಲಿ ದ್ವಿತೀಯ ಪುತ್ರರಾಗಿ ಈಶ್ವರ್ ಮಲ್ಪೆ ಅವರು 25-05-1976ರಂದು ಜನಿಸಿದರು. ಉಡುಪಿಯ ಯು.ಬಿ.ಎಂ.ಸಿ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಲ್ಪೆಯ ಫಿಶರೀಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಆದರೆ ಕಡುಬಡತನ ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಯಿತು. ಮುಂದೆ ಓದಲು ಸಾಧ್ಯವಾಗದೆ, ಮೀನುಗಾರಿಕಾ ದೋಣಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡರು.
ಬದುಕು ಅವರ ಮುಂದೆ ಹಲವು ಕಠಿಣ ಸವಾಲುಗಳನ್ನು ತಂದೊಡ್ಡಿದರೂ, ಆ ನೋವು-ಸಂಕಷ್ಟಗಳನ್ನು ಯಾರ ಮುಂದೆಯೂ ತೋಡಿಕೊಳ್ಳದೆ ತಮ್ಮೊಳಗೇ ಇಟ್ಟುಕೊಂಡು ಸಮಾಜ ಸೇವೆಯ ಹಾದಿಯಲ್ಲಿ ಮುನ್ನಡೆದರು. ತಮ್ಮ ವೈಯಕ್ತಿಕ ಬದುಕಿನ ನೋವುಗಳಿಗಿಂತ ಅಪಾಯದಲ್ಲಿರುವವರ ಬದುಕು ಮುಖ್ಯ ಎಂಬ ಧ್ಯೇಯದೊಂದಿಗೆ ಈಶ್ವರ್ ಮಲ್ಪೆ ತಮ್ಮ ಸೇವಾ ಪಯಣವನ್ನು ಮುಂದುವರಿಸಿದ್ದಾರೆ.

ನದಿ, ಸಮುದ್ರ ಹಾಗೂ ಇತರ ಜಲಮೂಲಗಳಲ್ಲಿ ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ ಹಗಲಿರುಳು ಧಾವಿಸುವ ಇವರು, ಇದುವರೆಗೆ ಸುಮಾರು 75 ಮಂದಿಯ ಜೀವ ಉಳಿಸಿದ್ದಾರೆ. ಆಕಸ್ಮಿಕವಾಗಿ ನೀರಿಗೆ ಬಿದ್ದವರು, ವೈಯಕ್ತಿಕ ಸಮಸ್ಯೆಗಳಿಂದ ನೀರಿಗೆ ಹಾರಿದವರು ಸೇರಿದಂತೆ ಅನೇಕರನ್ನು ತಮ್ಮ ಸಾಹಸ, ಅನುಭವ ಮತ್ತು ಈಜು ಕೌಶಲ್ಯದ ಮೂಲಕ ಬದುಕಿನ ದಡಕ್ಕೆ ತಂದಿದ್ದಾರೆ.
ಜೀವ ಉಳಿಸುವ ಕಾರ್ಯದಷ್ಟೇ ಕಠಿಣವಾದ ಮತ್ತೊಂದು ಜವಾಬ್ದಾರಿಯನ್ನೂ ಅವರು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಜಲ ಅವಘಡಗಳಲ್ಲಿ ಮೃತಪಟ್ಟ 2,000ಕ್ಕೂ ಹೆಚ್ಚು ಮಂದಿಯ ಮೃತದೇಹಗಳನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿಯೂ ನೀರಿನಿಂದ ಹೊರತೆಗೆದಿದ್ದಾರೆ. ಸುಮಾರು 40 ಅಡಿ ಆಳದವರೆಗೆ ಯಾವುದೇ ಆಮ್ಲಜನಕದ ಸಿಲಿಂಡರ್ ನೆರವಿಲ್ಲದೆ ಹಾಗೂ 100 ಅಡಿ ಆಳದವರೆಗೆ ಸ್ಕೂಬಾ ಉಪಕರಣಗಳ ನೆರವಿನಿಂದ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತರ ಕುಟುಂಬದವರ ದುಃಖದ ಸಂದರ್ಭದಲ್ಲಿ ಅವರೊಂದಿಗೆ ನಿಂತು, ಅಂತ್ಯಸಂಸ್ಕಾರದವರೆಗೂ ಸಾಥ್ ನೀಡುವ ಮೂಲಕ ಮಾನವೀಯತೆಯ ಹಿರಿದಾದ ಗುಣವನ್ನು ಮೆರೆದಿದ್ದಾರೆ.
ದಿನದ 24 ಗಂಟೆಯಲ್ಲೂ ಯಾವ ಕ್ಷಣದಲ್ಲಿ ಕರೆ ಬಂದರೂ ತಕ್ಷಣ ಸ್ಥಳಕ್ಕೆ ಧಾವಿಸುವುದು ಈಶ್ವರ್ ಮಲ್ಪೆ ಅವರ ಕಾಯಕದ ವೈಶಿಷ್ಟ್ಯ. ಈ ಸೇವೆಗೆ ಅವರು ನಯಾಪೈಸೆಯನ್ನೂ ನಿರೀಕ್ಷಿಸುವುದಿಲ್ಲ; ಜೀವರಕ್ಷಣೆ ಹಾಗೂ ನಿಸ್ವಾರ್ಥ ಸೇವೆಯನ್ನೇ ಕರ್ತವ್ಯವೆಂದು ಭಾವಿಸಿ ಉಚಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಶ್ವರ್ ಮಲ್ಪೆ ಅವರ ಅಪಾರ ಅನುಭವ ಮತ್ತು ಜಲರಕ್ಷಣಾ ಕೌಶಲ್ಯವನ್ನು ಗುರುತಿಸಿರುವ ಕರಾವಳಿ ಕಾವಲು ಪೊಲೀಸ್ ಪಡೆ (CSP), ಕಳೆದ ಐದು ವರ್ಷಗಳಿಂದ ಅವರನ್ನು ಸಮುದ್ರದಲ್ಲಿ ತರಬೇತಿ ನೀಡಲು ಬಳಸಿಕೊಳ್ಳುತ್ತಿದೆ. ಸಮುದ್ರದ ಸ್ವಭಾವ, ಅಲೆಗಳ ಏರಿಳಿತ, ನೀರಿನ ಸುಳಿ ಹಾಗೂ ಅಪಾಯಕಾರಿ ಸನ್ನಿವೇಶಗಳಲ್ಲಿ ಕಾರ್ಯಾಚರಣೆ ನಡೆಸುವ ವಿಧಾನಗಳ ಕುರಿತು ಅವರು ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಅನುಭವದಿಂದ ಗಳಿಸಿದ ವಿದ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಭವಿಷ್ಯದ ರಕ್ಷಣಾ ಕಾರ್ಯಾಚರಣೆಗಳಿಗೂ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.
ಈಶ್ವರ್ ಮಲ್ಪೆಯವರ ಸೇವೆ ಕೇವಲ ಜಲರಕ್ಷಣೆಗೆ ಸೀಮಿತವಾಗಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಹಲವು ಪುಟ್ಟ ಮಕ್ಕಳಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಚಿಕಿತ್ಸೆ ಪಡೆಯಲಾಗದ ಬಡ ಕುಟುಂಬಗಳ ನೆರವಿಗೆ ನಿಂತು, ಸಾರ್ವಜನಿಕರಿಂದ ಸುಮಾರು 70 ಲಕ್ಷ ರೂಪಾಯಿವರೆಗೆ ಧನಸಹಾಯ ಸಂಗ್ರಹಿಸಿ ಹಲವು ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ.
ಉಡುಪಿ ಜಿಲ್ಲೆಗೆ ಮಾತ್ರ ತಮ್ಮ ಸೇವೆಯನ್ನು ಸೀಮಿತಗೊಳಿಸದೆ ರಾಜ್ಯದ ವಿವಿಧೆಡೆ ತೆರಳಿ ಮಾನವೀಯತೆ ಮೆರೆದಿದ್ದಾರೆ. ಉಚಿತ ಆಂಬುಲೆನ್ಸ್ ಸೇವೆಯ ಮೂಲಕ ಸುಮಾರು 3,000ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ ಅವರ ಜೀವ ಉಳಿಸಲು ನೆರವಾಗಿದ್ದಾರೆ. ಬಂದರಿನ ನೀರಿನಲ್ಲಿ ಮುಳುಗಿದ್ದ ಟೆಂಪೊ ರಿಕ್ಷಾಗಳು, ಸುಮಾರು 50 ಬೈಕ್ಗಳು ಹಾಗೂ ಬೋಟುಗಳ ಬಿಡಿಭಾಗಗಳನ್ನು ಮುಳುಗುತಜ್ಞರಾಗಿ ಮೇಲಕ್ಕೆತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ಈಶ್ವರ್ ಮಲ್ಪೆ, ತಮ್ಮ ಪುತ್ರ ನಿರಂಜನ್ ಅವರ ಸವಿನೆನಪಿಗಾಗಿ 2025ರಲ್ಲಿ ಮತ್ತೊಂದು ಮಿನಿ ಆಂಬುಲೆನ್ಸ್ ಹಾಗೂ ವೆಂಟಿಲೇಟರ್/ಐಸಿಯು ಸೌಲಭ್ಯವುಳ್ಳ ಸುಸಜ್ಜಿತ ಆಂಬುಲೆನ್ಸ್ ಅನ್ನು ಜನರ ಸೇವೆಗೆ ಸಮರ್ಪಿಸಿದ್ದಾರೆ. ವೈಯಕ್ತಿಕ ನೋವನ್ನೇ ಸಮಾಜದ ಆಸರೆಯನ್ನಾಗಿಸಿಕೊಂಡ ಅವರ ಈ ನಡೆ ಶ್ಲಾಘನೀಯ.
2024ರಲ್ಲಿ ನಡೆದ ಅಂಕೋಲಾದ ಶಿರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆಯಲ್ಲಿಯೂ ಈಶ್ವರ್ ಮಲ್ಪೆ ಮಹತ್ವದ ಪಾತ್ರ ವಹಿಸಿದ್ದರು. ದುರಂತ ಸಂಭವಿಸಿದ ಸುಮಾರು 11 ದಿನಗಳ ಬಳಿಕ ಕರೆ ಬಂದ ತಕ್ಷಣ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ಥಳಕ್ಕೆ ತೆರಳಿದ ಅವರು, ಗಂಗಾವಳಿ ನದಿಯ ರಭಸದ ಪ್ರವಾಹದಲ್ಲೂ ಲಾರಿ, ಲಾರಿಯ ಬಿಡಿಭಾಗಗಳು ಹಾಗೂ ಸ್ಕೂಟರ್ ಅನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಶ್ರಮಿಸಿದರು.
ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ 2023ರಲ್ಲಿ ‘ಕರ್ನಾಟಕ ಪುತ್ರ ಪ್ರಶಸ್ತಿ’ ಹಾಗೂ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಪ್ರಶಸ್ತಿ’, 2024ರಲ್ಲಿ ‘ಟಿವಿ9 ನವ ನಕ್ಷತ್ರ ಪ್ರಶಸ್ತಿ’ ಮತ್ತು 2025ರಲ್ಲಿ ‘ಮಾಸ್ಟರ್ ವಿಷನ್ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್’ ಸೇರಿದಂತೆ 1,500ಕ್ಕೂ ಅಧಿಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಆದರೆ ಇವೆಲ್ಲ ಪ್ರಶಸ್ತಿ-ಪುರಸ್ಕಾರಗಳಿಗಿಂತಲೂ ಸಂಕಷ್ಟದಲ್ಲಿರುವ ಜೀವವೊಂದನ್ನು ಉಳಿಸಿದ ತೃಪ್ತಿಯೇ ತಮಗೆ ಶ್ರೇಷ್ಠ ಗೌರವ ಎನ್ನುತ್ತಾರೆ ಈಶ್ವರ್ ಮಲ್ಪೆ.
ಹೊರನೋಟಕ್ಕೆ ಸಾಹಸಿಯಾಗಿ ಕಾಣುವ ಈಶ್ವರ್ ಮಲ್ಪೆ ಅವರ ಆಂತರಿಕ ಬದುಕು ಮಾತ್ರ ನೋವಿನ ಗೂಡು. ಪತ್ನಿ ಗೀತಾ ಹಾಗೂ ಇಬ್ಬರು ವಿಶೇಷ ಚೇತನ ಮಕ್ಕಳೊಂದಿಗೆ ಬದುಕುತ್ತಿರುವ ಇವರ ಸಂಸಾರದಲ್ಲಿ ಸವಾಲುಗಳು ಅಪಾರ. ಕುಟುಂಬದ ಸಂಕಷ್ಟಗಳು ಬೆಟ್ಟದಷ್ಟಿದ್ದರೂ, ಸಮಾಜ ಸೇವೆಯಿಂದ ಅವರು ವಿಮುಖರಾಗಿಲ್ಲ.

ಇತ್ತೀಚೆಗೆ ಅವರನ್ನು ಭೇಟಿ ಮಾಡಿ, “ನಿಮ್ಮ ಕುಟುಂಬದಲ್ಲೇ ಇಷ್ಟೊಂದು ಜವಾಬ್ದಾರಿ, ಕಷ್ಟಗಳಿರುವಾಗ ನೀರಿನಲ್ಲಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುವಾಗ ನಿಮಗೇನಾದರೂ ಅನಾಹುತ ಸಂಭವಿಸಿದರೆ ನಿಮ್ಮವರ ಗತಿ ಏನು?” ಎಂದು ಪ್ರಶ್ನಿಸಿದಾಗ ಅವರ ಉತ್ತರ ಮನಕಲಕುವಂತಿತ್ತು:
“ನನಗೆ ನೂರಾರು ಕಷ್ಟಗಳಿರಬಹುದು, ಅದನ್ನು ಬೇರೆಯವರ ಮುಂದೆ ಹೇಳಿಕೊಂಡು ಪ್ರಯೋಜನವಿಲ್ಲ. ನನ್ನ ಮಕ್ಕಳಿಗೆ ಬಂದಿರುವಂತಹ ದುಸ್ಥಿತಿ ಬೇರೆ ಮಕ್ಕಳಿಗೂ ಬರಬಾರದು. ಅಪಾಯದಲ್ಲಿರುವ ಜೀವಗಳನ್ನು ಉಳಿಸುವುದು ನನ್ನ ಆದ್ಯ ಕರ್ತವ್ಯ” ಎಂದರು. ಈ ಮಾತುಗಳಲ್ಲಿ ನೊಂದ ತಂದೆಯ ಕರುಳು, ಸಮಾಜ ಸೇವಕನ ಬದ್ಧತೆ ಮತ್ತು ಜೀವ ರಕ್ಷಕನ ಮಾನವೀಯ ತುಡಿತ ಒಟ್ಟಾಗಿ ಎದ್ದು ಕಾಣುತ್ತದೆ.
ಸಾರ್ವಜನಿಕರಿಗೆ ನೀವು ನೀಡುವ ಸಂದೇಶವೇನು ಎಂಬ ಪ್ರಶ್ನೆಗೆ, “ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ 6ನೇ ತರಗತಿಯಿಂದಲೇ ಸಮುದ್ರ, ನದಿ, ಕೆರೆ, ಬಾವಿ ಸೇರಿದಂತೆ ವಿವಿಧ ಜಲಮೂಲಗಳ ಲಕ್ಷಣಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡಬೇಕು. ನೀರಿನ ಸುಳಿ, ಅಲೆಗಳ ಸ್ವಭಾವ ಮತ್ತು ನೀರಿನಲ್ಲಿರುವ ಅಪಾಯಗಳ ಕುರಿತು ಜಾಗೃತಿ ಮೂಡಿಸಬೇಕು. ಪ್ರತಿಯೊಂದು ಮಗುವಿಗೂ ಈಜು ಕಡ್ಡಾಯವಾಗಿ ಕಲಿಸಬೇಕು. ಮುಂದೆ ಅವರು ಉತ್ತಮ ಈಜುಗಾರರಾಗಿ, ಆಪತ್ತಿನಲ್ಲಿದ್ದಾಗ ಮತ್ತೊಬ್ಬರ ಜೀವ ಉಳಿಸುವ ಸತ್ಪ್ರಜೆಯಾಗಬೇಕು” ಎಂದು ಕಿವಿಮಾತು ಹೇಳಿದರು.
ಈಶ್ವರ್ ಮಲ್ಪೆ ಅವರ ಜೀವರಕ್ಷಣೆಯ ಪಯಣ ಆರಂಭವಾಗಿದ್ದು 1999ರಲ್ಲಿ. ಇವರ ತಂದೆ ಮೂಲತಃ ಹೆಬ್ರಿಯ ಚಾರ ಮಾವಿನಹಾಡಿಯವರಾದರೆ, ತಾಯಿ ಪೆರ್ಡೂರಿನ ಹೊಸಂಗಡಿಯವರು. 1999ರಲ್ಲಿ ಕೊಡವೂರು ಸಮೀಪದ ಬಾವಿಯೊಂದರಲ್ಲಿ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಈಶ್ವರ್ ಮಲ್ಪೆ ಅವರು ಹೊರತೆಗೆದಿದ್ದರು. ಗಿಡಗಂಟಿ, ಬಳ್ಳಿಗಳಿಂದ ತುಂಬಿ ಅಪಾಯಕಾರಿಯಾಗಿದ್ದ ಆ ಬಾವಿಯಿಂದ ಮೃತದೇಹವನ್ನು ಹೊರತಂದ ಅವರ ಸಾಹಸಕ್ಕೆ ಸ್ಥಳೀಯರು ಬೆರಗಾಗಿದ್ದರು. ಈ ಸಾಹಸದ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಈಶ್ವರ್ ಮಲ್ಪೆಯವರ ಮಾನವೀಯ ಸೇವಾ ಕಾರ್ಯ ನಾಡಿನ ಗಮನ ಸೆಳೆಯತೊಡಗಿತು.



