November 18, 2026
Mumbai News Kannada
ಮುಂಬಯಿ

ಬೈಕಂಪಾಡಿ ಮೊಗವೀರ ಮಹಾಸಭಾ ಮುಂಬಯಿ (ರಿ) ನ ದ್ವಿತೀಯ ವಿಶೇಷ ಮಹಾಸಭೆ ಹಾಗೂ ವೈದ್ಯಕೀಯ ನೆರವು ನಿಧಿ ವಿತರಣೆ





















ಮುಂಬಯಿ ಮಹಾನಗರ: ಮುಂಬಯಿ ಮಹಾನಗರಿಯಲ್ಲಿ ಏಳು ದಶಕಗಳ ಸುದೀರ್ಘ ಅಸ್ತಿತ್ವದ ಇತಿಹಾಸವುಳ್ಳ ಬೈಕಂಪಾಡಿ ಮೊಗವೀರ ಮಹಾಸಭಾ ಮುಂಬಯಿ (ರಿ) ಇದರ ದ್ವಿತೀಯ ವಿಶೇಷ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಧರ್ಮೇಶ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ದಿ. 15.11.2026 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ನಡೆಯಿತು. ವೇದಿಕೆಯಲ್ಲಿ ಗೌ. ಪ್ರ. ಕಾರ್ಯದರ್ಶಿ ನೀಲಾಧರ ವಿ. ಬಂಗೇರ ಹಾಗೂ ಕೋಶಾಧಿಕಾರಿ ಚಂದ್ರಹಾಸ ಇಡ್ಯಾ ಅವರೂ ಉಪಸ್ಥಿತರಿದ್ದರು.

ಪ್ರಥಮದಲ್ಲಿ ಸ್ವಗ್ರಾಮದ ದೈವ-ದೇವರ ಪ್ರಾರ್ಥನೆಯ ನಂತರ, ಇತ್ತೀಚೆಗೆ ದೈವಾಧೀನರಾದ ಗ್ರಾಮದ ಒಂದನೇ ಗುರಿಕಾರ ಸದಾಶಿವ ಕಾಂಚನ್ ಅವರ ಗೌರವಾರ್ಥ ಸಂತಾಪ ಸೂಚಿಸಿ, ಮೌನ ಪ್ರಾರ್ಥನೆಯೊಂದಿಗೆ ಸಮೂಹ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ತರುವಾಯ ಗೌ. ಪ್ರ. ಕಾರ್ಯದರ್ಶಿಯವರು ಸಭೆಯ ಸುತ್ತೋಲೆಯನ್ನು ಓದಿ, ಪ್ರಥಮ ವಿಶೇಷ ಮಹಾಸಭೆಯ ವರದಿಯನ್ನು ಮಂಡಿಸಿದರು. ನಂತರದಲ್ಲಿ ಕಾಗದ – ಪತ್ರಾದಿಗಳನ್ನು ಸಭೆಯ ಮುಂದಿಟ್ಟು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅಂತೆಯೇ ಸಭಾದ ವಾರ್ಷಿಕ ಜನಹಿತ ಸಾಲ ಯೋಜನೆಯ ಮುಂದುವರಿಕೆಯ ಬಗ್ಗೆ ಚರ್ಚಿಸಿ ನಿಶ್ಚಯಿಸಲಾಯಿತು.



















ನಂತರದಲ್ಲಿ ಅಧ್ಯಕ್ಷ ಧರ್ಮೇಶ್ ಪುತ್ರನ್ ಅವರು ಸಭಾದ ಅಸ್ತಿತ್ವವನ್ನು ಅಧಿಕೃತಗೊಳಿಸಿ, ಅದರ ನಿರ್ವಹಣೆಯಲ್ಲಿರುವ ಕಾನೂನಾತ್ಮಕ ತೊಡಕುಗಳನ್ನು ಪರಿಹರಿಸಿ, ಸರ್ವ ಕಾರ್ಯಚಟುವಟಿಕೆಗಳನ್ನು ಸುಗಮಗೊಳಿಸುವ ಮೂಲೋದ್ದೇಶದ ಟ್ರಸ್ಟ್ ರೂಪಣೆಯ ಕಾರ್ಯ ಪ್ರಗತಿ ಹಾಗೂ ಇನ್ಮುಂದಿನ ಮಹತ್ವದ ಹಂತಗಳ ಸಂಬಂಧ ಸದಸ್ಯರಿಗೆ ಸವಿವರ ಮಾಹಿತಿ ನೀಡಿದರು. ಪುತ್ರನ್ ತಮ್ಮ ಯೋಜನಾ ವಿವರಣೆಯನ್ನು ಮುಂದುವರಿಸುತ್ತಾ, ಬೈಕಂಪಾಡಿ ಮೂಲದ ಮೊಗವೀರ ಪರಿವಾರಗಳನ್ನು ಮತ್ತಷ್ಟು ಸದೃಢಗೊಳಿಸಿ, ಸರ್ವರ ಹಿತರಕ್ಷಣೆಗಾಗಿ ವಿವಿಧ ರಚನಾತ್ಮಕ ಹಾಗೂ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳನ್ನು ಜಾರಿಗೊಳಿಸುವ ಅಭಿವೃದ್ಧಿ ಮತ್ತು ಸಬಲೀಕರಣ ಕಾರ್ಯಕ್ರಮಗಳನ್ನೊಳಗೊಂಡ ದೂರದರ್ಶಿ ಯೋಜನಾ ಸಂಹಿತೆಯನ್ನು 70 ರ ವರ್ಷಾಚರಣೆಯ ಹೊಸ್ತಿಲಲ್ಲಿರುವ ನಮ್ಮ ಸಂಸ್ಥೆಯು ಈ ಸಂದರ್ಭದಲ್ಲೇ ಯೋಜಿಸಿ ಆಯೋಜಿಸುವ ತುರ್ತಿನ ಬಗ್ಗೆಯೂ ಸದಸ್ಯರಿಗೆ ಮನದಟ್ಟುಗೊಳಿಸಿದರು.

ಈ ನಿಟ್ಟಿನಲ್ಲಿ ಸಭೆಯು ಗ್ರಾಮದ ಮಹಿಳೆಯರನ್ನು ಹೆಚ್ಚು ಸಹಭಾಗಿ ಹಾಗೂ ಸಕ್ರಿಯರನ್ನಾಗಿಸಲು, ಅದೇ ರೀತಿಯಲ್ಲಿ ಯುವ ಪೀಳಿಗೆಯನ್ನು ಮುಂಚೂಣಿಗೆ ತಂದು ಸಂಸ್ಥೆಯ ಭವಿಷ್ಯವನ್ನು ಮತ್ತಷ್ಟು ಭದ್ರಗೊಳಿಸಲು ‘ಮಹಿಳಾ ಘಟಕ’ ಮತ್ತು ‘ಯುವ ಘಟಕ’ವನ್ನು ರೂಪಿಸುವ ನಿರ್ಧಾರವನ್ನೂ ತಳೆಯಿತು. ಈ ನೆಲೆಯಲ್ಲಿ ಮೂಲ ಹಂತದ ಸಂಘಟನಾ ಜವಾಬ್ದಾರಿಯನ್ನು ಪ್ರಮುಖರಾದ ಡಾ. ಜಿ. ಪಿ. ಕುಸುಮ, ವಂದನಾ ಸಾಲ್ಯಾನ್ ಮತ್ತು ಯಶೋದಾ ಲೋಕರಾಜ್ ಪುತ್ರನ್ ಇವರಿಗೆ ವಹಿಸಿಕೊಡಲಾಯಿತು.

ಅನಂತರದಲ್ಲಿ ಸಭಾದ ಕ್ರಿಯಾಯೋಜನೆಗಳಲ್ಲಿ ಅತ್ಯಂತ ಮಹತ್ವದ್ದಾದ ವೈದ್ಯಕೀಯ ನೆರವು ನಿಧಿ ಯೋಜನೆಯನ್ವಯ ವಿವಿಧ ಪರಿಹಾರ ಮೊತ್ತಗಳನ್ನು ಅರ್ಹ ಫಲಾನುಭವಿಗಳಿಗೆ ಅಧ್ಯಕ್ಷ ಧರ್ಮೇಶ್ ಪುತ್ರನ್ ಅವರು ವಿತರಿಸುತ್ತಾ, ಇಂತಹ ಸಮಾಜಮುಖಿ ಪ್ರಯೋಜನೆಯ ವಿವಿಧ ಸಹಾಯ ನಿಧಿಗಳನ್ನು ಮತ್ತಷ್ಟು ವೃದ್ಧಿಗೊಳಿಸಿ, ಸೇವಾ ಮೊತ್ತದ ಮಿತಿ ಮತ್ತು ಸೇವಾ ವ್ಯಾಪ್ತಿಯನ್ನು ವಿಸ್ತೃತಗೊಳಿಸುವ ಅವಶ್ಯಕತೆ ಇಂದು ಎಂದಿಗಿಂತ ಹೆಚ್ಚಿದೆ ಎಂದು ತಿಳಿಸಿ ಸದಸ್ಯರೆಲ್ಲರ ಬೆಂಬಲ ಯಾಚಿಸಿದರು.

ಅಂತೆಯೇ ಸಭಾದ 70 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ವಿವಿಧ ಗುರಿ – ಉದ್ದೇಶಗಳು, ಕಾರ್ಯಯೋಜನೆಗಳು, ಸಾಮುದಾಯಿಕ ಕಲ್ಯಾಣ ಕಾರ್ಯಕ್ರಮಗಳು, ಕ್ರೀಡಾ ತಥಾ ಸಾಂಸ್ಕೃತಿಕ ಚಟುವಟಿಕೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸಮಗ್ರ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದು, ಈ ಸಲುವಾಗಿ ಕಾರ್ಯಕ್ರಮ ಯೋಜನಾ ಸಮಿತಿಯ ಅಧ್ಯಕ್ಷರಾದ ಲೀಲಾಧರ್ ಬೈಕಂಪಾಡಿಯವರ ಮುಂದಾಳತ್ವದಲ್ಲಿ ಪ್ರಸ್ತಾವಿತ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಆಡಳಿತ ಸಮಿತಿಯು ಈಗಾಗಲೇ ಕಾರ್ಯಪ್ರವೃತ್ತರಾಗಿರುವುದಾಗಿ ಸಭೆಗೆ ತಿಳಿಸಿದರು. ಅಂತಿಮವಾಗಿ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರಗಳನ್ನು ತಳೆಯುವುದರೊಂದಿಗೆ ಸಭಾದ ದ್ವಿತೀಯ ವಿಶೇಷ ಮಹಾಸಭೆಯು ಮುಕ್ತಾಯಗೊಂಡಿತು.



Related posts

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ಡೊಂಬಿವಲಿ ಕರ್ನಾಟಕ ಸಂಘದಿಂದ 58ನೇ ವರ್ಷದ ‘ನಾಡ ಹಬ್ಬ’ ಅದ್ದೂರಿ ಆಚರಣೆ: ಹೊರನಾಡಿನಲ್ಲಿ ಕನ್ನಡ ಕಲೆ-ಸಂಸ್ಕೃತಿ ವೈಭವ!

Mumbai News Desk

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ, ಸಾಧಕರಿಗೆ ಸನ್ಮಾನ

Mumbai News Desk

ವಿದೂಶಿ ಗೀತಾ ವೇದ್ (ಸಾಲ್ಯಾನ್) ರ ನಟನಾ ನೃತ್ಯ ಅಕಾಡೆಮಿಯ 11ನೇ ವಾರ್ಷಿಕೋತ್ಸವ.

Mumbai News Desk

ಶ್ರೀ ರಜಕ ಸಂಘ ಡೊಂಬಿವಲಿ ವಲಯದ ವತಿಯಿಂದ ಸಂಭ್ರಮದ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮ

Mumbai News Desk