ಮುಂಬೈ: ಬೋರಿವಲಿ ಪೂರ್ವದ ರಾಷ್ಟ್ರೀಯ ಉದ್ಯಾನವನದ ಸನಿಹವಿರುವ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಪ್ಲೆಕ್ಸ್ನಲ್ಲಿ (ನವನಿರ್ಮಿತ ಶೀತಲ್ ರಿಗಾಲಿಯಾ) ನೆಲೆಸಿರುವ ಶ್ರೀ ಜಗದೀಶ್ವರಿ ಮಂದಿರದಲ್ಲಿ 51ನೇ ವರ್ಷದ ನವರಾತ್ರಿ ಹಾಗೂ ದಸರಾ ಮಹೋತ್ಸವವು ಅಕ್ಟೋಬರ್ 11ರಿಂದ 20ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡು, ಶಿಲಾಮಯ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿದ ಬಳಿಕ ನಡೆಯುತ್ತಿರುವ ಪ್ರಥಮ ನವರಾತ್ರೋತ್ಸವ ಇದಾಗಿದೆ ಎಂಬುದು ವಿಶೇಷ.
ಅ. 11ರ ಭಾನುವಾರ ಬೆಳಿಗ್ಗೆ 6:31ಕ್ಕೆ ಘಟಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು, ಅ. 20ರ ವಿಜಯದಶಮಿಯಂದು ಘಟ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿವೆ.
ಉತ್ಸವದ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ 7:30ಕ್ಕೆ ನಿತ್ಯಾರತಿ, ಸಂಜೆ 5:00ರಿಂದ 7:00ರ ವರೆಗೆ ಬೋರಿವಲಿ-ದಹಿಸರ್ನ ಶ್ರೀ ಹನುಮಾನ್ ಮಹಿಳಾ ಭಜನಾ ಮಂಡಳಿ ಹಾಗೂ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ರಾತ್ರಿ 7:30ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ನೆರವೇರಲಿದೆ.
ಅ. 18ರ ಭಾನುವಾರ ಬೆಳಿಗ್ಗೆ 8:15ರಿಂದ ಶ್ರೀ ದುರ್ಗಾ ಹೋಮ, ಮಧ್ಯಾಹ್ನ 1:00ರಿಂದ 3:00ರ ವರೆಗೆ ಅನ್ನಸಂತರ್ಪಣೆ ಹಾಗೂ ಸಂಜೆ 6:00ರಿಂದ ದುರ್ಗಾ ಕಲ್ಪೋಕ್ತ ಪೂಜೆ ಜರುಗಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ವಿಪ್ರವೃಂದ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



