October 15, 2026
Mumbai News Kannada
ಮುಂಬಯಿ

ಜಯ ಸಿ. ಸುವರ್ಣ ಅಭಿಮಾನಿಗಳ ಯುವ ವಿಭಾಗದ ‘ವೈಬ್ ಫೆಸ್ಟ್ 2026’ ಯಶಸ್ವಿ: ಧನ್ಯೋತ್ಸವ



ಯುವ ಸಮುದಾಯದ “ವೈಬ್ ಫೆಸ್ಟ್” ಕಾರ್ಯಕ್ರಮ ಬಿಲ್ಲವ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿದೆ: ಸೂರ್ಯಕಾಂತ್ ಜಯ ಸುವರ್ಣ

ಮುಂಬಯಿ: ಜಯ ಸಿ. ಸುವರ್ಣ ಅಭಿಮಾನಿಗಳ ಯುವ ವಿಭಾಗ ಹಾಗೂ ಮುಂಬಯಿ ಬಿಲ್ಲವರ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.), ಮುಂಬೈ ಇವರ ಜಂಟಿ ಆಯೋಜನೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ‘ವೈಬ್ ಫೆಸ್ಟ್ 2026’ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲ ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸುವ “ಧನ್ಯೋತ್ಸವ” ಕಾರ್ಯಕ್ರಮವು ಇತ್ತೀಚೆಗೆ ಗೋರೆಗಾಂವ್ ಪೂರ್ವದ ಲೀಲಾಸ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿಮಾನಿಗಳ ಬಳಗದ ಅಧ್ಯಕ್ಷರು, ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್‌ನ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ವಹಿಸಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಯುವ ಸಮುದಾಯದ ಉತ್ಸವವು ಬಿಲ್ಲವ ಸಮಾಜದ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದೆ. ಎಲ್ಲಿ ಬಿಲ್ಲವರು ಒಗ್ಗಟ್ಟಾಗುತ್ತಾರೋ ಅಲ್ಲಿಯೇ ಬಿಲ್ಲವ ಭವನ. ಜಯ ಸುವರ್ಣರ ಹೆಸರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಟರ ಭವನದಲ್ಲಿ ಜನ ಸೇರಿದ್ದಾರೆ. ಇದು ಬಿಲ್ಲವರ ಶಕ್ತಿ ಹಾಗೂ ಜಯ ಸುವರ್ಣರ ಮೇಲಿಟ್ಟಿರುವ ಅಭಿಮಾನ. ಇದರಿಂದ ಇತರ ಸಮಾಜದ ಬಾಂಧವರಿಗೂ ಬಿಲ್ಲವರ ಒಗ್ಗಟ್ಟಿನ ಅರಿವಾಗಿದೆ. ನಮ್ಮ ಈ ಒಗ್ಗಟ್ಟು ನಿರಂತರವಾಗಿರಬೇಕು. ಯಾರನ್ನೂ ದ್ವೇಷಿಸದೆ, ನಮ್ಮ ಕರ್ತವ್ಯದ ಕೆಲಸಗಳನ್ನು ಮಾಡುತ್ತಾ ಸಮಾಜವನ್ನು ಸಂಘಟಿಸೋಣ. ನೀವೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಶಕ್ತಿ ತುಂಬಿದ್ದೀರಿ,” ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಪೂಜಾರಿ, “ಜಯ ಸುವರ್ಣರ ಮೇಲಿನ ಅಭಿಮಾನ ಮತ್ತು ಗೌರವದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಂಟರ ಭವನದಲ್ಲಿ ಸೇರಿದ್ದೀರಿ. ಈ ವೇಳೆ ತಮಗೆ ಬಹಳಷ್ಟು ಅಡಚಣೆಗಳು ಉಂಟಾಗಿರಬಹುದು. ನಾವು ಊಹಿಸಲೂ ಅಸಾಧ್ಯವಾದಷ್ಟು ದೊಡ್ಡ ಸಂಖ್ಯೆಯಲ್ಲಿ ಸಮಾಜ ಬಾಂಧವರು ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದೀರಿ. ಇದರಿಂದ ನಮ್ಮ ಒಗ್ಗಟ್ಟು ಪ್ರದರ್ಶನಗೊಂಡಂತಾಗಿದೆ. ನಿಮ್ಮೆಲ್ಲರ ಸಹಕಾರ ಮತ್ತು ನಮ್ಮ ಒಗ್ಗಟ್ಟು ನಿರಂತರವಾಗಿ ಹೀಗೆಯೇ ಇರಲಿ,” ಎಂದು ನುಡಿದರು.

ಅಭಿಮಾನಿಗಳ ಬಳಗದ ಉಪಾಧ್ಯಕ್ಷ ಗಂಗಾಧರ್ ಜೆ. ಪೂಜಾರಿ ಮಾತನಾಡಿ, “ಜಯ ಸುವರ್ಣರು ಸಮಾಜಕ್ಕೆ ನೀಡಿರುವ ಕೊಡುಗೆ ಮತ್ತು ಅವರ ಸಂಘಟನಾ ಶಕ್ತಿ ದೇಶದಾದ್ಯಂತ ಇರುವ ಬಿಲ್ಲವ ಸಮಾಜ ಬಾಂಧವರಿಗೆ ತಿಳಿದಿದೆ. ನಮ್ಮ ಒಗ್ಗಟ್ಟು ಹೀಗೆಯೇ ಮುಂದುವರಿಯಬೇಕು. ಸಮಾಜದ ಆಶೋತ್ತರಗಳಿಗೆ ನಾವು ಸದಾ ಸ್ಪಂದಿಸುತ್ತೇವೆ. ನಮ್ಮ ನಾಯಕರಾಗಿರುವ ಸೂರ್ಯಕಾಂತ್ ಜಯ ಸುವರ್ಣರ ನೇತೃತ್ವದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿವೆ,” ಎಂದರು.

ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿ, “ನಮ್ಮ ಒಗ್ಗಟ್ಟು ಹೀಗೆಯೇ ಮುಂದುವರಿಯಲಿದೆ. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಸಣ್ಣಪುಟ್ಟ ತೊಂದರೆಗಳಾಗಿರಬಹುದು. ಆದರೆ ಯಾರೂ ಕೂಡ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ತಡರಾತ್ರಿಯವರೆಗೂ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸಮಯವನ್ನು ನೀಡಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು,” ಎಂದರು.

ವೇದಿಕೆಯಲ್ಲಿ ಸಮಾಜದ ಮುಖಂಡರಾದ ಲಕ್ಷ್ಮಣ್ ಪೂಜಾರಿ, ಜಗನ್ನಾಥ್ ವಿ. ಕೋಟ್ಯಾನ್, ಜಯ ಸುವರ್ಣ ಅಭಿಮಾನಿಗಳ ಸಂಘಟನೆಯ ಕಾರ್ಯದರ್ಶಿ ಮೋಹನ್‌ದಾಸ್ ಜಿ. ಪೂಜಾರಿ, ನಾರಾಯಣ ಗುರು ಭಜನಾ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ, ಜಯ ಸಿ. ಸುವರ್ಣ ಯುವ ಅಭಿಮಾನಿಗಳ ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ, ಜಯ ಸಿ. ಸುವರ್ಣ ಮಹಿಳಾ ಅಭಿಮಾನಿಗಳ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲತೀಶ್ ಪೂಜಾರಿ, ಧನಂಜಯ ಶಾಂತಿ, ಚಿನ್ಮಯ್ ಸಾಲ್ಯಾನ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಶಶಿಧರ್ ಬಂಗೇರ ಮಟ್ಟು ನಿರೂಪಿಸಿ, ವಂದಿಸಿದರು.

—



Related posts

ಚಿಣ್ಣರಬಿಂಬದ ಇಪ್ಪತ್ತೊಂದನೆಯ ವರ್ಷದ ಮಕ್ಕಳ ಉತ್ಸವದ ಸಮಾರೋಪ .

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 80% ಫಲಿತಾಂಶ

Mumbai News Desk

ಡೊಂಬಿವಲಿ ಮಂಜುನಾಥ ವಿದ್ಯಾಲಯ ಕನ್ನಡ, ಆಂಗ್ಲ ಮಾಧ್ಯಮ ಶಾಲೆ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Mumbai News Desk

ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಒಡಿಯೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ, ದತ್ತು ಸ್ವಿಕಾರ, ‘ದಿಶಾ’ ಯಕ್ಷಗಾನ ಪ್ರದರ್ಶನ.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದ ‘ಹಳದಿ ಕುಂಕುಮ’ ಕಾರ್ಯಕ್ರಮ: ಸ್ತ್ರೀ ಶಕ್ತಿಯ ಸೌಹಾರ್ದ ಸಮಾಗಮ

Mumbai News Desk