
ಕಾಪು: ಕಾಲ ನಿರ್ಣಯ, ಪಂಚಾಂಗ ತಯಾರಿಕೆ ಹಾಗೂ ನಾಡಿವಿದ್ಯೆ ಸೇರಿದಂತೆ ಹತ್ತು ಹಲವು ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ, ಪುರಾತನ ಕಾಲದಲ್ಲಿ ಋಷಿಮುನಿಗಳು ತಪಸ್ಸನ್ನಾಚರಿಸಿ ಕಾಲಗರ್ಭದಲ್ಲಿ ಮರೆಯಾಗಿದ್ದ ಅಡ್ವೆ ನಂದಿಕೂರಿನ ಐತಿಹಾಸಿಕ ‘ನಿನ್ನಿಕಲ್ಲು ಪಾದೆ’ಯಲ್ಲಿ 1,008 ದೀಪಗಳನ್ನು ಬೆಳಗಿಸುವ ಮೂಲಕ ‘ಬಲಿ ಪರ್ಬ’ ಆಚರಣೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ತುಳುವ ಮಹಾಸಭಾ ಕಾಪು ವಲಯದ ನೇತೃತ್ವದಲ್ಲಿ ಹಾಗೂ ಅಡ್ವೆ ನಂದಿಕೂರು ಗ್ರಾಮಸ್ಥರ ಸಕ್ರಿಯ ಸಹಯೋಗದಲ್ಲಿ ಈ ದೀಪೋತ್ಸವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ನೂರಾರು ಹಣತೆಗಳ ಬೆಳಕಿನಲ್ಲಿ ಪುಣ್ಯಕ್ಷೇತ್ರ ಕಂಗೊಳಿಸಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹಾಗೂ ಬಾಲಕೃಷ್ಣ ಕತ್ತಲ್ಸಾರ್ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ‘ಬಲಿಂದ್ರ ಲೆಪ್ಪು’ ಕರೆದರು. ಬಳಿಕ ಮಾತನಾಡಿದ ಅವರು, ಬೆಳಕಿನ ಹಬ್ಬ ದೀಪಾವಳಿಯ ಮಹತ್ವ, ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಆಚರಣೆಗಳು ಹಾಗೂ ಅವುಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯ ಕುರಿತು ಉಪಯುಕ್ತ ಮಾಹಿತಿ ಹಂಚಿಕೊಂಡರು. ಸಮಾರಂಭದಲ್ಲಿ ನೆರೆದಿದ್ದ ನೂರಾರು ಭಕ್ತರಿಗೆ ಪಾನಕ, ಪಂಚಕಜ್ಜಾಯ ಹಾಗೂ ಉಪಹಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್ನ ನಿರ್ದೇಶಕ ರಾಜೇಶ್ ಆಳ್ವ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ಕಾರ್ಯದರ್ಶಿ ಮನೋಹರ್ ರೈ, ತುಳುವ ಮಹಾಸಭಾದ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ, ನಿನ್ನಿಕಲ್ಲ್ ಪಾದೆ ಪುನಶ್ಚೇತನ ಸಮಿತಿ ಪ್ರಧಾನ ಸಂಚಾಲಕ ವಿಜಿತ್ ಶೆಟ್ಟಿ ಕೊರಂಗ್ರಪಾಡಿ ದೊಡ್ಡಮನೆ, ಕಾಪು ತುಳುವ ಮಹಾಸಭಾ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ, ಪ್ರಧಾನ ಸಂಚಾಲಕ ವಿಕ್ಕಿ ಪೂಜಾರಿ ಮಡುಂಬು, ಪುನೀತ್ (ತುಳುನಾಡು ವಾರ್ತೆ), ಕಾಪು ತುಳುವ ಮಹಾಸಭಾ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ವೇತಾ ಎಲ್. ಶೆಟ್ಟಿ, ಜೊತೆ ಕಾರ್ಯದರ್ಶಿ ದೀಕ್ಷಾ ಶೆಟ್ಟಿ, ಸದಸ್ಯರಾದ ಹೇಮಲತಾ ಮತ್ತು ಸುಲೋಚನಾ ಶೆಟ್ಟಿ, ಕೋಟಿ ಚೆನ್ನಯ ಗೆಳೆಯರ ಬಳಗ ಅಡ್ವೆ ನಂದಿಕೂರು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








































































