
ಡೊಂಬಿವಲಿ: ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ, ಡೊಂಬಿವಲಿಯ ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ.) ಇದರ ನಿರ್ವಹಣೆಯಲ್ಲಿ ಸುವರ್ಣ ಸಂಭ್ರಮದ 10ನೇ ಸರಣಿ ಕಾರ್ಯಕ್ರಮವಾಗಿ ‘ಸಾಮೂಹಿಕ ಶ್ರೀ ಶನಿ ಮಹಾಪೂಜೆ’ಯು ನವೆಂಬರ್ 14ರಂದು ಮಂದಿರದ ಆವರಣದಲ್ಲಿ ಅತ್ಯಂತ ಭಕ್ತಿಭಾವ ಹಾಗೂ ಶ್ರದ್ಧೆಯಿಂದ ನೆರವೇರಿತು.

ಮಧ್ಯಾಹ್ನ ಮಂದಿರದ ಹಿರಿಯರಾದ ರತ್ನಾಕರ್ ಬಂಗೇರ ಅವರ ಮಾರ್ಗದರ್ಶನದಲ್ಲಿ ಶನಿದೇವರ ಕಲಶ ಪ್ರತಿಷ್ಠಾಪನೆ ಜರುಗಿತು. ಸಂಜೆ ಶನಿ ಗ್ರಂಥ ಪಾರಾಯಣವು ಸಂಪನ್ನಗೊಂಡಿತು. ಗ್ರಂಥ ಪಾರಾಯಣದ ಉದ್ಘಾಟನೆಯನ್ನು ಗಣ್ಯ ಅತಿಥಿಗಳಾದ ಶಿವಂ ಸಭಾಗೃಹದ ಮಾಲೀಕ ದೇವದಾಸ್ ಶೆಟ್ಟಿ, ಹೋಟೆಲ್ ಗೌರವ್ ಮಾಲೀಕ ಹರೀಶ್ ಶೆಟ್ಟಿ, ಮಂದಿರದ ಅಧ್ಯಕ್ಷರು, ಗೌರವ ಅಧ್ಯಕ್ಷರು ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರು ನೆರವೇರಿಸಿದರು.

ಸಮಾರಂಭದಲ್ಲಿ ಮಾತನಾಡಿದ ದೇವದಾಸ್ ಶೆಟ್ಟಿ, “ಶ್ರೀ ಮಹಾವಿಷ್ಣು ಮಂದಿರವು ಧಾರ್ಮಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಗಳಲ್ಲಿಯೂ ಗಣನೀಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಇಂದಿನ ಮಕ್ಕಳಿಗೆ ಭಜನೆಯ ಮಹತ್ವವನ್ನು ತಿಳಿಸಿಕೊಟ್ಟು, ಅವರನ್ನು ಮಂದಿರದ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ” ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಮಂದಿರದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಂತರ ಭಜನಾ ಸಂಕೀರ್ತನೆ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಜರುಗಿತು. ಮಂದಿರದ ಸದಸ್ಯರಾದ ಪ್ರಶಾಂತ್ ಪೂಜಾರಿ ದಂಪತಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಅನ್ನಸಂತರ್ಪಣೆಯ ಸೇವಾದಾರರಾದ ಸುಪ್ರಿಯಾ ಅರವಿಂದ್ ಪದ್ಮಶಾಲಿ ಹಾಗೂ ಸುರೇಶ್ ನಾಯಕ್ ಅವರನ್ನು ಇದೇ ಸಂದರ್ಭದಲ್ಲಿ ಪ್ರಸಾದ ನೀಡಿ ಗೌರವಿಸಲಾಯಿತು.

ಶನಿ ಗ್ರಂಥ ಪಾರಾಯಣದ ವಾಚಕರಾಗಿ ಮೋಹನ್ದಾಸ್ ಕೋಟ್ಯಾನ್, ಅರವಿಂದ್ ಪದ್ಮಶಾಲಿ, ಪ್ರಶಾಂತ್ ಪೂಜಾರಿ, ಸಚಿನ್ ಪೂಜಾರಿ, ಪ್ರೇಮಾ ಅಮೀನ್, ಪುರಂದರ ಪೂಜಾರಿ, ನಾರಾಯಣ ಸುವರ್ಣ, ಗೀತಾ ಮೆಂಡನ್, ರಾಜೇಶ್ ಕೋಟ್ಯಾನ್ ಹಾಗೂ ಅಣ್ಣಪ್ಪ ಮೊಗವೀರ ಸಹಕರಿಸಿದರು. ಪಾರಾಯಣದ ಅರ್ಥ ವಿವರಣೆಯನ್ನು ರತ್ನಾಕರ್ ಬಂಗೇರ, ಇಂದುಶೇಖರ್ ಸುವರ್ಣ, ಸುರೇಶ್ ಕರ್ಕೇರ, ರವಿ ಸುವರ್ಣ, ಉದಯ ಕರುಣಾಕರ್, ಶೇಖರ್ ಮೆಂಡನ್, ಸೋಮನಾಥ್ ಪೂಜಾರಿ ಹಾಗೂ ಲೀಲೇಶ್ ಸುವರ್ಣ ಅವರು ನೀಡಿದರು.
ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡು ಶನಿದೇವರ ಕೃಪೆಗೆ ಪಾತ್ರರಾದರು. ಮಂದಿರದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಇಂದ್ರಾಳಿ ದಿವಾಕರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ರವಿ ಸನಿಲ್, ಮೋಹನ್ ಸಾಲಿಯಾನ್ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ತುಳು-ಕನ್ನಡಿಗ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಪೂಜಾ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.












