
ಓಮಾನ್ ಮಸ್ಕತ್ ಸುಲ್ತಾನೇಟ್ ಆಫ್ ಓಮಾನ್ನ ರಾಷ್ಟ್ರೀಯ ದಿನಾಚರಣೆಯನ್ನು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಓಮಾನ್ ಘಟಕದ ವತಿಯಿಂದ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಹಾಗೂ ಲಹೂಬ್ ಗ್ರೂಪ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಸಲಾಂ ಅಲ್ ರಹಾಬಿ ಅವರು ಜಂಟಿಯಾಗಿ ಕೇಕ್ ಕತ್ತರಿಸಿ ಓಮಾನ್ ಸುಲ್ತಾನರಿಗೆ ಹಾಗೂ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಕೋಟ್ಯಾನ್ ಅವರು, ಓಮಾನ್ ನಮ್ಮ ಕರ್ಮಭೂಮಿ. ಅನಿವಾಸಿ ಭಾರತೀಯರಿಗೆ ಶಾಂತಿ, ನೆಮ್ಮದಿ ಹಾಗೂ ಸಮೃದ್ಧ ಬದುಕಿನೊಂದಿಗೆ ತಮ್ಮ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅವಕಾಶ ನೀಡಿದ ಈ ರಾಷ್ಟ್ರಕ್ಕೆ ನಾವು ಸದಾ ಕೃತಜ್ಞರು. ದೇಶದ ಕಾನೂನು, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಓಮಾನ್ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದರು.

ಶ್ರೀ ಇಮ್ರಾನ್ ಶೇಖ್ ಹಾಗೂ ಶ್ರೀ ವಿಶ್ವನಾಥ್ ಅವರು ರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿ, ಭಾರತ, ಓಮಾನ್ ನಡುವಿನ ಐತಿಹಾಸಿಕ ಸ್ನೇಹ ಹಾಗೂ ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ಓಮಾನ್ ದೇಶದ ಶಾಂತಿ, ಏಕತೆ ಮತ್ತು ಸಮೃದ್ಧಿಗಾಗಿ ಶುಭ ಹಾರೈಸಿದರು.












