
ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕೊಡೇರಿ ಇದರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವವು ನವೆಂಬರ್ 21ರಂದು ಕೊಡೇರಿಯಲ್ಲಿ ಬಲು ವಿಜೃಂಭಣೆಯಿಂದ ಜರುಗಿತು. ಸಾಂಪ್ರದಾಯಿಕವಾಗಿ ನಡೆದುಬಂದ ಈ ಕಂಬಳಕ್ಕೆ ಬಿಲ್ಲವ ಸಮಾಜ ಸೇವಾ ಸಂಘವು ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ಆಕರ್ಷಕ ಬಹುಮಾನಗಳನ್ನು ನೀಡಿ ಕೋಣಗಳ ಮಾಲೀಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಸುಮಾರು 72 ಜೋಡಿ ಕೋಣಗಳು ಈ ಕಂಬಳೋತ್ಸವದಲ್ಲಿ ಭಾಗವಹಿಸಿದ್ದು, ಕನಿಷ್ಠ ಅವಧಿಯಲ್ಲಿ ನಿಗದಿತ ಗುರಿ ತಲುಪಿದ ಕೋಣಗಳ ಮಾಲೀಕರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು. ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಬಿಲ್ಲವ ಸಂಘದ ಗೌರವಾಧ್ಯಕ್ಷ ಮಹಾದೇವ ಪೂಜಾರಿಯವರು ಸಂಘದ ಪದಾಧಿಕಾರಿಗಳು ಹಾಗೂ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ 80ನೇ ವರ್ಷದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಕೋಣಗಳ ವಯೋಮಿತಿಗೆ ಅನುಗುಣವಾಗಿ ಸಬ್ ಜ್ಯೂನಿಯರ್, ಹಗ್ಗ ಕಿರಿಯ, ಹಗ್ಗ ಹಿರಿಯ ಮತ್ತು ಹಲಗೆ (ಮುಕ್ತ) ಹೀಗೆ ನಾಲ್ಕು ವಿಭಾಗಗಳಿಗೆ ಸ್ಪರ್ಧಾ ಓಟ ಆರಂಭಿಸಲಾಯಿತು. ಕೋಣಗಳ ಓಟದ ಸಮಯ ಗುರುತಿಸಲು ಸೆನ್ಸರ್ ಅಳವಡಿಸಲಾಗಿದ್ದು, ತನ್ನ ಸವಾರನೊಂದಿಗೆ ನಿಗದಿತ ಗುರಿ ತಲುಪಿದ ಕೋಣಗಳ ಮಾಲೀಕರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

80ನೇ ವರ್ಷದ ಕಂಬಳದ ಫಲಿತಾಂಶ:
- ಹಲಗೆ ವಿಭಾಗ:
- ಪ್ರಥಮ – ಅಡ್ವಿನ್ ರವಿರಾಜ್ ಶೆಟ್ಟಿ ಕೊಡ್ಲಾಡಿ, ನೇರಳಕಟ್ಟೆ
- ದ್ವಿತೀಯ – ಮೊಳೆಬೈಲು ದಿ| ಸುಕ್ರ ಪೂಜಾರಿ, ಗಂಗೆಬೈಲು ಕೊಡೇರಿ ಮತ್ತು ಗಣೇಶ ಪೂಜಾರಿ ಸಾಸ್ತಾನ, ಪಾಂಡೇಶ್ವರ
- ಹಗ್ಗ ಹಿರಿಯ ವಿಭಾಗ:
- ಪ್ರಥಮ – ಶ್ರೀ ಸ್ವಾಮಿಧಾಮ ಹೊಳೆಕಟ್ಟು, ಕುಂಭಾಶಿ
- ದ್ವಿತೀಯ – ಆನಂದ ದೇವಾಡಿಗ ಮೇಲ್ ಗುಡ್ಡೆಮನೆ, ತೆಕ್ಕಟ್ಟೆ
- ತೃತೀಯ – ಗಾಡಿ ಭೋಜ ಕೂಸ ಪೂಜಾರಿ, ಗಿರಿಜಾ ರೋಡ್‌ಲೈನ್ಸ್
- ಹಗ್ಗ ಕಿರಿಯ ವಿಭಾಗ:
- ಪ್ರಥಮ – ಸಮೃದ್ಧಿ-ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್, ಕಂಚಿಕಾನ್
- ದ್ವಿತೀಯ – ಫಿನ್ನುಪಾಲ್ ಎಚ್. ಎನ್. ನಿವಾಸ, ಭಟ್ಕಳ
- ತೃತೀಯ – ಅಗಸ್ತ್ಯ ಫ್ರೆಂಡ್ಸ್, ಗಾಂಧಿನಗರ
- ಸಬ್ ಜ್ಯೂನಿಯರ್ ವಿಭಾಗ:
- ಪ್ರಥಮ – ದಿ| ಬಾಬಣ್ಣ ನಾಯ್ಕ್ ವಡ್ಡಾಪಿ, ಕೊಕ್ಕರ್ಣೆ
- ದ್ವಿತೀಯ – ಪ್ರಜ್ವಲ್-ಪ್ರಣವ್ ಕಂದಾವರ, ಉಳ್ಳೂರು
- ತೃತೀಯ – ಚಂದ್ರ ದೇವಾಡಿಗ, ಕಲ್ಲತೊಡ್ಮೆ ಮನೆ ನಾಗೂರು
ಇವರ ಕೋಣಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ತಮ್ಮ ಮಾಲೀಕರಿಗೆ ಬಹುಮಾನ ತಂದುಕೊಡುವಲ್ಲಿ ಯಶಸ್ವಿಯಾದವು. ಕೊಡೇರಿ ಹಕ್ರೆಮಠ ಕಂಬಳೋತ್ಸವಕ್ಕೆ ತಮ್ಮ ಬಾಬ್ತು ಓಟದ ಕೋಣಗಳೊಂದಿಗೆ ಆಗಮಿಸಿದ ಕೋಣಗಳ ಮಾಲೀಕರನ್ನು ಸಾಂಪ್ರದಾಯಿಕವಾಗಿ ವೀಳ್ಯ ನೀಡಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೇರಂಜಾಲು ಗೋಪಾಲ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ಸಂಘದ ಆಶ್ರಯದಲ್ಲಿ ಜರುಗಿದ ಕಂಬಳೋತ್ಸವ ಸಂಜೆ ಸಂಪನ್ನಗೊಂಡ ಬಳಿಕ ಸಮಾರೋಪ ಸಮಾರಂಭ ಆಯೋಜಿಸಿ ವಿಜೇತ ಕೋಣಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. ಬಿಲ್ಲವ ಸಂಘದ ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ ಮಹಾದೇವ ಪೂಜಾರಿ, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಪೂಜಾರಿ ಹಾಗೂ ಅತಿಥಿಗಳು ಮತ್ತು ಸಂಘದ ಪದಾಧಿಕಾರಿಗಳು ವಿಜೇತ ಕೋಣಗಳ ಮಾಲೀಕರಿಗೆ ಬಹುಮಾನ ವಿತರಿಸಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ವೆಂಕಟೇಶ್ ಪೂಜಾರಿ, ನಾರಾಯಣ ಪೂಜಾರಿ ಕಾಡ್ಕೇರಿ, ಈಶ್ವರ ದೇವಾಡಿಗ, ಗಣೇಶ ಖಾರ್ವಿ, ಶೇಖರ ಖಾರ್ವಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸಸಿಹಿತ್ಲು, ಬೈಂದೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಸುಬ್ಬಣ್ಣ ಶೆಟ್ಟಿ ನಾಗೂರು, ಶೇಖರ ಪೂಜಾರಿ ಉಪ್ಪುಂದ, ಗಣೇಶ ಪೂಜಾರಿ ಹೊಸ್ಕೋಟೆ, ಪ್ರಮೋದ್ ಪೂಜಾರಿ ಕೊಡೇರಿ ಮತ್ತಿತರರು ಕಂಬಳಕ್ಕೆ ಆಗಮಿಸಿ ಶುಭ ಕೋರಿದರು. ಕಿಶೋರ್ ಪೂಜಾರಿ ಸಸಿಹಿತ್ಲು, ಅಭಿಜಿತ್ ಪಾಂಡೇಶ್ವರ ಮತ್ತು ಗಣೇಶ ಕೊಠಾರಿ ವೀಕ್ಷಕ ವಿವರಣೆಯನ್ನು ನೀಡಿದರೆ, ಆನಂದ ಪೂಜಾರಿ ಕೊಡೇರಿ ನಿರೂಪಿಸಿದರು. ಕೊನೆಯಲ್ಲಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ವಂದಿಸಿದರು. ಕೋಶಾಧಿಕಾರಿ ರಾಘವೇಂದ್ರ ಪೂಜಾರಿ, ಗಜ್ನಾರ ಭಾಸ್ಕರ ಪೂಜಾರಿ, ಹೊಸ್ಮನೆ ಭಾಸ್ಕರ ಪೂಜಾರಿ, ವಿಜಯ್ ಪೂಜಾರಿ, ಶೇಖರ ಪೂಜಾರಿ, ಚಂದ್ರ ಪೂಜಾರಿ, ರವಿರಾಜ್ ಪೂಜಾರಿ, ನಾಗರಾಜ್ ಪೂಜಾರಿ, ದಿನೇಶ್ ಪೂಜಾರಿ, ಅಶ್ವಿತ್ ಪೂಜಾರಿ, ರಿತಿಕ್ ಪೂಜಾರಿ, ರಾಜು ಪೂಜಾರಿ, ಸುಧಾಕರ ಪೂಜಾರಿ ಶಿರಸಿ, ಸಂಜೀವ ಪೂಜಾರಿ, ಗೋವಿಂದ ಪೂಜಾರಿ, ರಂಜಿತ್ ಪೂಜಾರಿ ಮತ್ತಿತರರು ಕಂಬಳೋತ್ಸವ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಹೊಸ್ಮನೆ, ಮೇಲ್ ಮೊಳೆಬೈಲು, ಕೆಳ ಮೊಳೆಬೈಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮತ್ತು ಸಂಘದ ಸದಸ್ಯರ ಸಹಕಾರದಿಂದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 80ನೇ ವರ್ಷದ ವಾರ್ಷಿಕ ಕಂಬಳೋತ್ಸವವು ಬಲು ವಿಜೃಂಭಣೆಯಿಂದ ಜರುಗಿತು.












