
ದೇಶದ 61 ಶಕ್ತಿಪೀಠಗಳಲ್ಲಿ ಒಂದಾಗಿದ್ದು ಮಹಾರಾಷ್ಟ್ರ ಹಾಗೂ ಗುಜರಾತ್ ನ ಅಸಂಖ್ಯ ಭಾವಿಕರ ಶೃದ್ಧಾಸ್ಥಾನವಾಗಿರುವ ಡಹಾಣೂವಿನ ಶ್ರೀ ಮಹಾಲಕ್ಶ್ಮೀ ಮಂದಿರದಲ್ಲಿನ ವಾರ್ಷಿಕ ಜಾತ್ರೆಯು ಇದೇ ಎಪ್ರಿಲ್ 23 ರ ಹನುಮಾನ್ ಜಯಂತಿಯಂದು ಆರಂಭವಾಗಿದೆ.

ಮುಂಬೈ ಅಹಮದಾಬಾದ್ ರಾಜಮಾರ್ಗದಲ್ಲಿನ ಚಾರೋಟಿಯ ಡಹಾಣೂ ನಾಸಿಕ್ ಕೂಡುರಸ್ತೆಯಲ್ಲಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿನ ವಿವಲ್ ವೇಡೆ ಯಲ್ಲಿ ಹೈವೇ ಬದಿಯಲ್ಲಿಯೇ ಇರುವ ಈ ಪ್ರಸಿದ್ಧ ಮಂದಿರದಲ್ಲಿ ಚೈತ್ರ ಪೂರ್ಣಿಮೆಯಂದು ಆರಂಭವಾಗಿ ಕೃಷ್ಣ ಪಕ್ಷದ ಅಷ್ಟಮಿಯ ತನಕ ಸುಮಾರು 15 ರಿಂದ 20 ದಿನ ಜರಗುವ ಈ ಜಾತ್ರೆಗೆ ದೂರದ ಊರುಗಳಿಂದ ಅಸಂಖ್ಯ ಭಕ್ತಾದಿಗಳು ಆಗಮಿಸುತ್ತಾರೆ.

ಸ್ಥಳೀಯ ಆದಿವಾಸಿಗಳಾದ ‘ವಾರಲಿ ‘ ಯವರ ಕುಲದೇವಿ ( ರಾಣಿ ಆಯೀ) ಎಂದೇ ನಂಬಿಕೊಂಡು ಪೂಜಿಸಲ್ಪಡುವ ಈ ಮಂದಿರದ ಆಡಳಿತ ಹಾಗೂ ಪೂಜಾ ವಿಧಿವಿಧಾನಗಳನ್ನು ಇಲ್ಲಿನ ಸಾತವೀ ಕುಟುಂಬಸ್ಥರು ನಡೆಸಿಕೊಂಡು ಬರುತ್ತಾರೆ.
ಒಂದು ಗ್ರಾಮದ ಜಾತ್ರೆಯ ಪರಿಪೂರ್ಣ ಸ್ವರೂಪವುಳ್ಳ ಈ ಜಾತ್ರೆಯಲ್ಲಿ ಭಾಗವಹಿಸಿ ಆನಂದಿಸಲು ಸ್ಥಳೀಯರು ಹಾಗೂ ಪರವೂರಿನ ಅಸಂಖ್ಯ ಭಕ್ತರು ಬರುತ್ತಾರೆ.
ಕೆಳಗೆ ಭವ್ಯ ದೇವೀ ಮಂದಿರವಿದ್ದು ಪೂರ್ಣಿಮೆಯಂದು ಜರಗುವ ಹೋಮದಲ್ಲಿ ಭಾಗವಹಿಸಲು ಹಾಗೂ ಅನತಿ ದೂರದಲ್ಲಿರುವ ಬೆಟ್ಟದ ಶಿಖರದ 1400 ಅಡಿ ಎತ್ತರದ ( ಮುಸಳ್ಯಾ ಡೋಂಗರ್) ಮೇಲೆ ರಾತ್ರಿಯಲ್ಲಿ ಜರಗುವ ಧ್ವಜಾರೋಹಣವನ್ನು ವೀಕ್ಢಿಸಲು ಸಾವಿರಾರು ಜನರು ಆಗಮಿಸುತ್ತಾರೆ.
ಮಾಧ್ಯಮ ವರದಿ
ಪಿ.ಆರ್.ರವಿಶಂಕರ್ ಡಹಾಣೂರೋಡ್
8483980035