34 C
Mumbai
October 7, 2026
Mumbai News Kannada
ತುಳುನಾಡು

ಹೊಸ ಅಂಗಣ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮ ‘ವಿಶೇಷ ಸಂಚಿಕೆ’ ಹಾಗೂ ಹರಿಶ್ಚಂದ್ರ ಟಿ. ಸಾಲ್ಯಾನ್‌ರ 25ನೇ ಕೃತಿ ‘ತುಳುನಾಡ ಮದುವೆ’ ಬಿಡುಗಡೆ



ಚಿತ್ರ-ವರದಿ: ಉಮೇಶ್ ಕೆ. ಅಂಚನ್

ಮುಲ್ಕಿ, ಅ. 5: ಮುಲ್ಕಿ ಪರಿಸರದ ಹೆಸರಾಂತ ಮಾಸಪತ್ರಿಕೆ ‘ಹೊಸ ಅಂಗಣ’ ಇದರ ದಶಮಾನೋತ್ಸವ ಸಮಾರಂಭವು ಭಾನುವಾರ, ಅ. 4ರಂದು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, “ಹರಿಶ್ಚಂದ್ರ ಪಿ. ಸಾಲ್ಯಾನರು ನಿವೃತ್ತ ಜೀವನದಲ್ಲಿ ವಿಶ್ರಾಂತಿ ಪಡೆಯುವ ಬದಲು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು, ಹಲವಾರು ಉತ್ತಮ ಕೃತಿಗಳನ್ನು ಲೋಕಾರ್ಪಣೆ ಮಾಡಿರುವುದರೊಂದಿಗೆ ‘ಹೊಸ ಅಂಗಣ’ ಮಾಸಿಕ ಪತ್ರಿಕೆಯ ದಶಮಾನೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಇವರ ಸಾಹಿತ್ಯ ಸೇವೆಯು ನಿರಂತರವಾಗಿ ಸಾಗಲಿ ಹಾಗೂ ಯುವ ಸಾಹಿತಿಗಳಿಗೆ ಪ್ರೇರಣೆಯಾಗಲಿ,” ಎಂದು ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಸಾಲ್ಯಾನ್‌‌ರ ಸಾಹಿತ್ಯ ಸೇವೆಗೆ ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಲ್ಯಾನ್‌ರವರ 25ನೇ ಕೃತಿ ‘ತುಳುನಾಡ ಮದುವೆ’ಯನ್ನು ಬಿಡುಗಡೆಗೊಳಿಸಿ, “‘ಹೊಸ ಅಂಗಣ’ ಪತ್ರಿಕೆಯು ಅತ್ಯುತ್ತಮ ಲೇಖನ ಹಾಗೂ ವಿಷಯ-ವಿಶೇಷಗಳೊಂದಿಗೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿರುವುದು ಶ್ಲಾಘನೀಯ. ಪತ್ರಿಕೆಯು ತನ್ನ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಪತ್ರಿಕಾ ಧರ್ಮವನ್ನು ಕಾಪಾಡಿ ನೂರ್ಕಾಲ ಬಾಳಲಿ,” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ‘ಹೊಸ ಅಂಗಣ’ ಪತ್ರಿಕೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾನುಮತಿ ಶೆಟ್ಟಿ ಕಕ್ವಗುತ್ತು, ಸರೋಜಿನಿ ಸುವರ್ಣ, ಸುರೇಂದ್ರ ಜಿ. ಶೆಣೈ, ಎ. ಕೃಷ್ಣಾನಂದ ಶೆಟ್ಟಿ ಐಕಳ, ಜೈಕೃಷ್ಣ ಕೋಟ್ಯಾನ್, ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ದಿನೇಶ್ ಕೆ. ಶೆಟ್ಟಿ ಮತ್ತು ಪುನೀತ್‌ಕೃಷ್ಣ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಪತ್ರಿಕೆಯ ಗೌರವ ಸಲಹೆಗಾರರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬರ್ನಾರ್ಡ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ, ‘ಯುಗಪುರುಷ’ ಸಂಪಾದಕ ಭುವನಾಭಿರಾಮ ಉಡುಪ, ನ್ಯಾಯವಾದಿ ಭಾಸ್ಕರ ಹೆಗ್ಡೆ, ಶಾಂಭವಿ ಜೇಸಿಐ ಟ್ರಸ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹಬೀಬುಲ್ಲಾ, ಕಾಂತು ಸೇರ್ವೆಗಾರ್, ಧರ್ಮಚಾವಡಿ ಅಧ್ಯಕ್ಷ ವಾಸು ಪೂಜಾರಿ ಹಾಗೂ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಟಿ. ಸಾಲ್ಯಾನ್ ಪತ್ರಿಕೆಯ ಬೆಳವಣಿಗೆ ಹಾಗೂ ತಮ್ಮ ಕೃತಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಾ ಎಚ್. ಸಾಲ್ಯಾನ್, ಅಕ್ಷಯ್ ಎಚ್. ಸಾಲ್ಯಾನ್, ತುಷಾರ್ ಎಚ್. ಸಾಲ್ಯಾನ್ ಮತ್ತು ಲಿವನ್ ಬೆಂಗಳೂರು ಸಹಕರಿಸಿದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, “ನಿರಂತರ ಓದುವ ಹವ್ಯಾಸ ವ್ಯಕ್ತಿಯನ್ನು ಜ್ಞಾನವಂತನನ್ನಾಗಿಸುತ್ತದೆ. ಅದಕ್ಕನುಗುಣವಾಗಿ ನಾಡಿನ ಉತ್ತಮ ಲೇಖಕರ ಬರಹಗಳು ಹಾಗೂ ವಾರ್ತೆಗಳೊಂದಿಗೆ ಈ ಮಾಸಪತ್ರಿಕೆಯು ಪ್ರಕಟಗೊಳ್ಳುತ್ತಿದೆ. ಇಂದಿನ ಜಂಜಾಟದ ಬದುಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ಅತ್ಯಂತ ಅಗತ್ಯ,” ಎಂದರು.

ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಎಸ್‌ಎನ್‌ಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹರೀಂದ್ರ ಸುವರ್ಣ, ಮುಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಕನ್ನಂಗಾರ್ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶೀನ ಪೂಜಾರಿ, ಉದ್ಯಮಿಗಳಾದ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಹಾಗೂ ಪ್ರಭಾಕರ ಪೂಜಾರಿ, ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ ಅತಿಥಿಗಳಾಗಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಲ್ಕಿಯ ಚಂದ್ರಿಕಾ ಮತ್ತು ಮಮತಾ ಅವರ ಪ್ರಾರ್ಥನೆಯೊಂದಿಗೆ, ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಿನೇಶ್ ಕೆ. ಶೆಟ್ಟಿ ಹಾಗೂ ವೈ.ಎನ್. ಸಾಲ್ಯಾನ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ರಂಗಮಿಶ್ರಣ ಮಂಗಳೂರು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚರಣ್ ಬಜಪೆ ಹಾಗೂ ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.



Related posts

ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ  ಕ್ರಿಕೆಟ್ ಪಂದ್ಯಾಕೂಟ : ಶಾಲೆಗೆ ರೂಪಾಯಿ 1,67,875/ ಹಸ್ತಾಂತರ.

Mumbai News Desk

ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅನಂದ ಶೆಟ್ಟಿ ಎಕ್ಕಾರ್ ಕುಟುಂಬಿಕರಿಂದ ಡಕ್ಕೆಬಲಿ ಸೇವೆ

Mumbai News Desk

ಕೋಸ್ಟಲ್ ಫಿಲ್ಮ್ ಅವಾರ್ಡ್ಸ್: “ಜೈ” ತುಳು ಚಿತ್ರದ ನಟನೆಗೆ ಅಕ್ಷರ್ ಜಗನ್ನಾಥ್ ಶೆಟ್ಟಿ ಬಾಳಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ

Mumbai News Desk

ಬಜ್ಪೆಯಲ್ಲಿ ಮುಂಬೈಯ ಪುರುಷೋತ್ತಮ ಬೆಲ್ಚಡ ದಂಪತಿಗಳಿಂದ ಹರಕೆಯ ಯಕ್ಷಗಾನ ಸೇವೆ: ಕಲಾವಿದರುಗಳಾದ ಅರವಿಂದ ಬೋಳಾರ್ ಹಾಗೂ ಮನ್ವಿತ್ ನಿಡ್ಡೋಡಿ ಅವರಿಗೆ ಸನ್ಮಾನ

Mumbai News Desk

‘ಹೊಸ ಅಂಗಣ’ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Mumbai News Desk

ಕೂತಲ್ಲೇ ಸಿಕ್ತು ಬೂತಾಯಿ ಮೀನಿನ ‘ಲಾಟರಿ’: ಉಳ್ಳಾಲ ತೀರದಲ್ಲಿ ಪ್ರಕೃತಿಯ ‘ಬಂಪರ್ ಆಫರ್

Mumbai News Desk