
ಮುಂಬೈ, ಅ. 9: ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿಜಿಯವರ ಶಿಷ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತ ಹಸ್ತದಿಂದ 1ನೆಯ ಫೆಬ್ರವರಿ 2026 ರಂದು ಉದ್ಘಾಟನೆಗೊಂಡು ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ- ‘ಶ್ರೀ ರಾಮ ಕಥಾ ಹೃದಯಂ’ ಎಂಬ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹದಿನಾರನೆಯ ಪ್ರಸ್ತುತಿಯಾದ ‘ಇಂದ್ರಜಿತು ಕಾಳಗ’ ಎಂಬ ಕಥಾಪ್ರಸಂಗವು ದಿನಾಂಕ 10 – 10- 2026 ರ ಶನಿವಾರದಂದು ಮಧ್ಯಾಹ್ನ 2:30 ಕ್ಕೆ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನ ಗಾಂವ್‌ದೇವಿ ವಿದ್ಯಾ ವಿಹಾರ್ ಇಲ್ಲಿ ಮುಂಬೈಯ ಖ್ಯಾತ ಕಲಾವಿದರ ಸಹಯೋಗದಿಂದ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಅಧೋಕ್ಷಜ ಮಠಾಧೀಶರು, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಇವರ ದಿವ್ಯ ಉಪಸ್ಥಿತಿಯಲ್ಲಿ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನೆರವೇರಲಿರುವುದು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ಆರ್. ಕೆ. ಶೆಟ್ಟಿ (ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ) ಆಗಮಿಸಲಿರುವರು.
ಆ ದಿನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಮುಂಬೈ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರುಗಳಾದ ಶ್ರೀನಿವಾಸ ಸಾಪಲ್ಯ (ಕಲಾವಿದರು), ಸೀತಾರಾಮ ಬಂಗೇರ (ಕಲಾವಿದರು), ಪ್ರವೀಣ ಶೆಟ್ಟಿ ಕಟೀಲು (ಹಿಮ್ಮೇಳ ವಾದಕರು), ಸದಾನಂದ ಪಾಟ್ಕರ್ (ಕಲಾವಿದರು), ಮಂಜುನಾಥ ಶೆಟ್ಟಿಗಾರ್(ಕಲಾವಿದರು) ಶ್ರೀಮತಿ ಸುನೀತಾ ಸುವರ್ಣ (ಕಲಾವಿದರು), ಪ್ರಕಾಶ ಶೌಡೆ (ಕಲಾವಿದರು) ಮಹೇಂದ್ರ ಶೆಟ್ಟಿ ನಂದ್ರೋಳ್ಳಿ (ಕಲಾವಿದರು) ಇವರನ್ನು ಸಪತ್ನೀಕರಾಗಿ ಗೌರವಿಸಲಾಗುವುದು.
ಕಲಾಭಿಮಾನಿಗಳು ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಸಂಚಾಲಕರು ಮತ್ತು ಕಲಾವಿದರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೊಳ್ಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



