ಡೊಂಬಿವಲಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಮಿನಿ ತುಳುನಾಡು ಎಂದು ಹೆಸರುವಾಸಿಯಾಗಿರುವ ಡೊಂಬಿವಲಿ ನಗರದ ಪ್ರತಿಷ್ಠಿತ ‘ಶ್ರೀ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ’ಯು ತನ್ನ 62ನೇ ವಾರ್ಷಿಕ ನವರಾತ್ರೋತ್ಸವವನ್ನು ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಅವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ.
ಇತಿಹಾಸ ಹಾಗೂ ಹಿನ್ನೆಲೆ: 1962ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯನ್ನು ಸುವ್ಯವಸ್ಥಿತವಾಗಿ ಕಟ್ಟಿ, ವಿಹಾರ್ ಹೋಟೆಲಿನಲ್ಲಿ ಭಜನಾ ಸೇವೆಯನ್ನು ಪ್ರಾರಂಭಿಸಿದ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ದಾಸು ಬಾಬು ಶೆಟ್ಟಿಯವರ ಮುತುವರ್ಜಿಯಿಂದ ಈ ಉತ್ಸವದ ಬೀಜಾಂಕುರವಾಯಿತು.1964ರಲ್ಲಿ ಹೋಟೆಲ್ ಸಮೀಪದಲ್ಲಿದ್ದ ನೇರಳೆ ಮರದ ಪ್ರದೇಶದಲ್ಲಿ ಸಾರ್ವಜನಿಕವಾಗಿ ನವರಾತ್ರೋತ್ಸವವನ್ನು ಆರಂಭಿಸಲಾಯಿತು.
1989ರಲ್ಲಿ ನಡೆದ ರಜತ ಮಹೋತ್ಸವವನ್ನು ರವೀಂದ್ರ ದಾಸು ಶೆಟ್ಟಿ, ಸಂಜೀವ ಕೆ. ಶೆಟ್ಟಿ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ದೇವಿಗೆ ರಜತ ಕಿರೀಟ, ರಜತ ಮಂಟಪ, ರಜತ ಪೀಠ ಸಮರ್ಪಿಸುವ ಮೂಲಕ ಯಶಸ್ವಿಯಾಗಿ ಆಚರಿಸಲಾಯಿತು.
2014ರಲ್ಲಿ ಸುವರ್ಣ ಮಹೋತ್ಸವವನ್ನು ಅಶೋಕ್ ದಾಸು ಶೆಟ್ಟಿಯವರ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಸುವರ್ಣ ಕಿರೀಟ, ಸುವರ್ಣ ಆಭರಣಗಳನ್ನು ಸಮರ್ಪಿಸಲಾಯಿತು. ಅಶೋಕ್ ಶೆಟ್ಟಿಯವರ ಸೇವೆಯನ್ನು ಗುರುತಿಸಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ‘ಧರ್ಮದರ್ಶಿ’ ಬಿರುದನ್ನು ನೀಡಿ ಆಶೀರ್ವದಿಸಿದ್ದರು. 2024ರಲ್ಲಿ ಮಂಡಳಿಯ ವಜ್ರ ಮಹೋತ್ಸವದ ಅಂಗವಾಗಿ ದೇವಿಗೆ ವಜ್ರದ ಕಿರೀಟ, ಆಭರಣಗಳನ್ನು ಸಮರ್ಪಿಸಿ ಪೂಜಿಸಲಾಯಿತು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಮಂಡಳಿಯ ಸ್ಥಾಪನೆಯಿಂದ 26 ವರ್ಷಗಳ ಕಾಲ ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ಅವರು ನಿರಂತರ ಪೂಜೆ ಸಲ್ಲಿಸಿದ್ದು, ನಂತರ ಅವರ ಶಿಷ್ಯರಾದ ಶುಭಕರ್ ಭಟ್ ಹಾಗೂ ರಾಜೇಶ್ ಭಟ್, ರವೀಶ್ ಭಟ್ ಅವರು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ದೇವತಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ.
ವಿಶೇಷ ಕಾರ್ಯಕ್ರಮಗಳ ವಿವರ:
ಅಕ್ಟೋಬರ್ 10 (ಶನಿವಾರ): ಸಂಜೆ 6:00 ಗಂಟೆಗೆ ಡೊಂಬಿವಲಿ ಪಶ್ಚಿಮದ ಬ್ರಾಹ್ಮಣ ಸಭಾ ಭವನದಿಂದ ವಿವಿಧ ವೇಷ-ಭೂಷಣಗಳೊಂದಿಗೆ ಶ್ರೀ ದೇವಿಯ ಭವ್ಯ ಮೆರವಣಿಗೆ.
ಅಕ್ಟೋಬರ್ 11 (ಭಾನುವಾರ): ಬೆಳಿಗ್ಗೆ 8:00 ಗಂಟೆಗೆ ಗಣಹೋಮ, 9:30ಕ್ಕೆ ಪ್ರಾಣ ಪ್ರತಿಷ್ಠಾಪನೆ, 10:30ಕ್ಕೆ ಉಗ್ರಾಣ ಪೂಜೆ. ರಾತ್ರಿ 8:00ಕ್ಕೆ ಖ್ಯಾತ ಹಿನ್ನೆಲೆ ಗಾಯಕ ಹರೀಶ್ ಶೆಟ್ಟಿ ಎರ್ಮಾಳ್ ಅವರಿಂದ ಭಜನಾ ಲಹರಿ.
ಅಕ್ಟೋಬರ್ 13 (ಮಂಗಳವಾರ): ಸಂಜೆ 6:30ಕ್ಕೆ ಪುತ್ತೂರು ಚಂದ್ರಹಾಸ ರೈ ಬಳಗದವರಿಂದ ಭಕ್ತಿ ಭಜನಾ ಲಹರಿ.
ಅಕ್ಟೋಬರ್ 15 ಮತ್ತು 16 (ಗುರುವಾರ-ಶುಕ್ರವಾರ): ಸಂಜೆ 3:30ಕ್ಕೆ ಹಳದಿ-ಕುಂಕುಮ, ರಾತ್ರಿ 7:30ಕ್ಕೆ ರಂಗ ಪೂಜೆ.
ಅಕ್ಟೋಬರ್ 17 (ಶನಿವಾರ): ಬೆಳಿಗ್ಗೆ 11:00ಕ್ಕೆ ವಿಜಯ ಶೆಟ್ಟಿ ಮೂಡುಬೆಳ್ಳೆ ಅವರಿಂದ ಭಜನಾ ಕಾರ್ಯಕ್ರಮ, ಸಂಜೆ 6:00ರಿಂದ ಶ್ರೀಧರ ರೈ ಹಾಗೂ ಬಳಗದಿಂದ ಭಜನೆ.
ಅಕ್ಟೋಬರ್ 18 (ಭಾನುವಾರ): ಸಂಜೆ 6:00ಕ್ಕೆ ಮಕ್ಕಳಿಂದ ನಾಟ್ಯ ವೈಭವ ಹಾಗೂ ಮಹಿಳಾ ಕಲಾವಿದರಿಂದ ದಿವಂಗತ ಸಂಜೀವ ಶೆಟ್ಟಿಯವರ ಸ್ಮರಣಾರ್ಥ ಶ್ರೀಮತಿ ಕಸ್ತೂರಿ ಎಸ್. ಶೆಟ್ಟಿ ಪ್ರಾಯೋಜಕತ್ವದಲ್ಲಿ ‘ದಕ್ಷ ಯಜ್ಞ’ ತಾಳಮದ್ದಳೆ.
ಅಕ್ಟೋಬರ್ 19 (ಸೋಮವಾರ): ಸಂಜೆ 7:00ಕ್ಕೆ ಲತಾ ಸಾಧು ಶೆಟ್ಟಿ ಮತ್ತು ಮಕ್ಕಳು, ವಿಜೇಶ್ ಶೆಟ್ಟಿ ದಂಪತಿ ಮತ್ತು ವೇಣುಗೋಪಾಲ್ ರೈ ಪ್ರಾಯೋಜಕತ್ವದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಮುಂಬಯಿ ತಂಡದಿಂದ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ.
ಸನ್ಮಾನ: ಹಿರಿಯ ಯಕ್ಷಗಾನ ಭಾಗವತ ನಾರಾಯಣ ರುಕ್ಮಯ ಪೂಜಾರಿ ಅವರನ್ನು ಮಂಡಳಿಯ ಸಂಸ್ಥಾಪಕರಾದ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ದಿ. ದಾಸು ಬಾಬು ಶೆಟ್ಟಿ ಸ್ಮರಣಾರ್ಥವಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಅಕ್ಟೋಬರ್ 20 (ಮಂಗಳವಾರ): ಸಂಜೆ 5:00 ಗಂಟೆಗೆ ವೇಷ-ಭೂಷಣಗಳೊಂದಿಗೆ ದೇವಿಯ ಮೂರ್ತಿ ವಿಸರ್ಜನೆ ನಡೆಯಲಿದೆ.
ಉತ್ಸವದ ಎಲ್ಲಾ ದಿನಗಳಲ್ಲೂ ಸಹಸ್ರಾರು ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಂಡಳಿಯ ಅಧ್ಯಕ್ಷ ಗೋಪಾಲ ಕೆ. ಶೆಟ್ಟಿ, ಧರ್ಮದರ್ಶಿ ಅಶೋಕ್ ಡಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ವಿಲಾಸಿನಿ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯದರ್ಶಿ ರಾಕೇಶ್ ಶೆಟ್ಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.
(ಮಾಹಿತಿಗೆ: 97024 67616 / 83698 89806).



