November 26, 2026
Mumbai News Kannada
ಮುಂಬಯಿ

ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲೆಯ ಸ್ಕೌಟ್‌ಗಳ ಸಾಧನೆಗೆ ಸ್ಮರಣೀಯ ಗುರುವಂದನೆ – ಗುರುಗಳ ಮಾರ್ಗದರ್ಶನದಲ್ಲಿ ಅರಳಿದ ಸೇವಾ ಸಾಧಕರಿಗೆ ಗೌರವ





















ಮುಂಬಯಿಯಂತಹ ಮಹಾನಗರದಲ್ಲಿ ಸುಮಾರು 24 ವರ್ಷಗಳ ಹಿಂದೆ ಕರ್ನಾಟಕದ ತುಳು-ಕನ್ನಡಿಗರು ಬೋರಾಬಜಾರ್ ಪ್ರದೇಶದಲ್ಲಿ ಹಗಲಿನಲ್ಲಿ ಕ್ಯಾಂಟೀನ್‌ಗಳಲ್ಲಿ ದುಡಿದು, ಸಂಜೆ 6 ಗಂಟೆಯ ನಂತರ ಮಹಾನಗರ ಪಾಲಿಕೆಯ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮದರ್ ಇಂಡಿಯಾ ಕನ್ನಡ ಧರ್ಮಾರ್ಥ ರಾತ್ರಿ ಶಾಲೆಯೂ ಕನ್ನಡಿಗ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸಿತ್ತು. ಹಗಲಿನಲ್ಲಿ ಹೋಟೆಲ್ ಹಾಗೂ ಕ್ಯಾಂಟೀನ್‌ಗಳಲ್ಲಿ ದುಡಿಯುತ್ತಿದ್ದ ಅನೇಕ ವಿದ್ಯಾರ್ಥಿಗಳು ಸಂಜೆ ಶಾಲೆಗೆ ಬಂದು ವಿದ್ಯಾಭ್ಯಾಸದ ಜೊತೆಗೆ ಸ್ಕೌಟ್ ತರಬೇತಿಯನ್ನೂ ಪಡೆದುಕೊಂಡಿದ್ದರು.

ದಿವಂಗತ ಸ್ಕೌಟ್ ಶಿಕ್ಷಕ ಭಾಸ್ಕರ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ, ರಾಮದಾಸ್ ಎಚ್. ನಾಯ್ಕ್, ಮಂದಾರ ಎನ್. ಹೆಗ್ಡೆ, ಮುದ್ದು ಕೆ. ಪೂಜಾರಿ, ಜಗನ್ನಾಥ ಡಿ. ಶೆಟ್ಟಿ ಹಾಗೂ ಮಹಾಬಲ ಎಂ. ದೇವಾಡಿಗ ಅವರಿಂದ ಸ್ಕೌಟ್ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ಕೌಟರ್‌ಗಳಾಗಿ ಬೆಳೆದು ಹಲವು ಸಾಧನೆಗಳನ್ನು ಮಾಡಿದ್ದಾರೆ.

ಈ ಸಾಧನೆಗಳಲ್ಲಿ ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲೆಗೆ ಮೊದಲ ಬಾರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರೆತದ್ದು ಪ್ರಮುಖ ಮೈಲಿಗಲ್ಲಾಗಿದೆ. ಅಲ್ಲದೆ, ಮೂರು ವರ್ಷಗಳ ಹಿಂದೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಆಯುಕ್ತರಾಗಿದ್ದ ಪಿ.ಜಿ.ಆರ್. ಸಿಂಧಿಯಾ ಅವರಿಂದ ಶಾಲೆಯ ಎಲ್ಲಾ ಸ್ಕೌಟ್‌ಗಳಿಗೆ ಸ್ಕೌಟ್ ಪ್ರಮಾಣಪತ್ರ ದೊರೆತಿದ್ದು, ಇದು ಶಾಲೆಯ ಸಾಧನೆಗೆ ಮತ್ತೊಂದು ಗರಿಯಾಗಿದೆ.

ಈ ಸಂತಸದ ವಿಚಾರಗಳನ್ನು ಹಂಚಿಕೊಂಡ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಸ್ಕೌಟ್ ಶಿಕ್ಷಕ ಹಾಗೂ ಮುಂಬಯಿ ಸ್ಕೌಟ್ ಆಯುಕ್ತರಾಗಿದ್ದ ಗೋಪಾಲ್ ಆರ್. ಕಾಂಚನ್ ಅವರ ಮಾತುಗಳನ್ನು ಸ್ಮರಿಸುವುದು ಸಂತೋಷದ ಸಂಗತಿ. ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸ್ಕೌಟರ್ ಆಗಿ ಬೆಳೆದು, ದೇಶ ಸೇವೆಯಲ್ಲಿ ತೊಡಗಿರುವ ಯೋಧ ಶ್ರೀನಾಥ್ ಡಿ. ನಾಯ್ಕ್ ಅವರು ಶಾಲೆಯ ಹಳೆಯ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಷಯವಾಗಿದೆ.

“ಮೊದಲು ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಂತರವೇ ಇತರರಿಗೆ ಸಹಾಯ ಮಾಡಲು ಮುಂದಾಗಬೇಕು” ಎಂದು ರಾಷ್ಟ್ರಪತಿ ಪದಕ ಪಡೆದ ಸ್ಕೌಟ್, ಕಾರ್ಯಕ್ರಮಕ್ಕೆ ದೆಹಲಿಯಿಂದ ಆಗಮಿಸಿದ್ದ ಉದ್ಯಮಿ ಮಹಾಬಲ ಎಂ. ದೇವಾಡಿಗ ಅವರು ಹೇಳಿದರು.

ಅವರು ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲಾ ಹಳೆಯ ವಿದ್ಯಾರ್ಥಿ ಫೌಂಡೇಶನ್ ಹಾಗೂ 19th East Bombay Scout Group ಮಿತ್ರರು ಆಯೋಜಿಸಿದ್ದ ಏಳನೇ ವರ್ಷದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮವು ನವೆಂಬರ್ 21 ಮತ್ತು 22ರಂದು ಭಾಯಂದರ್ ಪಶ್ಚಿಮದ ಪಾಲಿ ಬೀಚ್ ರೆಸಾರ್ಟ್‌ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಸ್ಕೌಟ್ ಹಳೆಯ ವಿದ್ಯಾರ್ಥಿ ಹಾಗೂ ಅಡ್ವೋಕೇಟ್ ಸುಂದರ್ ಜೆ. ಶೆಟ್ಟಿ ಮತ್ತು ಉದ್ಯಮಿ, ರಾಷ್ಟ್ರಪತಿ ಸ್ಕೌಟ್ ಚಂದ್ರಹಾಸ ಶೆಟ್ಟಿ (ಪುಣೆ) ಅವರಿಗೆ ಸ್ಕೌಟ್ ಶಿಕ್ಷಕ ರಾಮದಾಸ್ ಎಚ್. ನಾಯ್ಕ್ ಅವರು ಸ್ಕೌಟ್ ಪ್ರಮಾಣಪತ್ರಗಳನ್ನು ವಿತರಿಸಿದರು. ವೇದಿಕೆಯಲ್ಲಿ ಹಿರಿಯ ಸ್ಕೌಟ್ ಸದಾಶಿವ ಸಿ. ಪೂಜಾರಿ ಹಾಗೂ ಸುಂದರ್ ಡಿ. ಪೂಜಾರಿ ಉಪಸ್ಥಿತರಿದ್ದರು.

ಬಳಿಕ ಸಾಧಕ ಸ್ಕೌಟ್‌ಗಳಾದ ಸುಂದರ್ ಡಿ. ಪೂಜಾರಿ, ಗಣೇಶ್ ಎಚ್. ದೇವಾಡಿಗ, ದಿನೇಶ್ ಮೊಗವೀರ, ಗಣೇಶ್ ಶೆಟ್ಟಿ, ವಿನಯ್ ಪೂಜಾರಿ, ಗುಣಪಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ನಾಭಿರಾಜ್ ಜೈನ್ ಹಾಗೂ ರಸಿಕಾ ಪೂಜಾರಿ ಅವರನ್ನು ಸ್ಕೌಟ್ ಪೇಟ ತೊಡಿಸಿ, ಗುರುವಂದನಾ ಪತ್ರ ನೀಡಿ ಗೌರವಿಸಲಾಯಿತು.

ಸ್ಕೌಟ್ ಪೆಟ್ರೋಲ್ ತಂಡಗಳ ನಡುವೆ ನಡೆದ ಸಂಗೀತ ಸ್ಪರ್ಧೆಯಲ್ಲಿ ಕಮಲಾಕ್ಷ ಬೆಳ್ಚಡ ಅವರು ಪ್ರಥಮ ಸ್ಥಾನ ಪಡೆದರು. ಶ್ರೀಕಾಂತ್ ಪೂಜಾರಿ, ಸಂಜೀವ ದೇವಾಡಿಗ, ಯಶವಂತ ಪೂಜಾರಿ ಹಾಗೂ ರಮೇಶ್ ಶೆಟ್ಟಿ ಸೇರಿದಂತೆ ಇತರರು ವಿವಿಧ ಸ್ಥಾನಗಳನ್ನು ಪಡೆದರು. ಸ್ಪರ್ಧೆಯ ತೀರ್ಪುಗಾರರಾಗಿ ಮುದ್ದು ಕೆ. ಪೂಜಾರಿ, ಚಂದ್ರಹಾಸ ಶೆಟ್ಟಿ ಹಾಗೂ ಮಹಾಬಲ ಎಂ. ದೇವಾಡಿಗ ಸಹಕರಿಸಿದರು.

ಮದರ್ ಇಂಡಿಯಾ ಶಾಲೆಯ ಹಳೆಯ ವಿದ್ಯಾರ್ಥಿ ಫೌಂಡೇಶನ್ ಅಧ್ಯಕ್ಷ ಹಾಗೂ ರಾಷ್ಟ್ರಪತಿ ಸ್ಕೌಟ್, ಉದ್ಯಮಿ ಸುರೇಂದ್ರ ಎ. ಪೂಜಾರಿ ಅವರು ಕಮಲಾಕ್ಷ ಬೆಳ್ಚಡ ಅವರ ತಾಯಿ ಕಲ್ಯಾಣಿ ಬೆಳ್ಚಡ್ತಿ ಅವರ ಸ್ಮರಣಾರ್ಥ ಸಮವಸ್ತ್ರವನ್ನು ಬಿಡುಗಡೆಗೊಳಿಸಿದರು.

ಸಮಾರೋಪ ಸಮಾರಂಭದಲ್ಲಿ ಸ್ಕೌಟ್ ಶಿಬಿರದ ಪೆಟ್ರೋಲ್ ತಂಡಗಳ ನಡುವೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನವನ್ನು ವುಲ್ಫ್ ಪೆಟ್ರೋಲ್ ತಂಡ, ದ್ವಿತೀಯ ಸ್ಥಾನವನ್ನು ಪೀಕಾಕ್ ಪೆಟ್ರೋಲ್ ತಂಡ ಹಾಗೂ ತೃತೀಯ ಸ್ಥಾನವನ್ನು ಟೈಗರ್ ಪೆಟ್ರೋಲ್ ತಂಡ ಪಡೆದುಕೊಂಡವು. ಶಿಸ್ತುಬದ್ಧ ತಂಡವಾಗಿ ಕರ್ನಾಟಕದಿಂದ ಆಗಮಿಸಿದ್ದ ಲಯನ್ ಪೆಟ್ರೋಲ್ ತಂಡ ಆಯ್ಕೆಯಾಯಿತು. ವಿಜೇತ ತಂಡಗಳಿಗೆ ಸ್ಕೌಟ್ ಶಿಕ್ಷಕ ರಾಮದಾಸ್ ಎಚ್. ನಾಯ್ಕ್ ಅವರು ಟ್ರೋಫಿಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತರ ಖರ್ಚುವೆಚ್ಚಗಳನ್ನು ಕಳೆದ ಆರು ವರ್ಷಗಳಿಂದ ಜಗದೀಶ್ ಡಿ. ಶೆಟ್ಟಿ (ನಾಲಾಸೋಪಾರ) ಅವರು ವಹಿಸಿಕೊಂಡಿದ್ದು, ಟ್ರೋಫಿಗಳ ವೆಚ್ಚವನ್ನು ಯಶವಂತ್ ಪೂಜಾರಿ ಹಾಗೂ ಶ್ರೀಕಾಂತ್ ಬಿ. ಪೂಜಾರಿ ಮತ್ತು ಸಮವಸ್ತ್ರದ ವೆಚ್ಚವನ್ನು ಕಮಲಾಕ್ಷ ಬೆಳ್ಚಡ ಅವರು ಭರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಸ್ಕೌಟ್ ಗೀತೆಯನ್ನು ಶ್ರೀಕಾಂತ್ ಪೂಜಾರಿ ಹಾಗೂ ಯಶವಂತ ಪೂಜಾರಿ ಹಾಡಿದರು. ಸ್ಕೌಟ್ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ಪರಿಚಯವನ್ನು ಶಿಕ್ಷಕ ಮಂದಾರ ಎನ್. ಹೆಗ್ಡೆ ಮಾಡಿಕೊಟ್ಟು ಎಲ್ಲರನ್ನು ಸ್ವಾಗತಿಸಿದರು. ಜಯ ಸಿ. ಪೂಜಾರಿ ಹಾಗೂ ಜಯರಾಮ್ ಕೆ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಮುದ್ದು ಕೆ. ಪೂಜಾರಿ ವಂದನಾರ್ಪಣೆ ಸಲ್ಲಿಸಿದರು.

ವರದಿ: ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು



Related posts

ಮಲಾಡ್ ಕನ್ನಡ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿಯ ಕುಂದರಂಜನಿ – 2024

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ ಅಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: ಸತತ ನಾಲ್ಕನೇ ವರ್ಷದ ರಕ್ತದಾನ ಶಿಬಿರದಲ್ಲಿ 182 ಯುನಿಟ್ ರಕ್ತ ಸಂಗ್ರಹದ ದಾಖಲೆ

Mumbai News Desk