September 6, 2026
Mumbai News Kannada
ಕರ್ನಾಟಕ

ಧರ್ಮಸ್ಥಳ : ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನವಂಬರ್ 12ರವರೆಗೆ ಮಧ್ಯಂತರ ತಡೆ.





ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎಂಬ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಮೂಲ ಪ್ರಕರಣ ರದ್ದು ಮಾಡುವಂತೆ ಕೋರಿ ಆರೋಪ ಮಾಡಿದವರೇ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ಪರಿಗಣಸಿರುವ ನ್ಯಾಯಾಲಯ ಪ್ರಕರಣದ ಮುಂದಿನ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅರ್ಜಿದಾರರಾದ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ವಿಠಲ್‌ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎಸ್ ಬಾಲಕೃಷ್ಣನ್‌ ಅವರು ವಾದ ಮಂಡಿಸಿದ್ದು, ಅರ್ಜಿದಾರರಿಗೆ ಈಗಾಗಲೇ 9 ಬಾರಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಅವರನ್ನು ಆರೋಪಿಗಳು ಎಂದು ಉಲ್ಲೇಖಿಸಿಲ್ಲ. ಖುದ್ದಾಗಿ ನೋಟಿಸ್ ಜಾರಿ ಮಾಡದೇ ವಾಟ್ಸಪ್, ಇಮೇಲ್‌ನಲ್ಲಿ ನೀಡಿದ್ದಾರೆ. ಜೊತೆಗೆ ಬಿಎನ್‌ಎಸ್‌ಎಸ್ ಸೆಕ್ಷನ್ 35(3) ಅಡಿಯಲ್ಲಿ ಸಮನ್ಸ್ ನೀಡಲಾಗಿದೆ. ಎಸ್‌ಐಟಿ ಸಮನ್ಸ್ ನೀಡಿರುವುದು ಕಾನೂನುಬಾಹಿರ. ಅರ್ಜಿದಾರರು ಆರೋಪಿಗಳೂ ಅಲ್ಲ, ಸಾಕ್ಷಿಗಳೂ ಅಲ್ಲ.

ರಾಜಕೀಯ, ಧಾರ್ಮಿಕ, ಸಂಘಟನಾತ್ಮಕ ವೈರತ್ವದಿಂದ ನೋಟಿಸ್‌ಗಳನ್ನು ನೀಡಲಾಗಿದೆ. ಇದೀಗ 10ನೇ ನೋಟಿಸ್ ನೀಡಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸುತ್ತಾರೆ. ಈಗಾಗಲೇ 150 ಗಂಟೆಗೂ ಅಧಿಕ ಕಾಲ ದೂರುದಾರರನ್ನು ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ ಬಿಎನ್‌ಎಸ್‌ ಸೆಕ್ಷನ್‌ 211(ಎ) ಅಡಿ ಎಫ್‌ಐಆರ್‌ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ. ಅದೂ ಎರಡೂವರೆ ತಿಂಗಳ ನಂತರ ಹೊಸ ಸೆಕ್ಷನ್ ಗಳನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ನೋಟಿಸ್ ರದ್ದುಗೊಳಿಸಬೇಕು. ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು.
ಎಸ್‌ಐಟಿ ಪರವಾಗಿ ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕ ಬಿ ಎನ್ ಜಗದೀಶ ಅವರು ವಾದ ಮಂಡಿಸಿದ್ದು, ಪೊಲೀಸರು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಅವರ ಅನುಮತಿಯನ್ನು ಪಡೆದುಕೊಂಡಿದ್ದಾರೆ ಮತ್ತು ಬಿಎನ್‌ಎಸ್‌ಎಸ್‌ನ 35(3) ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅರ್ಜಿದಾರರು ನ್ಯಾಯಾಲಯ, ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಚೋದನೆ ಮೇರೆಗೆ ಚಿನ್ನಯ್ಯ ದೂರು ನೀಡಿದ್ದು, ಇದೀಗ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಆ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟಿರುವ ಇಂತಹವರ ವಿರುದ್ಧ ತನಿಖೆ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ವಾದಿಸಿದರು.
ವಾದ ಆಲಿಸಿದ ಪೀಠವು ಪ್ರಕರಣದ ತನಿಖೆಗೆ ನವೆಂಬರ್‌ 12ರವರೆಗೆ ತಡೆ ನೀಡಿತು. ಅಲ್ಲದೆ, ದೂರುದಾರರಾಗಿರುವ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ ಜಯಂತ್ ಅವರುಗಳಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ಜೊತೆಗೆ ಎಸ್‌ಐಟಿ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.



Related posts

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತ: ಉಪಹಾರ ಸಭೆಯಲ್ಲಿ ರಾಜೀನಾಮೆ ಘೋಷಿಸಿದ ಸಿದ್ದರಾಮಯ್ಯ

Mumbai News Desk

ಜೆಸಿಐ ವಲಯ 15ರ ವಲಯಾಧ್ಯಕ್ಷರಾಗಿ ಗಿರೀಶ್ ಎಸ್ ಪಿ ಆಯ್ಕೆ

Mumbai News Desk

ಶಿವಮೊಗ್ಗದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಕೊಲೆ, ಇಬ್ಬರು ಅಪ್ರಾಪ್ತ ವಯಸ್ಕರ ಬಂಧನ

Mumbai News Desk

ಮಂಗಳೂರು : ಲಿಯೋ ಡಿಸ್ಟ್ರಿಕ್ಟ್ 317D: ಪಾಠ ಶಾಲಾ ಪ್ರಾಜೆಕ್ಟ್ ಯಶಸ್ವಿ ಉದ್ಘಾಟನೆ

Mumbai News Desk

ಸಚಿವ ಡಿ. ಸುಧಾಕರ್ ನಿಧನ: ಹಿರಿಯೂರು ಶಾಸಕ ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖಿಕ ಸಚಿವ ಇನ್ನಿಲ್ಲ

Mumbai News Desk

ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ: ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು ಶಿಕ್ಷೆ

Mumbai News Desk