30 C
Mumbai
September 19, 2026
Mumbai News Kannada
ಮುಂಬಯಿ

ಶ್ರೀನಿವಾಸ ಫೌಂಡೇಶನ್, ಮುಂಬೈ ಹಾಗೂ ವಿಶ್ವ ಗಾಣಿಗರ ಚಾವಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 6 6ವಿದ್ಯಾರ್ಥಿಗಳಿಗೆ ₹11 ಲಕ್ಷ ವಿದ್ಯಾರ್ಥಿ ವೇತನ –26 ಬಡ ಕುಟುಂಬಗಳಿಗೆ ಅನ್ನಪೂರ್ಣ ಭಾಗ್ಯ





ವಿದ್ಯೆ ಬದುಕಿಗೆ ಸ್ಫೂರ್ತಿ ನೀಡುವುದಲ್ಲದೆ ವ್ಯಕ್ತಿಯನ್ನು ಸದೃಢಗೊಳಿಸುತ್ತದೆ : ಶ್ರೀನಿವಾಸ ಸಾಪಲ್ಯ

ಮಂಗಳೂರು: ಶ್ರೀನಿವಾಸ ಫೌಂಡೇಶನ್, ಮುಂಬೈ ಹಾಗೂ ವಿಶ್ವ ಗಾಣಿಗರ ಚಾವಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ಹಾಗೂ ಅನ್ನಪೂರ್ಣ ಭಾಗ್ಯ ಯೋಜನೆಯ ಕಾರ್ಯಕ್ರಮವು ಸೆ 13ರ ಭಾನುವಾರ ಥೋಕೊಟ್ಟು ಸಮೀಪದ ಗಾಣಿಗ ಸಮುದಾಯ ಭವನದಲ್ಲಿ ವಿವಿಧ ಗಾಣಿಗ ಸಂಘಗಳ ಅಧ್ಯಕ್ಷರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ಫೌಂಡೇಶನ್ ಟ್ರಸ್ಟೀ ಹಾಗೂ ಮುಂಬೈ ಸಾಫಲ್ಯ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಪಲ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ ಸಪಲ್ಯ ಅವರು, “ವಿದ್ಯೆ ಬದುಕಿಗೆ ಸ್ಫೂರ್ತಿ ನೀಡುವುದಲ್ಲದೆ ವ್ಯಕ್ತಿಯನ್ನು ಸದೃಢಗೊಳಿಸುತ್ತದೆ. ನಾವು ಪಡೆದ ವಿದ್ಯೆಯನ್ನು ಕೇವಲ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಮಾತ್ರ ಬಳಸದೆ, ಸಮಾಜದಲ್ಲಿ ನೊಂದವರ ಹಾಗೂ ಅಗತ್ಯವಿರುವವರ ಬದುಕನ್ನು ಪರಿವರ್ತಿಸಲು ಬಳಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


“ವಿದ್ಯಾರ್ಥಿಗಳ ಜೀವನದಲ್ಲಿ ಅಂಕಗಳು ಮುಖ್ಯವಾದರೂ ಜ್ಞಾನ ಇನ್ನಷ್ಟು ಮುಖ್ಯ. ಪಠ್ಯಪುಸ್ತಕದ ಜ್ಞಾನ ಮಾತ್ರವಲ್ಲದೆ ಸಮಾಜ, ದೇಶ, ಸಂಸ್ಕೃತಿ ಹಾಗೂ ಜೀವನದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಪ್ರತಿಭೆ ಇದ್ದರೂ ಶಿಸ್ತು ಇಲ್ಲದಿದ್ದರೆ ಯಶಸ್ಸು ದೀರ್ಘಕಾಲ ಉಳಿಯುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದು, ಶಿಕ್ಷಕರನ್ನು ಗೌರವಿಸುವುದು, ಪೋಷಕರ ಮಾತನ್ನು ಆಲಿಸುವುದು ಹಾಗೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ವ್ಯಕ್ತಿತ್ವವನ್ನು ಬೆಳೆಸುತ್ತದೆ” ಎಂದು ಅವರು ತಿಳಿಸಿದರು.
ಮುಂದುವರಿದು, “ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಬೆಳೆಸಿದ ತಂದೆ-ತಾಯಿ, ಶಿಕ್ಷಕರು ಹಾಗೂ ಸಮಾಜವನ್ನು ಎಂದಿಗೂ ಮರೆಯಬಾರದು. ನಮ್ಮ ಯಶಸ್ಸಿನ ಒಂದು ಭಾಗವನ್ನು ಸಮಾಜಕ್ಕೆ ಮರಳಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸೋಲು ಎದುರಾದರೆ ನಿರಾಶರಾಗಬೇಡಿ. ಸೋಲು ಅಂತ್ಯವಲ್ಲ; ನಮ್ಮ ತಪ್ಪುಗಳನ್ನು ಅರಿತುಕೊಂಡು ಮುಂದೆ ಸಾಗಲು ದೊರೆಯುವ ಒಂದು ಅವಕಾಶ. ಆದ್ದರಿಂದ ದೊಡ್ಡ ಕನಸು ಕಾಣಿರಿ, ಪ್ರಾಮಾಣಿಕವಾಗಿ ಪರಿಶ್ರಮಿಸಿ, ಶಿಸ್ತಿನಿಂದ ಬದುಕಿರಿ ಮತ್ತು ಯಶಸ್ಸು ಗಳಿಸಿದ ನಂತರ ಸಮಾಜವನ್ನು ಮರೆಯಬೇಡಿ” ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಶ್ರೀನಿವಾಸ ಫೌಂಡೇಶನ್ ವತಿಯಿಂದ ಸುಮಾರು 66 ವಿದ್ಯಾರ್ಥಿಗಳಿಗೆ ಒಟ್ಟು ₹10 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ನೊಂದ ಹಾಗೂ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸುಮಾರು 26 ಕುಟುಂಬಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಅವರ ಮನೆಗೆ ಅಗತ್ಯ ಜೀವನೋಪಯೋಗಿ ಆಹಾರ ಸಾಮಗ್ರಿಗಳನ್ನು ತಲುಪಿಸುವ ‘ಅನ್ನಪೂರ್ಣ ಭಾಗ್ಯ ಯೋಜನೆ’ಗೆ ಚಾಲನೆ ನೀಡಲಾಯಿತು.
ಮುಂಬೈ ಸಾಫಲ್ಯ ಸೇವಾ ಸಂಘದ ಉಪಾಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ್ ಬಂಗೇರ ಮಾತನಾಡಿ, ಮುಂಬೈಯಲ್ಲಿ ಹಲವು ಸಮಾಜಮುಖಿ ಯೋಜನೆಗಳ ಮೂಲಕ ಶ್ರೀನಿವಾಸ ಸಪಲ್ಯ ಅವರು ಬಡವರು ಹಾಗೂ ಅಗತ್ಯವಿರುವವರ ಬಗ್ಗೆ ಹೊಂದಿರುವ ಕಾಳಜಿ ಶ್ಲಾಘನೀಯವಾಗಿದೆ . ಕಳೆದ ನಾಲ್ಕೈದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಹಾಯವು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ನೆರವಾಗಲಿ ಎಂದು ಹಾರೈಸಿದರು.

ಮುಂಬೈ ಸಂಘದ ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಮಾತನಾಡಿ, “ಇಂತಹ ಪುಣ್ಯ ಕಾರ್ಯದಲ್ಲಿ ಭಾಗವಹಿಸುವುದು ನನ್ನ ಭಾಗ್ಯ. ಶ್ರೀನಿವಾಸ ಸಪಲ್ಯ ಅವರು ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವಾಗಲಿ, ಬಡವರಿಗೆ ನೀಡುತ್ತಿರುವ ಅನ್ನಪೂರ್ಣ ಭಾಗ್ಯವಾಗಲಿ ಅಥವಾ ನೊಂದ ಬಡ ವರ್ಗದವರಿಗೆ ನಿರ್ಮಿಸಿಕೊಡುತ್ತಿರುವ ಉಚಿತ ಮನೆಗಳಾಗಲಿ—ಇವೆಲ್ಲವೂ ಸಮಾಜದ ಸೇವೆಯಲ್ಲಿ ಮಾದರಿಯಾಗಿವೆ. ಶ್ರೀನಿವಾಸ ಸಪಲ್ಯ ಅವರು ನಿಜಕ್ಕೂ ಸಮಾಜದ ಮಾಣಿಕ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಾಸ್ ಕುಮಾರ್ ದಾಸ್, ರಾಘವ ಪಡೀಲ್, ಕೃಷ್ಣಪ್ಪ ಗಾಣಿಗ, ಲಕ್ಷ್ಮೀ ಪ್ರಸಾದ್ ಬೆಟ್ಟ, ಲಕ್ಷ್ಮಣ್ ಉಜಿರೆ, ದಯಾನಂದ ಬಂಗೇರ, ಭುವನೇಶ್ ರಘು ಸಪಲ್ಯ, ಹರಿರಾಮಚಂದ್ರ, ಚೇತನ್ ನೆಕ್ಕರೆ, ಪ್ರಕಾಶ್ ಕೊಲ್ಯ, ಭಾಸ್ಕರ್ ಎಡಪದವು, ರಾಮದಾಸ್ ಸೋಮೇಶ್ವರ, ಕಾಂತಪ್ಪ ಸಪಳಿಗ ಸೇರಿದಂತೆ ವಿಶ್ವ ಗಾಣಿಗರ ಚಾವಡಿಯ ಪದಾಧಿಕಾರಿಗಳು ಹಾಗೂ ವಿವಿಧ ಗಾಣಿಗ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ದೇವಿಪ್ರಸಾದ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಕುಮಾರ್ ದಂಪತಿ ಹಾಗೂ ಶ್ರೀ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಅಗತ್ಯವಿದ್ದ ಕೆಲವರಿಗೆ ವೈದ್ಯಕೀಯ ನೆರವನ್ನೂ ವಿತರಿಸಲಾಯಿತು.
ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಬಡ ಹಾಗೂ ನೊಂದ ಕುಟುಂಬಗಳ ಜೀವನಕ್ಕೆ ಆಸರೆಯಾಗುವ ಇಂತಹ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.



Related posts

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk

ಮುಂಬಯಿ : ಏನ್ ಸಿ ಪಿ ಮುಖಂಡ ಬಾಬಾ ಸಿದ್ಧಿಕ್ ಅವರನ್ನು ಗುಂಡಿಕ್ಕಿ ಹತ್ಯೆ

Mumbai News Desk

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ – ಭಾಯಂದರ್ ವತಿಯಿಂದ ಗುರು ಪೂರ್ಣಿಮೆ ಆಚರಣೆ

Mumbai News Desk

ಕುಲಾಲ ಸಂಘ ಮುಂಬಯಿ: ಮಂಗಳೂರು ಕುಲಾಲ ಭವನ ಉದ್ಘಾಟನೆ: ಸಿಎಸ್‌ಟಿ-ಮುಲುಂಡ್-ಮಾನ್ಖುರ್ದ್ ಸ್ಥಳೀಯ ಸಮಿತಿಯವರಿಂದ ಆಮಂತ್ರಣ ಪತ್ರಿಕೆ ವಿತರಣಾ ಸಮಾರಂಭ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕೃಷಾ ಪ್ರಕಾಶ್ ಶೆಟ್ಟಿ ಗೆ ಶೇ.92. 60 ಅಂಕ

Mumbai News Desk

ಭಾರತ್ ಬ್ಯಾಂಕ್, ವಿಲೇಪಾರ್ಲೆ (ಪಶ್ಚಿಮ) ಶಾಖೆಯಿಂದ ದಶಮಾನೋತ್ಸವ ಆಚರಣೆ.

Mumbai News Desk