ಉಚ್ಚಿಲ / ಮುಂಬೈ: ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ (ಕರ್ನಾಟಕ ರಾಜ್ಯ ಪ್ರಶಸ್ತಿ – 2012 ಪುರಸ್ಕೃತ) ಮತ್ತು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.), ಉಚ್ಚಿಲ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ ಉಚ್ಚಿಲ ದಸರಾ 2026ರ ಅಂಗವಾಗಿ ‘ಮೊಗವೀರ’ ಕನ್ನಡ ಮಾಸಿಕದ 87ನೇ ಸಂಭ್ರಮ ಕಾರ್ಯಕ್ರಮವು ನೆರವೇರಲಿದೆ. 86 ಸಂವತ್ಸರಗಳನ್ನು ಪೂರ್ಣಗೊಳಿಸಿದ ನಿರಂತರ ಪ್ರಕಟಣೆಯ ಹೊರನಾಡಿನ ಏಕೈಕ ಕನ್ನಡ ಮಾಸ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮೊಗವೀರ’ ಮಾಸಿಕದ ಈ ವೈಭವದ ಸಮಾರಂಭವು ದಿನಾಂಕ 18-10-2026ರ ರವಿವಾರ ಬೆಳಿಗ್ಗೆ 9.30ರಿಂದ ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಂಕೀರ್ಣದಲ್ಲಿರುವ ಮೊಗವೀರ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಅವರು ಉದ್ಘಾಟಿಸಲಿದ್ದಾರೆ. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷರಾದ ಗಣೇಶ್ ಕೆ. ಕಾಂಚನ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗೌರವ ಉಪಸ್ಥಿತಿಯನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ವಹಿಸಲಿದ್ದರೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಮುಂಬಯಿ ಶಾಖೆಯ ಗೌರವ ಅಧ್ಯಕ್ಷರಾದ ವೇದಪ್ರಕಾಶ್ ಶ್ರೀಯಾನ್ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮಾರಂಭದ ಭಾಗವಾಗಿ ಪ್ರಸಿದ್ಧ ಕವಿ ಹಾಗೂ ಪತ್ರಕರ್ತರಾದ ಯಶವಂತ್ ಬೋಳೂರು ಅವರ ಅಧ್ಯಕ್ಷತೆಯಲ್ಲಿ ವಿಶೇಷ ‘ಕವಿಗೋಷ್ಠಿ’ ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಕವಿಗಳಾದ ಗುರುಪ್ರಸಾದ್ ಪಡುಬಿದ್ರಿ, ರವಿ ಕೊಟ್ಯಾರಗಸ್ತಿ ಬೆಳಗಾವಿ, ದೀಪಕ್ ಎನ್. ದುರ್ಗಾ ಕಾರ್ಕಳ, ಚಂದ್ರಹಾಸ ಕಾಂತಾವರ್ ಉಳ್ಳಾಲ, ಸತೀಶ್ ಅಮೀನ್ ಪಡುಕರೆ, ಜಯಾನಂದ ಪೆರಾಜೆ ಪೆರಾಜೆ, ಶ್ರೀಮತಿ ಶುಭಲಕ್ಷ್ಮಿ ನಾಯಕ್ ಹಳಿಮಾರು, ಶಂಕರ್ ಪಡಂಗ ಮೂಲ್ಕಿ, ರಮೇಶ್ ಅಳವಾಯಿ ಪುತ್ತೂರು, ಪ್ರಸಾದ್ ಕುಮಾರ್ ಮೊಗಬೆಟ್ಟು, ಶ್ರೀಮತಿ ವಾಸಂತಿ ಅಂಬಲಪಾಡಿ ಉಡುಪಿ, ಶ್ರೀಮತಿ ವಿಂದ್ಯಾ ಎಸ್. ರೈ ಬಂಟ್ವಾಳ, ಐಕಳ ಕೃಷ್ಣಾನಂದ ಶೆಟ್ಟಿ ಕಿನ್ನಿಗೋಳಿ, ಶ್ರೀಮತಿ ಪ್ರೇಮಾ ಆರ್. ಶೆಟ್ಟಿ ಮೂಲ್ಕಿ ಹಾಗೂ ಅಶೋಕ್ ತೆಕ್ಕಟ್ಟೆ ಅವರು ಭಾಗವಹಿಸಿ ಕವನ ವಾಚಿಸಲಿದ್ದಾರೆ. ಸಂಶೋಧಕರಾದ ಡಾ. ವಿ.ಕೆ. ಯಾದವ್ ಸಸಿಹಿತ್ಲು ಅವರು ಕವಿಗೋಷ್ಠಿಯ ನಿರ್ವಹಣೆ ಮಾಡಲಿದ್ದು, ‘ಮೊಗವೀರ’ ಕನ್ನಡ ಮಾಸಿಕದ ಸಂಪಾದಕರಾದ ಅಶೋಕ್ ಸುವರ್ಣ ಅವರು ಸ್ವಾಗತ ಮತ್ತು ಪ್ರಸ್ತಾವನೆಗೈಯಲಿದ್ದಾರೆ.
ಅಲ್ಲದೆ, ಈ ವೈಭವದ ಸಮಾರಂಭದಲ್ಲಿ “ಮೊಗವೀರ ಸಣ್ಣ ಕಥಾ ಸ್ಪರ್ಧೆ”ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಗೌರವ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಮತ್ತು ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಉಪಾಧ್ಯಕ್ಷರಾದ ಬಿ.ಕೆ. ಪ್ರಕಾಶ್ ಮತ್ತು ದಯಾವತಿ ಸುವರ್ಣ, ಗೌರವ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಕೋಶಾಧಿಕಾರಿ ದೇವರಾಜ್ ಕುಂದರ್ ಮತ್ತು ಮೊಗವೀರ ಮಾಸಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ಪುತ್ರನ್, ಕಾರ್ಯದರ್ಶಿ ಪ್ರೀತಿ ಎಚ್. ಶ್ರೀಯಾನ್, ಮ್ಯಾನೇಜರ್ ಪ್ರಮೋದ್ ಪುತ್ರನ್ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಸರ್ವ ಅಭಿಮಾನಿ ಬಂಧುಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ.



