ಸಂಸ್ಥೆಯನ್ನು ಕುಟುಂಬವೆಂದು ಭಾವಿಸಿ ಸಮಾಜಸೇವೆಗೆ ಕೈಜೋಡಿಸಿ: ಅಧ್ಯಕ್ಷ ಪ್ರಕಾಶ್ ಆರ್. ಶೆಟ್ಟಿ
ಡೊಂಬಿವಲಿ (ಮಹಾರಾಷ್ಟ್ರ): ‘ಪ್ರತಿಯೊಬ್ಬರೂ ಸಂಸ್ಥೆಯನ್ನು ತಮ್ಮ ಸ್ವಂತ ಕುಟುಂಬವೆಂದು ಭಾವಿಸಿ, ಒಗ್ಗಟ್ಟಿನಿಂದ ಜನಪರ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು’ ಎಂದು ಡೊಂಬಿವಲಿಯ ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಆರ್. ಶೆಟ್ಟಿ ಕರೆ ನೀಡಿದರು.

ಇಲ್ಲಿನ ಪಠಾರ್ಲಿ ರಸ್ತೆಯ ಓಂ ಶಿವದರ್ಶನ್ ಸಿಎಚ್ಎಸ್ನಲ್ಲಿ ಕಚೇರಿ ಹೊಂದಿರುವ ಠಾಣೆ ಜಿಲ್ಲೆಯ ‘ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್’ ವತಿಯಿಂದ ಪೂರ್ವದ ಗೋಗ್ರಾಸವಾಡಿಯ ಜಿಎಸ್ಬಿ ಸ್ಕೂಲ್ ಹಾಲ್ನಲ್ಲಿ ಆಕ್ಟೋಬರ್ 24 ರ ಶನಿವಾರ ಆಯೋಜಿಸಲಾಗಿದ್ದ ಎರಡನೇ ವರ್ಷದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಹಳದಿ–ಕುಂಕುಮ ಮಹೋತ್ಸವದಲ್ಲಿ ಅತಿಥಿಗಳು, ಪದಾಧಿಕಾರಿಗಳು ಹಾಗೂ ಭಕ್ತಾದಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕನ್ನಡಿಗರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಒಗ್ಗಟ್ಟು ಮತ್ತು ಸಹಕಾರ ಮನೋಭಾವವನ್ನು ಬೆಳೆಸುವುದೇ ನಮ್ಮ ಸಂಸ್ಥೆಯ ಪ್ರಮುಖ ಧ್ಯೇಯ. ನಮ್ಮ ಶ್ರೀಮಂತ ತುಳು ಹಾಗೂ ಕನ್ನಡ ಸಂಸ್ಕೃತಿ, ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಮುಂಬರುವ ಪೀಳಿಗೆಗೆ ಯಥಾವತ್ತಾಗಿ ಪರಿಚಯಿಸಿಕೊಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಸ್ಥೆಯ ಮೂಲಕ ಬಡವರಿಗೆ ನೆರವು ನೀಡುವುದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆಸರೆ ಒದಗಿಸುವುದು, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಸಹಾಯಹಸ್ತ ಚಾಚುವುದು ನಮ್ಮ ಗುರಿ. ಇದರೊಂದಿಗೆ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ಸಂಘಟಿಸಿ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಬೇಕಿದೆ. ಯಾವುದೇ ಒಂದು ಸಂಘಟನೆ ಯಶಸ್ವಿಯಾಗಬೇಕಾದರೆ ಕೇವಲ ಅಧ್ಯಕ್ಷರು ಇಲ್ಲವೇ ಪದಾಧಿಕಾರಿಗಳ ಪರಿಶ್ರಮ ಮಾತ್ರ ಸಾಕಾಗುವುದಿಲ್ಲ; ಪ್ರತಿಯೊಬ್ಬ ಸದಸ್ಯರ ಪ್ರಾಮಾಣಿಕ ಪ್ರೋತ್ಸಾಹ, ಸಹಕಾರ ಮತ್ತು ಸಕ್ರಿಯ ಭಾಗವಹಿಸುವಿಕೆ ಅತ್ಯಂತ ನಿರ್ಣಾಯಕ. ನಮ್ಮೊಳಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗೊತ್ತಿ, ಪರಸ್ಪರ ಗೌರವದಿಂದ ನಡೆದುಕೊಂಡು ನಿಸ್ವಾರ್ಥ ಸಮಾಜಸೇವೆ ಮಾಡಬೇಕು. ಆ ಮೂಲಕ ಸಂಸ್ಥೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡೋಣ. “ಎರಡನೇ ವರ್ಷದ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಸತ್ಯನಾರಾಯಣ ದೇವರು ಸಮಸ್ತರಿಗೂ ಸುಖ, ಶಾಂತಿ, ಆಯುರಾರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸಲಿ. ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹಾಗೂ ನನಗೆ ಮಾತನಾಡಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದರು.

ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯ ಪೂಜೆ: ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಸತ್ಯನಾರಾಯಣ ಪೂಜೆಯನ್ನು ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಅವಿನಾಶ ಭಟ್ ಅವರು ಕ್ರಮಬದ್ಧವಾಗಿ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.
ಕಾರ್ಯಕ್ರಮಕ್ಕೆ ಜಿಎಸ್ಬಿ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶ್ರೀ ನಿತ್ಯಾನಂದ ಶೆನೋಯಿ ಹಾಗೂ ಅವರ ಮಂಡಳಿಯ ಸದಸ್ಯರು, ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ನಾಗೇಶ ಕುಂಟಕರ್, ನಿತ್ಯಾನಂದ ಭಟ್ ಹಾಗೂ ಮಹಿಳಾ ಮಂಡಳದ ಪ್ರಮುಖರು ಜಂಟಿಯಾಗಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ (ಮಹಾಪ್ರಸಾದ) ವಿತರಿಸಲಾಯಿತು. ಮಹಿಳೆಯರಿಗಾಗಿ ಹಳದಿ-ಕುಂಕುಮ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಫ್ರೆಂಡ್ಸ್ ಅವಲಂಬನ ವೆಂಕಟರಮಣ ಭಜನ ಮಂಡಳಿ ಮುಖ್ಯಸ್ಥರಾದ ಸೌ. ಸವಿತಾ ಪ್ರಭು ಹಾಗೂ ಅವರ ಭಜನಾ ಮಂಡಳಿಯ ಮಹಿಳೆಯರಿಂದ ಭಕ್ತಿಪೂರ್ವಕವಾದ ಭಜನೆಯನ್ನು ದೇವರೆ ಎದುರಿಗೆ ಮಾಡಿ ನಡೆದ ಕಾರ್ಯಕ್ರಮಕ್ಕೆ ತುಂಬಾ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣ ಶೆಟ್ಟಿ, ಕೋಶಾಧಿಕಾರಿ ಮಂಜುನಾಥ ಹೆಗ್ಡೆ, ಉಪಾಧ್ಯಕ್ಷರಾದ ವಿಕ್ರಾಂತ್ ಜಿ. ತಾಮಸೆ ಹಾಗೂ ಗಣೇಶ್ ಎಸ್. ಭಟ್, ಜಂಟಿ ಕಾರ್ಯದರ್ಶಿ ವಿಶಾಲ್ ಪಿ. ಶೆಟ್ಟಿ, ಜಂಟಿ ಕೋಶಾಧಿಕಾರಿ ರತ್ನಾಕರ್ ಎಸ್. ಭಂಡಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ ಎಸ್. ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಟ್ರಸ್ಟಿಗಳು ಮತ್ತು ಮಹಿಳಾ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಮತ್ತು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.



