October 27, 2026
Mumbai News Kannada
ಮುಂಬಯಿ

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ: 84ನೇ ವಾರ್ಷಿಕ ಮಹಾಸಭೆ



ಸದಸ್ಯರೆಲ್ಲರೂ ಸಕ್ರಿಯರಾದರೆ ಸಂಘಟನೆಯ ಅಭಿವೃದ್ಧಿ ನಿಶ್ಚಿತ: ಸಂತೋಷ್ ಪುತ್ರನ್

ಮುಂಬಯಿ, ಅ. : ಸಂಘದ ಕಾರ್ಯಚಟುವಟಿಕೆಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಸಂಘಟನೆಯನ್ನು ಮುನ್ನಡೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ. ಯುವಜನತೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದೇವೆ. ಮಹಾಸಭೆಯಲ್ಲಿ ಸದಸ್ಯರು ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಮಾತನಾಡುವುದು ಉತ್ತಮ. ಹಿಂದಿನ ವಿಚಾರಗಳ ಬಗ್ಗೆ ಚರ್ಚಿಸುತ್ತ ಸಮಯ ವ್ಯರ್ಥ ಮಾಡದೆ ನಮ್ಮ ಗುರಿಯ ಬಗ್ಗೆ ಚಿಂತನೆ ನಡೆಸಬೇಕು. ಅದಕ್ಕಾಗಿ ರೂಪುರೇಷೆ ಸಿದ್ಧಪಡಿಸಿ, ಆ ನಿಟ್ಟಿನಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕು ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷ ಸಂತೋಷ್ ಕೆ. ಪುತ್ರನ್ ತಿಳಿಸಿದರು.

ಅವರು ಆ. 24ರಂದು ಠಾಣೆ ಪಶ್ಚಿಮದ ಸಿಲ್ವೆರಾಡೊ ಬೊಟಿಕ್ ಹೊಟೇಲ್ ಸಭಾಂಗಣದಲ್ಲಿ ಜರುಗಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ 84ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಸಂಘದ ವಿದ್ಯಾರ್ಥಿವೇತನದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಮಾನದಲ್ಲಿರುವುದು ಸಂತಸದ ಸಂಗತಿ. ಅವರೆಲ್ಲರೂ ಸಂಘಟನೆಯಲ್ಲಿ ಭಾಗಿಯಾಗಬೇಕು. ಅವರು ಕೂಡ ತಮ್ಮಿಂದಾದ ಸಹಾಯ ಮಾಡಿದರೆ ಅರ್ಹ ವಿದ್ಯಾರ್ಥಿಗಳಿಗೆ ಇನ್ನಷ್ಟು ಹೆಚ್ಚಿನ ನೆರವು ನೀಡಲು ಸಾಧ್ಯ. ಮಹಿಳಾ ವಿಭಾಗ ಮತ್ತು ಸ್ಥಳೀಯ ಸಮಿತಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸಂಘದ ಅಭಿವೃದ್ಧಿಗಾಗಿ ತಾವೆಲ್ಲರೂ ಶ್ರಮಿಸಬೇಕು. ಸಂಘಟನೆಯನ್ನು ಬಲಪಡಿಸಲು ನಾವು ಹೊಸತನಕ್ಕೆ ಒಗ್ಗಿಕೊಂಡು ಮುನ್ನಡೆದರೆ ಯಶಸ್ಸು ಖಚಿತ,” ಎಂದರು.

ಮುಂದುವರಿದು ಮಾತನಾಡಿದ ಅವರು, “ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸದಸ್ಯರು ಸಮರ್ಪಣಾ ಭಾವದಿಂದ, ಕ್ರಿಯಾಶೀಲರಾಗಿ ತಮ್ಮ ಸೇವೆ ಸಲ್ಲಿಸಬೇಕು. ನಾವು ಸಾಕಿನಾಕಾದಲ್ಲಿ ಒಂದು ಜಾಗವನ್ನು ಖರೀದಿಸಿದ್ದು, ಇದು ದೇವರ ಆಶೀರ್ವಾದದಿಂದ ಸಾಧ್ಯವಾಗಿದೆ. ಈಗಾಗಲೇ ಮೊಗವೀರ ಪ್ರೀಮಿಯರ್ ಲೀಗ್ ಮತ್ತು ಮೃಗನಯನಿ ಎಂಬ ಎರಡು ಬ್ರ್ಯಾಂಡ್‌ಗಳನ್ನು ಪರಿಚಯಿಸಿದ್ದು, ಇವು ಯುವಜನರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿವೆ. ಈ ಅವಕಾಶಗಳನ್ನು ಯುವಜನರು ಸದುಪಯೋಗಪಡಿಸಿಕೊಳ್ಳಬೇಕು. ಹಲವಾರು ಯೋಜನೆ ಮತ್ತು ಯೋಚನೆಗಳಿದ್ದು, ಎಲ್ಲರೂ ಕೈಜೋಡಿಸಿ ಸಂಘವನ್ನು ಬಲಪಡಿಸಲು ಸಹಕರಿಸಬೇಕು. ಸದಸ್ಯರೆಲ್ಲರೂ ಸಕ್ರಿಯರಾದರೆ ಸಂಘಟನೆಯ ಅಭಿವೃದ್ಧಿ ನಿಶ್ಚಿತ,” ಎಂದು ಹೇಳಿದರು.

ಮಹಾಸಭೆಯ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್ ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ನಾಗರಾಜ್ ಶ್ರೀಯಾನ್ ಮಂಡಿಸಿದರು. ಇವುಗಳಿಗೆ ಸಭೆಯು ಸರ್ವಾನುಮತದ ಅನುಮೋದನೆ ನೀಡಿತು. ಲೆಕ್ಕಪರಿಶೋಧಕರಾಗಿ ಎಂ.ಆರ್. ಅಮೀನ್ ಅಂಡ್ ಕಂಪನಿ ಅವರನ್ನು ಪುನರಾಯ್ಕೆ ಮಾಡಲು ಸಭೆ ಸಮ್ಮತಿಸಿತು.

ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕುಲಮಾತೆ ಶ್ರೀ ಮಹಿಷಾಸುರಮರ್ದಿನಿ ದೇವಿಗೆ ಪೂಜೆ ಸಲ್ಲಿಸಿ 84ನೇ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿದರು. ಗೋಪಾಲ್ ಕುಂದರ್ ಪೂಜಾ ವಿಧಿವಿಧಾನ ನೆರವೇರಿಸಿದರೆ, ರಾಘವೇಂದ್ರ ಮೊಗವೀರ ಬಗ್ವಾಡಿ ಪ್ರಾರ್ಥನೆ ಸಲ್ಲಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಎಂ.ಎ. ಹೊಳಗೆ, ಎನ್.ಡಿ. ಚಂದನ್, ಸದಸ್ಯರಾದ ನಾರಾಯಣ ಚಂದನ್, ಭಾಸ್ಕರ್ ಶ್ರೀಯಾನ್, ರಘುರಾಮ್ ಚಂದನ್ ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಎಂ.ಎ. ಹೊಳಗೆ, ಎನ್.ಡಿ. ಚಂದನ್, ಗೋಪಾಲ್ ಪುತ್ರನ್, ಮಹಾಬಲ ಕುಂದರ್, ಸ್ಥಳೀಯ ಸಮಿತಿಗಳ ಪದಾಧಿಕಾರಿಗಳಾದ ರಘುರಾಮ್ ಚಂದನ್, ಅವಿನಾಶ್ ಪುತ್ರನ್, ಮೊಗವೀರ ತಗ್ಗರ್ಸೆ, ಅರವಿಂದ ಪುತ್ರನ್, ವಸಂತಿ ಕುಂದರ್, ಭಾಸ್ಕರ್ ನಾಯ್ಕ್, ರಾಧಾ ಮೆಂಡನ್, ಸಂತೋಷ್ ಪುತ್ರನ್ ಹಾಗೂ ಗೋಪಾಲ್ ಕುಂದರ್, ರಾಘವೇಂದ್ರ ಬಗ್ವಾಡಿ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕೆ. ಪುತ್ರನ್, ಗೌರವಾಧ್ಯಕ್ಷ ಸುರೇಶ್ ಆರ್. ಕಾಂಚನ್, ಮಾಜಿ ಅಧ್ಯಕ್ಷ ಎನ್.ಎಚ್. ಬಗ್ವಾಡಿ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಕೋಶಾಧಿಕಾರಿ ನಾಗರಾಜ್ ಶ್ರೀಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಭಾರತಿ ನಾಯ್ಕ್ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್ ಕಾರ್ಯಕಲಾಪಗಳನ್ನು ನಿರ್ವಹಿಸಿ, ವಂದಿಸಿದರು.

“ಯಾವುದೇ ಸಭೆ-ಸಮಾರಂಭಗಳಿರಲಿ ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಮ್ಮ ಕುಂದಾಪುರ ಮೊಗವೀರರ ಅಭಿಮಾನದಿಂದ ಸಂತೋಷ್ ಪುತ್ರನ್ ಸಂಘದ ಅಧ್ಯಕ್ಷರಾಗಿದ್ದಾರೆ; ಅವರಿಗೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ. ಡೊಂಬಿವಲಿ ಸ್ಥಳೀಯ ಸಮಿತಿಗೆ ಇರುವ ಉತ್ಸಾಹ ಎಲ್ಲ ಸಮಿತಿಗಳಿಗೂ ಇದ್ದರೆ ನಮ್ಮ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ಅವರು ವರ್ಷದಲ್ಲಿ 3-4 ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅದನ್ನು ಎಲ್ಲ ಸಮಿತಿಗಳೂ ಮಾದರಿಯಾಗಿ ಅನುಸರಿಸಬೇಕು. ವಿದ್ಯಾನಿಧಿ ಮತ್ತು ಆರೋಗ್ಯ ನಿಧಿ ಸ್ಥಾಪನೆ ಬಗ್ಗೆ ಚಿಂತನೆ ನಡೆಯುತ್ತಿದ್ದು, ಎಲ್ಲರೂ ಒಮ್ಮತದಿಂದ ಸಂಘ ಮತ್ತು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಂತೋಷ್ ಪುತ್ರನ್ ಅವರ ಅಧಿಕಾರಾವಧಿಯಲ್ಲಿ ಸಂಘಕ್ಕೆ ಶಾಶ್ವತ ಆದಾಯ ತರುವಂತಹ ವ್ಯವಸ್ಥೆಯಾಗಲಿ; ಅದಕ್ಕೆ ನಮ್ಮೆಲ್ಲರ ಸಹಕಾರ ಸದಾ ಇರಲಿದೆ.” — ಸುರೇಶ್ ಆರ್. ಕಾಂಚನ್, ಗೌರವಾಧ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ

“ಸಂಘಟನೆ ಬಲಿಷ್ಠವಾಗಲು ನಾವೆಲ್ಲರೂ ಜತೆಯಾಗಿ ಚಿಂತನೆ ನಡೆಸಿ, ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು. ಸರಿಯಾದ ಮಾರ್ಗದಲ್ಲಿ ಶ್ರಮಿಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ.” — ಗೋಪಾಲ್ ಪುತ್ರನ್, ಮಾಜಿ ಅಧ್ಯಕ್ಷರು

“ನಾವು ಇಂದು 84ನೇ ವರ್ಷದ ಮಹಾಸಭೆ ನಡೆಸುತ್ತಿರುವುದು ಸಂತಸದ ವಿಚಾರ. ಹಿರಿಯರ ಪರಿಶ್ರಮ, ನಿಸ್ವಾರ್ಥ ಸೇವೆ ಮತ್ತು ದೂರದೃಷ್ಟಿಯ ಫಲದಿಂದಾಗಿ ನಾವಿಂದು ಒಂದೆಡೆ ಸೇರಲು ಸಾಧ್ಯವಾಗಿದೆ. ಹಿರಿಯರ ಈ ಪರಂಪರೆ ಹಾಗೂ ನಿಸ್ವಾರ್ಥ ಸೇವೆಯ ರಥವನ್ನು ನಾವೆಲ್ಲರೂ ಪರಸ್ಪರ ವಿಶ್ವಾಸ-ಗೌರವದಿಂದ ಮುನ್ನಡೆಸಿಕೊಂಡು ಹೋಗೋಣ. ಇನ್ನೂ ನೂರಾರು ಮಹಾಸಭೆಗಳಲ್ಲಿ ಭಾಗವಹಿಸುವ ಸೌಭಾಗ್ಯವನ್ನು ಕುಲಮಾತೆಯು ನಮಗೆ ಕರುಣಿಸಲಿ.” — ಭಾರತಿ ನಾಯ್ಕ್, ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ

“ಕೂಡುಕಟ್ಟಿನ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಸಂಘದ ಹೆಗ್ಗಳಿಕೆ. ಬೇರೆ ಯಾವ ಸಂಘದಲ್ಲೂ ಈ ವಿಶೇಷ ವ್ಯವಸ್ಥೆ ಇಲ್ಲ. ನಾವು ಕೂಡುಕಟ್ಟಿನ ಸಂಪ್ರದಾಯವನ್ನು ಮುರಿಯುವಂತಿಲ್ಲ. ಬಗ್ವಾಡಿ ಹೋಬಳಿ, ಮಹಿಷಾಸುರಮರ್ದಿನಿ ದೇವಸ್ಥಾನ ಮತ್ತು ಮೊಗವೀರ ಮಹಾಜನ ಸೇವಾ ಸಂಘ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ; ಒಂದನ್ನು ಬಿಟ್ಟು ಮತ್ತೊಂದು ಇರಲು ಸಾಧ್ಯವಿಲ್ಲ.” — ಎನ್.ಎಚ್. ಬಗ್ವಾಡಿ, ಮಾಜಿ ಅಧ್ಯಕ್ಷರು

“ನವೆಂಬರ್ 1ರಂದು ಯುವಜನತೆಗಾಗಿ ವಿಶೇಷ ಕಾರ್ಯಕ್ರಮವನ್ನು ಮೀರಾರೋಡ್ ಸ್ಥಳೀಯ ಸಮಿತಿಯ ಸಂಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಾಣಲು ಎಲ್ಲರೂ ಸಹಕರಿಸಬೇಕು. ಹಾಗೆಯೇ ಪ್ರತಿಯೊಂದು ಸ್ಥಳೀಯ ಸಮಿತಿಯೂ ವಿಭಿನ್ನ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಿ, ಅದಕ್ಕೆ ನಮ್ಮೆಲ್ಲರ ಸಹಕಾರ ನಿರಂತರವಾಗಿ ಇರಲಿದೆ.” — ಮಹಾಬಲ ಕುಂದರ್, ಮಾಜಿ ಅಧ್ಯಕ್ಷರು



Related posts

ಶ್ರೀನಿವಾಸ ಫೌಂಡೇಶನ್, ಮುಂಬೈ ಹಾಗೂ ವಿಶ್ವ ಗಾಣಿಗರ ಚಾವಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 6 6ವಿದ್ಯಾರ್ಥಿಗಳಿಗೆ ₹11 ಲಕ್ಷ ವಿದ್ಯಾರ್ಥಿ ವೇತನ –26 ಬಡ ಕುಟುಂಬಗಳಿಗೆ ಅನ್ನಪೂರ್ಣ ಭಾಗ್ಯ

Mumbai News Desk

​ಮುಂಬೈನಲ್ಲಿ ಭಕ್ತಿಪೂರ್ವಕವಾಗಿ ನಡೆದ ‘ಶುಭ ಶುಕ್ರವಾರ’: ಸಾಂತಾಕ್ರೂಜ್‌ನಲ್ಲಿ ಗಮನಸೆಳೆದ ‘ಶಿಲುಬೆಯ ನೇರ ಹಾದಿ’ ನಡಿಗೆ

Mumbai News Desk

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ : ಸೀರೆ, ವಜ್ರಾಭರಣ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ,

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗದ ಮಹಿಳಾ ವಿಭಾಗದಿಂದ ‘ಹಳದಿ–ಕುಂಕುಮ’ ಕಾರ್ಯಕ್ರಮ

Mumbai News Desk

ಧರೆಗಿಳಿದ ಮಳೆಹನಿ, ಮಿನುಗಿದ ಮುಂಬೈ: ಪ್ರಕೃತಿಯ ವಿಶೇಷ ಸಿರಿಯಲ್ಲಿ 2026ರ ಉದಯ

Mumbai News Desk

ಕರ್ನಾಟಕ ಸಂಘ ಡೊಂಬಿವಲಿಯ ಮಂಜುನಾಥ ಮಹಾವಿದ್ಯಾಲಯದಲ್ಲಿ ಜ್ಞಾನದ ಹೊಸ ಪರ್ವ ಆರಂಭ: ಕಲಾ ಮತ್ತು ವಿಜ್ಞಾನ ಪದವಿಪೂರ್ವ ವಿಭಾಗಗಳಿಗೆ ವಿಧ್ಯುಕ್ತ ಚಾಲನೆ

Mumbai News Desk