November 3, 2026
Mumbai News Kannada
ಮುಂಬಯಿ

ಡೊಂಬಿವಲಿ ಮಹಾವಿಷ್ಣು ಮಂದಿರದ ಸುವರ್ಣ ಸಂಭ್ರಮ: ತುಳು ಹಾಸ್ಯ ಕವಿಗೋಷ್ಠಿ–2026 ಸಂಪನ್ನ



ಡೊಂಬಿವಲಿ (ಮಹಾರಾಷ್ಟ್ರ): ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ, ಮಂದಿರದ ಸಂಚಾಲಕ ಸಂಸ್ಥೆಯಾದ ಮುಂಬ್ರಾ ಮಿತ್ರ ಭಜನಾ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ 9ನೇ ಸರಣಿ ಕಾರ್ಯಕ್ರಮವಾದ ‘ತುಳು ಹಾಸ್ಯ ಕವಿ ಗೋಷ್ಠಿ–2026’ ಭಾನುವಾರ ಮಂದಿರದ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಮಂದಿರದ ಅರ್ಚಕ ಶ್ರೀ ಚಂದ್ರಶೇಖರ್ ಸಾಲಿಯಾನ್ ಅವರು ವಿಶೇಷ ಪೂಜೆ ಸಲ್ಲಿಸಿ, ಆಗಮಿಸಿದ್ದ ಅತಿಥಿ ಗಣ್ಯರು ಹಾಗೂ ಕವಿಗಳಿಗೆ ಪ್ರಸಾದ ವಿತರಿಸಿದರು.

ಡಾ. ಜಿ.ಪಿ. ಕುಸುಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ರತ್ನ ಮನೋಹರ್ ಮೆಂಡನ್ ಉಪಸ್ಥಿತರಿದ್ದರು. ಮಂದಿರದ ಉಪಾಧ್ಯಕ್ಷ ಶ್ರೀ ಅರವಿಂದ್ ಪದ್ಮಶಾಲಿ, ಗೌರವಾಧ್ಯಕ್ಷ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ, ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್, ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಪಡುಕುಡೂರು, ಶ್ರೀಮತಿ ದೀಪಾ ಹರೀಶ್ ಶೆಟ್ಟಿ, ಶ್ರೀಮತಿ ಕುಮುದಾ ಡಿ. ಶೆಟ್ಟಿ, ಶ್ರೀಮತಿ ಸರ್ವ ಅರಸ ಶೆಟ್ಟಿ, ಶ್ರೀ ಅಶೋಕ್ ವಳದೂರು, ಶ್ರೀ ರಮನ್ ಶೆಟ್ಟಿ ರೆಂಜಾಳ, ಶ್ರೀ ಓಂ ದಾಸ್ ಕಣ್ಣಂಗಾರ್ ಹಾಗೂ ಶ್ರೀ ಲೀಲೇಶ್ ಸುವರ್ಣ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೋಷ್ಠಿಯಲ್ಲಿ ಕವಿಗಳು ವಾಚಿಸಿದ ಹಾಸ್ಯಭರಿತ ತುಳು ಕವನಗಳು, ಚುಟುಕುಗಳು ಹಾಗೂ ವಿಡಂಬನಾತ್ಮಕ ಸಾಹಿತ್ಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಪ್ರಚಲಿತ ಸಾಮಾಜಿಕ ವಿದ್ಯಮಾನಗಳು, ಸಂಪ್ರದಾಯ ಹಾಗೂ ಹಳೆಯ ಕಾಲದ ಆಚಾರ–ವಿಚಾರಗಳನ್ನು ಹಾಸ್ಯದ ಧಾಟಿಯಲ್ಲಿ ತೆರೆದಿಟ್ಟ ಕವನಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು. ಭಾಗವಹಿಸಿದ ಎಲ್ಲ ಕವಿಗಳಿಗೂ ಸ್ಮರಣಿಕೆ, ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಜಿ.ಪಿ. ಕುಸುಮ, “ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಮಾದರಿಯಾಗಿ ಮೂಡಿಬಂದಿದೆ. ಮಂದಿರದ ಪಾವಿತ್ರ್ಯತೆಯ ವಾತಾವರಣದಲ್ಲಿ ಇಂತಹ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿರುವುದು ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಹಾಗೂ ಬೆಳವಣಿಗೆಗೆ ಪ್ರೇರಣಾದಾಯಕವಾಗಿದೆ,” ಎಂದು ಹೇಳಿದರು.

ಉಪಾಧ್ಯಕ್ಷ ಶ್ರೀ ಅರವಿಂದ್ ಪದ್ಮಶಾಲಿ ಅವರು ಮಾತನಾಡಿ, ಕವಿಗೋಷ್ಠಿ ಯಶಸ್ಸಿಗೆ ಶ್ರಮಿಸಿದ ಗಣ್ಯರು, ಕವಿಗಳು, ಕಾರ್ಯಕರ್ತರು ಮತ್ತು ಸಹೃದಯರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮಗಳಿಗೂ ಸಾರ್ವಜನಿಕರ ಸಹಕಾರ ಮುಂದುವರಿಯಬೇಕೆಂದು ಕೋರಿದರು.

ಶ್ರೀಮತಿ ರಜನಿ ಶೆಟ್ಟಿ, ಶ್ರೀಮತಿ ಭಾರತಿ ಶ್ರೀಯನ್ ಮತ್ತು ಶ್ರೀಮತಿ ಶಶಿಕಲಾ ಶ್ರೀಯನ್ ಪ್ರಾರ್ಥಿಸಿದರು. ಶ್ರೀಮತಿ ಪ್ರೇಮ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು.

ಮಂದಿರದ ಗೌರವ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ, “ಸುವರ್ಣ ಮಹೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ವಿಜ್ಞಾಪನಾ ಪತ್ರ ಬಿಡುಗಡೆಯಾಗಿದೆ. ಸಂಭ್ರಮಾಚರಣೆಗಾಗಿ ಸುಮಾರು ₹60 ಲಕ್ಷ ದೇಣಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಭಕ್ತರು ಹಾಗೂ ದಾನಿಗಳು ಕೈಜೋಡಿಸಬೇಕು. ಮಹಿಳಾ ವಿಭಾಗವು ನಿರಂತರವಾಗಿ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ,” ಎಂದರು. ಕೊನೆಯಲ್ಲಿ ಲಘು ಉಪಹಾರದೊಂದಿಗೆ ಸಭೆ ಮುಕ್ತಾಯಗೊಂಡಿತು.



Related posts

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ಡೊಂಬಿವಲಿಯಲ್ಲಿ ಸಾಯಿನಾಥ ಮಿತ್ರ ಮಂಡಲದ 20ನೇ ವರ್ಷದ ಮಹಾಪೂಜೆ ಸಂಪನ್ನ

Mumbai News Desk

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ತುಳು ದಿನಾಚರಣೆ,ಬಾಷೆ ನಶಿಸಿದಲ್ಲಿ ನಾವು ಸುರಕ್ಷಿತರು ಎನ್ನಲಾಗುದಿಲ್ಲ – ಶಿಮಂತೂರು ಚಂದ್ರಹಾಸ ಸುವರ್ಣ

Mumbai News Desk

ಗೊರೆಗಾಂವ್ ಪೂರ್ವ ನಿತ್ಯಾನಂದ ಆಶ್ರಮದಲ್ಲಿ ಉಚಿತ ವೈದ್ಯಕೀಯ ಶಿಬಿರ

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸಾರ್ವಜನಿಕ ಸಭೆ

Mumbai News Desk