
ಮಿಲಾಗ್ರೀಸ್ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ, ಲಯನ್ಸ್ ಕ್ಲಬ್ ಕೆಮ್ಮಣ್ಣು, ಲಯನ್ಸ್ ಕ್ಲಬ್ ಕಲ್ಯಾಣಪುರ ಹಾಗೂ ಮೂಲತ್ವ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವು ದಿನಾಂಕ 18.11.2026ರ ಬುಧವಾರದಂದು ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಕೆಮ್ಮಣ್ಣಿನ ಅಧ್ಯಕ್ಷರಾದ ಶ್ರೀ ಲಯನ್ ಜಗದೀಶ್ ಕೆಮ್ಮಣ್ಣು ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಮಿಲಾಗ್ರೀಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮೆಲ್ವಿನ್ ಎಂ. ಮೊಂಡೋನ್ಸ ಎಸ್.ಜೆ. ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೂಲತ್ವ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂಲತ್ವ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಕುಸುಮ್ ಡಿ-ಅಡಿಕ್ಷನ್ ಕೌನ್ಸಿಲರ್, ಥೆರಪಿಸ್ಟ್ ಹಾಗೂ ಎಜುಕೇಶನ್ ಕನ್ಸಲ್ಟೆಂಟ್ ಅವರು ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ಅಪಾಯಗಳು, ಅದರ ದುಷ್ಪರಿಣಾಮಗಳು ಹಾಗೂ ಮಾದಕ ವ್ಯಸನದಿಂದ ದೂರವಿರಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.
ಲಯನ್ ಎಸ್. ಅನಂತ್ ನಾಯಕ್ , ಲಯನ್ಸ್ ಜಿಲ್ಲಾ ಸಂಯೋಜಕರು, ಸರ್ವಿಸ್ ಟು ಸ್ಪೆಶಲ್ ಸ್ಮೈಲ್ ಅವರು ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ವಿವರಿಸುವುದರ ಜೊತೆಗೆ, ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಎಲ್ಲಾ ಕಾಲೇಜುಗಳಲ್ಲಿಯೂ ಆಯೋಜಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಗಣಪತಿ ವ್ಯವಸಾಯ ಸಹಕಾರಿ ಸಂಘ, ಕೆಮ್ಮಣ್ಣು ಇದರ ಅಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ, ಮಿಲಾಗ್ರಿಸ್ ಕಾಲೇಜಿನ 1984ನೇ ಬಿ.ಕಾಂ. ಬ್ಯಾಚ್ನ ಹಳೆಯ ವಿದ್ಯಾರ್ಥಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀ ನವೀನ್ ಗುಳಿಬೆಟ್ಟು, 1987ನೇ ಬ್ಯಾಚ್ನ ಹಳೆಯ ವಿದ್ಯಾರ್ಥಿ ಹಾಗೂ ಸಹ ಸಂಯೋಜಕರು ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರದ ಉಪಾಧ್ಯಕ್ಷ ಲಾನ್ಸಿ ಡಿಸಿಲ್ವ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕಲ್ಯಾಣಪುರದ ಕಾರ್ಯದರ್ಶಿ ಶ್ರೀ ಸುಧಾಕರ್ ಕೋಟ್ಯಾನ್ ಅವರು ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಸೇವನೆಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು












