
“ಸಮಾಜ ಅಭಿವೃದ್ಧಿ ಕಾರ್ಯಗಳು ರಂಗಚಾವಡಿಯಿಂದ ಇನ್ನಷ್ಟು ನಡೆಯಲಿ” – ಐಕಳ ಹರೀಶ್ ಶೆಟ್ಟಿ
ವರದಿ: ದಿನೇಶ್ ಕುಲಾಲ್
ಸುರತ್ಕಲ್ (ನ. 11): ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ (ರಿ), ಸುರತ್ಕಲ್, ಇವರ ಆಶ್ರಯದಲ್ಲಿ ‘ರಂಗಚಾವಡಿ ರಜತ ಸಂಭ್ರಮ’ ಮತ್ತು ‘ರಂಗುರಂಗಿನ ರಂಗೋತ್ಸವ’ ಕಾರ್ಯಕ್ರಮವು ಸುರತ್ಕಲ್ನ ಬಂಟರ ಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಮುಂಬೈನ ವಿ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷರಾದ ಮಧ್ಯಗುತ್ತು ಕರುಣಾಕರ ಎಂ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಿದರು.

- ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, “ರಂಗಚಾವಡಿ ಸಂಸ್ಥೆ ಅನೇಕ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ನಾಡಿಗೆ ಪರಿಚಯಿಸಿದ ಕೀರ್ತಿಗೆ ಭಾಜನವಾಗಿದೆ. ಮುಂದಿನ ದಿನಗಳಲ್ಲಿ ರಂಗಚಾವಡಿ ಒಂದು ಅಕಾಡೆಮಿಯಾಗಿ ರೂಪುಗೊಂಡು ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಿ” ಎಂದು ಶುಭ ಹಾರೈಸಿದರು.
- ಮಧ್ಯಗುತ್ತು ಕರುಣಾಕರ ಎಂ. ಶೆಟ್ಟಿ ಅವರು ಸಂಸ್ಥೆಯ ರಜತ ಸಂಭ್ರಮಕ್ಕೆ ಶುಭ ಕೋರಿ, “ಸಂಸ್ಥೆಯ ಕಾರ್ಯಚಟುವಟಿಕೆಗಳು ಇದೇ ರೀತಿ ಮುಂದುವರಿಯಲಿ” ಎಂದು ಆಶಿಸಿದರು.
- ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, “ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವ ರಂಗಚಾವಡಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ನವೀನ್ ಪಡೀಲ್ ಅವರಂತಹ ಮೇರು ನಟನಿಗೆ ರಂಗಚಾವಡಿ ಪ್ರಶಸ್ತಿ ದೊರೆತಿರುವುದು ಅತೀವ ಸಂತಸ ತಂದಿದೆ” ಎಂದರು.
- ಉದ್ಯಮಿ ಗಿರೀಶ್ ಎಂ. ಶೆಟ್ಟಿ ಅವರು ಮಾತನಾಡಿ, “ನವೀನ್ ಪಡೀಲ್ ಮುಗ್ಧ ಮನಸ್ಸಿನ ಪ್ರತಿಭಾವಂತ ಕಲಾವಿದರಾಗಿದ್ದಾರೆ. ಸದಾ ಹಸನ್ಮುಖಿಯಾಗಿರುವ ನವೀನ್ ಅವರು ಕಷ್ಟ ಮತ್ತು ಸುಖಗಳನ್ನು ಸಮಾನವಾಗಿ ಸ್ವೀಕರಿಸಿದ್ದಾರೆ. ತುಳು ರಂಗಭೂಮಿಗೆ ಅವರ ಕೊಡುಗೆ ದೊಡ್ಡದಿದೆ” ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಕಲಾವಿದ ನವೀನ್ ಡಿ. ಪಡೀಲ್ ಅವರಿಗೆ ‘ರಂಗಚಾವಡಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಡಾ. ಸಂಜೀವ ದಂಡೆಕೇರಿ, ಕಿಶೋರ್ ಡಿ. ಶೆಟ್ಟಿ, ಕರ್ನೂರು ಮೋಹನ್ ರೈ, ವಸಂತ ಶೆಟ್ಟಿ, ಈಶ್ವರ್ ಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ ತಡಂಬೈಲ್, ಭವಾನಿ ಶಂಕರ್ ಶೆಟ್ಟಿ ಬಾಳ, ರಮೆಶ್ ಶೆಟ್ಟಿ ಸುಭಾಷಿತನಗರ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಎಂ. ದೇವಾನಂದ ಶೆಟ್ಟಿ, ಸುಧಾಕರ ಎಸ್. ಪೂಂಜ, ಮತ್ತು ಉಲ್ಲಾಸ್ ಆರ್. ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಎಕ್ಕಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಶಸ್ತಿ ಪ್ರದಾನದ ಬಳಿಕ ರಂಗುರಂಗಿನ ರಂಗೋತ್ಸವದ ಹಾಸ್ಯ ಕಾರ್ಯಕ್ರಮ ಜರುಗಿತು.




