26 C
Mumbai
September 15, 2026
Mumbai News Kannada
ಕರ್ನಾಟಕ

ತುಳುವಿಗೆ 2ನೇ ಅಧಿಕೃತ ಭಾಷೆ ಸ್ಥಾನಮಾನ: ಕಾನೂನು ಕ್ರಮಕ್ಕೆ ಸರ್ಕಾರದ ಸಿದ್ಧತೆ






ಬೆಂಗಳೂರು, ಸೆ.15: ಕರಾವಳಿ ಕರ್ನಾಟಕದ ಕೋಟಿಗೂ ಅಧಿಕ ಜನರ ದಶಕಗಳ ಬೇಡಿಕೆಯಾಗಿರುವ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಕ್ರಿಯೆಗಳು ಮುಂದುವರಿದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ, ಕರಾವಳಿ ಸಂಸ್ಕೃತಿ ಮತ್ತು ತುಳು ಶಾಸನಗಳ ಕುರಿತು ಈಗಾಗಲೇ ಸಮಗ್ರ ಅಧ್ಯಯನ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 2023ರ ಫೆಬ್ರವರಿ 14ರಂದು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯ ಮುಂದುವರಿದ ಭಾಗವಾಗಿ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಕಾನೂನು ಮಾದರಿಗಳನ್ನು ಅಧ್ಯಯನ ಮಾಡಲು ಸರ್ಕಾರ ಮುಂದಾಗಿತ್ತು.
ಇದಕ್ಕಾಗಿ 2025ರ ಜುಲೈ 30ರಂದು ವಿಶೇಷ ಅಧ್ಯಯನ ತಂಡವನ್ನು ರಚಿಸಲಾಗಿತ್ತು. ಈ ತಂಡವು 2026ರ ಜನವರಿ 19 ಮತ್ತು 20ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಅನುಷ್ಠಾನದಲ್ಲಿರುವ ಕಾನೂನು ಚೌಕಟ್ಟು ಹಾಗೂ ಆಡಳಿತಾತ್ಮಕ ಮಾದರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿತ್ತು.
ಅಧ್ಯಯನದ ಬಳಿಕ ವಿಶೇಷ ತಂಡವು 2026ರ ಮಾರ್ಚ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ತಜ್ಞರ ಸಮಿತಿಯ ವರದಿ ಹಾಗೂ ಇತರ ರಾಜ್ಯಗಳಲ್ಲಿನ ಅಧಿಕೃತ ಭಾಷಾ ವ್ಯವಸ್ಥೆಗಳ ಅಧ್ಯಯನವನ್ನು ಆಧರಿಸಿ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.
ಕರಾವಳಿ ಕರ್ನಾಟಕದ ಜನರ ಬಹುಕಾಲದ ಆಶಯವಾಗಿರುವ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.



Related posts

ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್​ ಪತನ: ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ

Mumbai News Desk

ಬಳ್ಳಾರಿ : ಬ್ಯಾನರ್‌ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

Mumbai News Desk

ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ ರೂ. ಹಣ ದರೋಡೆ; ಗ್ಯಾಂಗ್ ಪರಾರಿ

Mumbai News Desk

ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮೇಜರ್ ಟ್ವಿಸ್ಟ್, ಮಾಸ್ಕ್ ಮ್ಯಾನ್ ಅರೆಸ್ಟ್.

Mumbai News Desk

ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ರಾಜ್ಯ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Mumbai News Desk

ಕರ್ನಾಟಕ : ಋತುಚಕ್ರದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

Mumbai News Desk