ಮಾನಂಪಾಡಿ ಮೊಗವೀರ ಸಭಾ (ರಿ.), ಮುಂಬಯಿ ಇದರ ವತಿಯಿಂದ ವಿಶೇಷ ಮಹಾಸಭೆ ಹಾಗೂ ಸದಸ್ಯರು ಮತ್ತು ಅವರ ಪರಿವಾರದವರಿಗಾಗಿ ಆಯೋಜಿಸಲಾಗಿದ್ದ ಕುಟುಂಬ ವಿಹಾರ ಕೂಟವು ಅಕ್ಟೋಬರ್ 24ರ ಶನಿವಾರ ಮತ್ತು ಅಕ್ಟೋಬರ್ 25ರ ಆದಿತ್ಯವಾರದಂದು ಬದ್ಲಾಪುರ ಪಶ್ಚಿಮದ ವೀರ್ ಫಾರ್ಮ್ ಆ್ಯಂಡ್ ರೆಸಾರ್ಟ್ನಲ್ಲಿ ಯಶಸ್ವಿಯಾಗಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ವೆಂಕಟೇಶ್ ಮೆಂಡನ್ ಅವರು ವಹಿಸಿದ್ದರು. ವಿರಾರ್-ನಾಲ್ಲಸೋಪಾರ ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಪಿ . ವಿ.ಕಾಂಚನ್ ಅವರನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಹಿರಿಯ ಸದಸ್ಯರಾದ ಪದ್ಮನಾಭ ಕೋಟ್ಯಾನ್, ಗಂಗಾಧರ ಕೋಟ್ಯಾನ್, ಹರೀಶ್ ಕೋಟ್ಯಾನ್, ಸುದಾಕರ್ ಕೋಟ್ಯಾನ್ ಹಾಗೂ ಪುರಂದರ ಸಾಲ್ಯಾನ್ ಅವರು ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಕುರಿತು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮನರಂಜನಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಸದಸ್ಯರು ಹಾಗೂ ಅವರ ಕುಟುಂಬದವರು ಕ್ರೀಡಾಕೂಟ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿಹಾರ ಕೂಟವನ್ನು ಸಂತಸದಿಂದ ಸಂಭ್ರಮಿಸಿದರು.
ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಿದ ಲೀಲೇಶ್ ಸುವರ್ಣ, ಜೀವನ್ ಬಂಗೇರ ಮತ್ತು ಪ್ರಕಾಶ್ ತಿಂಗಳಾಯ ಅವರನ್ನು ಅಭಿನಂದಿಸಲಾಯಿತು.
ಕಾರ್ಯದರ್ಶಿ ಭೂಪಾಲ್ ಮೆಂಡನ್ ಅವರು ವಂದನಾರ್ಪಣೆ ಸಲ್ಲಿಸಿದರು. ವಿಶೇಷ ಮಹಾಸಭೆ ಹಾಗೂ ಕುಟುಂಬ ವಿಹಾರ ಕೂಟವು ಸದಸ್ಯರ ಪರಸ್ಪರ ಬಾಂಧವ್ಯ, ಒಗ್ಗಟ್ಟು ಮತ್ತು ಸಂಘಟನೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು.



