October 26, 2026
Mumbai News Kannada
ತುಳುನಾಡು

ಗರೋಡಿಗಳ ಚಾಕರಿ ವರ್ಗದವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಶ್ಲಾಘನೀಯ: ವಿನಯಕುಮಾರ್ ಸೊರಕೆ



ಕಾಪು ತಾಲೂಕಿನ ಗರೋಡಿಗಳ ಪೂಜಾರಿಗಳು, ದರ್ಶನ ಪಾತ್ರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ, ಸಮಾಲೋಚನೆ ಮತ್ತು ಸನ್ಮಾನ ಸಮಾರಂಭ

ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು

ಉಡುಪಿ: ಕಟಪಾಡಿ ಶ್ರೀ ಬ್ರಹ್ಮ ಬೈದೆರ್ಕಳ ಆರಾಧನಾ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಗರೋಡಿಗಳ ಚಾಕರಿ ವರ್ಗದವರಲ್ಲಿ ಆತ್ಮವಿಶ್ವಾಸ ತುಂಬುವ ಮಹತ್ವದ ಕಾರ್ಯವನ್ನು ಆದಿ ಉಡುಪಿಯ ಶ್ರೀ ಬ್ರಹ್ಮ ಬೈದೆರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಮಾಡುತ್ತಿದೆ. ನಮ್ಮ ಸಮಾಜದ ಆರಾಧನಾ ಪರಂಪರೆಯನ್ನು ಗೌರವಿಸುವುದರ ಜತೆಗೆ ಅದನ್ನು ಉಳಿಸಲು ಶ್ರಮಿಸುತ್ತಿರುವವರ ಪರವಾಗಿ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕದ ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.

ಅವರು ಭಾನುವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಆದಿ ಉಡುಪಿಯ ಶ್ರೀ ಬ್ರಹ್ಮ ಬೈದೆರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕಾಪು ತಾಲೂಕಿನ ಗರೋಡಿಗಳ ಪೂಜಾರಿಗಳು, ಬೈದೆರ್ಕಳ ದರ್ಶನ ಪಾತ್ರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ, ಸಮಾಲೋಚನೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೋಟಿ-ಚೆನ್ನಯರ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ಸಮುದಾಯವು ಗರೋಡಿಗಳಲ್ಲಿ ಬೈದೆರ್ಕಳ ದರ್ಶನ ಪಾತ್ರಿಗಳಾಗಿ ಹಾಗೂ ಚಾಕರಿ ವರ್ಗದವರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಕೋಟಿ-ಚೆನ್ನಯರು ಬಿಲ್ಲು-ಪಗರಿ ವಿದ್ಯೆಯನ್ನು ಕಲಿತವರಾಗಿದ್ದು, ಅವರ ತಾಯಿ ದೇಯಿ ಬೈದೆತಿ ಗಿಡಮೂಲಿಕೆಗಳಿಂದ ಔಷಧ ತಯಾರಿಸುವ ಪರಂಪರೆಯನ್ನು ಹೊಂದಿದ್ದರು. ಇಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಮುದಾಯದ ಸೇವೆಯನ್ನು ಗುರುತಿಸಿ ಗೌರವಿಸುವ ಅಗತ್ಯವಿದೆ. ಗರೋಡಿಗಳಲ್ಲಿ ಸೇವೆ ಸಲ್ಲಿಸುವ ಅರ್ಹರಿಗೆ ಸರ್ಕಾರದಿಂದ ತಸ್ತೀಕ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಧ್ಯಯನ ನಡೆಸಿ, ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸುವ ಮೂಲಕ ಅವರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ವಿನಯಕುಮಾರ್ ಸೊರಕೆ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಬ್ರಹ್ಮ ಬೈದೆರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಸೂರ್ಯೋದಯ ಪೆರಂಪಳ್ಳಿ ಮಾತನಾಡಿ, ಹಿರಿಯರು ಅಪಾರ ಕಾಳಜಿ ಹಾಗೂ ಶ್ರಮದಿಂದ ಕಟ್ಟಿ ಬೆಳೆಸಿದ ಬೈದಶ್ರೀ ಸಂಸ್ಥೆಯ ಬೆಳವಣಿಗೆಯಲ್ಲಿ ಸಮಾಜದ ಜನರ ಕೊಡುಗೆ ಮಹತ್ವದ್ದಾಗಿದೆ. ಸಂಸ್ಥೆಯ ಬೆಳವಣಿಗೆಗೆ ನಿರಂತರವಾಗಿ ಸಹಕರಿಸುತ್ತಿರುವ ಗರೋಡಿಗಳ ಪೂಜಾರಿಗಳು, ದರ್ಶನ ಪಾತ್ರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ದರ್ಶನ ಪಾತ್ರಿಗಳ ಸೇವೆ ಹಾಗೂ ಸಹಕಾರ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮಹತ್ವದ ಬಲ ನೀಡುತ್ತದೆ ಎಂದರು.

ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರು ಪಡುಮಲೆಯ ಕೋಟಿ-ಚೆನ್ನಯರ ಕುರುಹುಗಳಿಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಾಂತೂರು ಕೋಟಿ-ಚೆನ್ನಯ ಫೌಂಡೇಶನ್‌ನ ಅಧ್ಯಕ್ಷ ಡಾ. ರಾಜಶೇಖರ್ ಕೋಟ್ಯಾನ್ ಮಾತನಾಡಿ, ದರ್ಶನ ಪಾತ್ರಿಗಳನ್ನು ತಾನು ಸಾಕ್ಷಾತ್ ಕೋಟಿ-ಚೆನ್ನಯರ ಸ್ವರೂಪದಲ್ಲಿಯೇ ಕಾಣುತ್ತೇನೆ. ಅವರು ಜಾತಿ-ಮತಗಳ ಭೇದವಿಲ್ಲದೆ ಎಲ್ಲರಿಗೂ ಗಂಧಪ್ರಸಾದ ನೀಡಿ ಆಶೀರ್ವದಿಸುವ ದೃಶ್ಯ ಮನಸ್ಸಿಗೆ ಸಂತೋಷ ನೀಡುತ್ತದೆ. ಇಂತಹ ಆರಾಧನಾ ಪರಂಪರೆ ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಬೆಳೆಸುತ್ತದೆ ಎಂದರು.

ಉದ್ಯಮಿಗಳಾದ ಕುಕ್ಕೆಹಳ್ಳಿಯ ಒಳಮಿಡಿ ಹರೀಶ್ ಪೂಜಾರಿ ಹಾಗೂ ಕನ್ನರ್ಪಾಡಿಯ ಕಿಶೋರ್ ಪೂಜಾರಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಮಹೇಶ್ ಅಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪಾಂಗಾಳ ಗುಡ್ಡೆ ಗರಡಿಯ ಸುಧಾಕರ ಡಿ. ಅಮೀನ್ ಹಾಗೂ ಕಾಪು ಶಾನದ ಪೂಜಾರಿ ಹರಿಶ್ಚಂದ್ರ ಪೂಜಾರಿ ವಿಷಯ ಮಂಡಿಸಿ, ಗರೋಡಿಗಳ ಆರಾಧನಾ ಪರಂಪರೆ, ದರ್ಶನ ಪಾತ್ರಿಗಳ ಸೇವೆ ಹಾಗೂ ಕೂಡುಕಟ್ಟಿನ ವ್ಯವಸ್ಥೆಯ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಶ್ರೀ ಬ್ರಹ್ಮ ಬೈದೆರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಹಾಗೂ ವಿಶ್ವಸ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಪು ತಾಲೂಕಿನ 100ಕ್ಕೂ ಅಧಿಕ ಗರೋಡಿಗಳ ಪೂಜಾರಿಗಳು, ಬೈದೆರ್ಕಳ ದರ್ಶನ ಪಾತ್ರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಾಯೋಜಕರನ್ನೂ ಸನ್ಮಾನಿಸಲಾಯಿತು.

ಉಡುಪಿ ಹಾಗೂ ಕಾಪು ತಾಲೂಕುಗಳಿಂದ ಆಗಮಿಸಿದ್ದ ಸುಮಾರು 500ಕ್ಕೂ ಅಧಿಕ ಬ್ರಹ್ಮ ಬೈದೆರ್ಕಳ ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಬ್ರಹ್ಮ ಬೈದೆರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಎಂ.ಕೆ. ಕಲ್ಮಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ದಾಮೋದರ್ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಸ್ತ ವಿಶ್ವನಾಥ್ ಕಲ್ಮಾಡಿ ವಂದಿಸಿದರು. ವಿ.ಜೆ. ತೇಜಸ್ ಜೆ. ಬಂಗೇರ ಹಾಗೂ ರಾಕೇಶ್ ಕೆ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.



Related posts

  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ  ಹೊರೆ ಕಾಣಿಕೆ   ಸಮರ್ಪಣೆ.

Mumbai News Desk

ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರಿಗೆ ಸನ್ಮಾನ

Mumbai News Desk

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk

ಪಡುಬಿದ್ರಿಯಲ್ಲಿ ಸೆರಾಕೇರ್ ವತಿಯಿಂದ ಸಡಗರದ ‘ಆಟಿದೊಂಜಿ ದಿನ’

Mumbai News Desk

‘ಹೊಸ ಅಂಗಣ’ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Mumbai News Desk

ಸಾಲಿಯಾನ್ ಆದಿ ಮೂಲಸ್ಥಾನ ಪಲಿಮಾರು : ವಾರ್ಷಿಕ ನಾಗದರ್ಶನ ಹಾಗೂ ದೈವದ ತಂಬಿಲ ಸೇವೆ ಸಂಪನ್ನ

Mumbai News Desk