November 3, 2026
Mumbai News Kannada
ನಿಧನ ಸುದ್ದಿ

ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ, ವಿಜ್ಞಾನಿ ಡಾ. ವ್ಯಾಸರಾವ್ ನಿಂಜೂರು ನಿಧನ



ಉಡುಪಿ, ನ.3: ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ, ಖ್ಯಾತ ಸಣ್ಣಕತೆಗಾರ, ನಾಟಕಕಾರ, ಕವಿ ಹಾಗೂ ವಿಜ್ಞಾನಿ ಉಡುಪಿ ಮೂಲದ ಡಾ. ವ್ಯಾಸರಾವ್ ನಿಂಜೂರು (86) ಅವರು ಮಂಗಳವಾರ ಮುಂಜಾನೆ ಮುಂಬಯಿಯ ಚೆಂಬೂರಿನ ಡಿಯೋನಾರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.

ಉಡುಪಿಯ ಮಲ್ಪೆ ಸಮೀಪದ ತೆಂಕನಿಡಿಯೂರಿನಲ್ಲಿ 1940ರ ಅಕ್ಟೋಬರ್ 6ರಂದು ಶ್ರೀನಿವಾಸ ನಿಂಜೂರು ಮತ್ತು ಸೀತಮ್ಮ ದಂಪತಿಯ ಪುತ್ರನಾಗಿ ಜನಿಸಿದ ವ್ಯಾಸರಾವ್ ನಿಂಜೂರು ಅವರು ಗರಡಿಮಜಲು, ಕೊಡವೂರು ಹಾಗೂ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಬಳಿಕ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಹಾಗೂ ಮುಂಬಯಿ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಗಳಿಸಿದ್ದರು.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ ಅವರು, 1965ರಲ್ಲಿ ಮುಂಬಯಿಯ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಜೀವರಸಾಯನಶಾಸ್ತ್ರ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ವಿಜ್ಞಾನಿಯಾಗಿ ಸೇವೆಗೆ ಸೇರ್ಪಡೆಗೊಂಡರು. 1996ರಲ್ಲಿ ಸ್ವಯಂ ನಿವೃತ್ತಿ ಹೊಂದುವವರೆಗೆ ಅಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದ ಅವಧಿಯಲ್ಲಿ ಅವರು ನಡೆಸಿದ ಸಂಶೋಧನೆಗಳ ಫಲವಾಗಿ 82 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ವಿಶ್ವದ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದವು.

ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಕನ್ನಡದ ಪ್ರಮುಖ ಸಾಹಿತಿ, ಸಣ್ಣಕತೆಗಾರ, ನಾಟಕಕಾರ ಹಾಗೂ ಕವಿಯಾಗಿ ಗುರುತಿಸಿಕೊಂಡಿದ್ದ ಅವರ ಸಾಹಿತ್ಯ ಕೃಷಿ ವೈವಿಧ್ಯಮಯವಾಗಿತ್ತು. ‘ತೆಂಕನಿಡಿಯೂರಿನ ಕುಳುವಾರಿಗಳು’, ‘ಚಾಮುಂಡೇಶ್ವರಿ ಭವನ’ ಮತ್ತು ‘ಉಸಿರು’ ಅವರ ಪ್ರಮುಖ ಕಾದಂಬರಿಗಳಾಗಿವೆ. ‘ಕುಂಕುಮ’, ‘ಮಂಟ’, ‘ದೂಜಮಾಸ್ತರರ ಮಗಳು ಬಸಿರಾದುದು’ ಮೊದಲಾದ ಕಥಾಸಂಕಲನಗಳು ಓದುಗರ ಗಮನ ಸೆಳೆದಿವೆ. ‘ನಲ್ವತ್ತರ ನಲುಗು’ ಅವರ ಯಶಸ್ವಿ ನಾಟಕ ಕೃತಿಯಾಗಿದ್ದು, ಮಕ್ಕಳಿಗಾಗಿ ‘ಹೋಮಿ ಭಾಭಾ’ ಕೃತಿಯನ್ನೂ ರಚಿಸಿದ್ದರು.

ಅವರ ಅನೇಕ ಕಥೆಗಳು ಹಾಗೂ ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದವು. ‘ಸಮಗ್ರ ಕಥೆಗಳು’ ಮತ್ತು ಆತ್ಮಕಥನ ‘ಎಳೆದ ತೇರು’ ಕೃತಿಗಳೂ ಪ್ರಕಟಗೊಂಡಿವೆ. ತಮ್ಮ ಸೃಜನಶೀಲ ಬರವಣಿಗೆ, ಜೀವನಾನುಭವ ಹಾಗೂ ವಿಶಿಷ್ಟ ಕಥನಶೈಲಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

ಅವರ ‘ಉಸಿರು’ ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ ಹಾಗೂ ‘ಚಾಮುಂಡೇಶ್ವರಿ ಭವನ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಅಲ್ಲದೆ ವರ್ಧಮಾನ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದರು. ಮೂಡುಬಿದಿರೆ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕಶ್ರೀ ಪ್ರಶಸ್ತಿ’, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್ ಹಾಗೂ ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರನ್ನು ಅರಸಿ ಬಂದಿದ್ದವು.

ಕನ್ನಡದ ಸಮಕಾಲೀನ ಹಿರಿಯ ಸಾಹಿತಿಗಳಾದ ಡಾ. ಕಾರಂತ, ವ್ಯಾಸರಾಯ ಬಲ್ಲಾಳ, ಬಿ.ಎ. ಸನದಿ, ಸದಾನಂದ ಸುವರ್ಣ, ಗೌರೀಶ ಕಾಯ್ಕಿಣಿ ಹಾಗೂ ಕು.ಶಿ. ಹರಿದಾಸ ಭಟ್ ಮೊದಲಾದವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಡಾ. ವ್ಯಾಸರಾವ್ ನಿಂಜೂರು ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು.



Related posts

ಮುಂಬೈಯ ಖ್ಯಾತ ಶನಿಗ್ರಂಥ ವಾಚಕ, ಭಾಗವತರಾದ ಜಗದೀಶ್ ನಿಟ್ಟೆ ಅವರ ಮಾತೃಶ್ರೀ ಕುಸುಮಾ ಪೂಜಾರಿ ನಿಧನ

Mumbai News Desk

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ

Mumbai News Desk

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಗೌರವಾಧ್ಯಕ್ಷ ನಾರಾಯಣ ಪಿ. ಅಮೀನ್ ನಿಧನ

Mumbai News Desk

ರಂಗಕರ್ಮಿ, ಸಾಹಿತಿ ಪರಮಾನಂದ ವಿ. ಸಾಲ್ಯಾನ್ ಇನ್ನಿಲ್ಲ: ಸಸಿಹಿತ್ಲುವಿನಲ್ಲಿ ಇಂದು ಅಂತಿಮ ದರ್ಶನ

Mumbai News Desk

ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) ನಿಧನ

Mumbai News Desk

ಹೆಜಮಾಡಿ: ಆಶಾ ಕಾರ್ಯಕರ್ತೆ, ಧಾರ್ಮಿಕ ಮುಖಂಡೆ ಸರೋಜಿನಿ ಸಂಜೀವ ಮಾಸ್ಟರ್ ನಿಧನ

Mumbai News Desk