
ಯುವ ಪೀಳಿಗೆ ಸಮಾಜ ಸೇವೆಯತ್ತ ಹೆಚ್ಚು ಗಮನ ಹರಿಸಿ: ನಗರ ಸೇವಕಿ ಶೈಲಾ ಜೆ. ಪಾಟೀಲ್ ಕುಲಾಲ್
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬೈ ಸ್ಥಳೀಯ ಸಮಿತಿಯ ವತಿಯಿಂದ ಮಾರ್ಚ್ 28ರಂದು ನವಿ ಮುಂಬೈಯ ಖರ್ಘರ್ ಸೆಕ್ಟರ್-7, ಪಟೇಲ್ ಹೆರಿಟೇಜ್ ಸೊಸೈಟಿ ಹಾಲ್ ಇಲ್ಲಿ ಸತ್ಯನಾರಾಯಣ ಪೂಜೆ ಮತ್ತು 150 ನೇ ತಿಂಗಳ ಭಜನೆ, ಹಳದಿ ಕುಂಕುಮ ಕಾರ್ಯಕ್ರಮವು ನಡೆಯಿತು.
ಸಂಘದ ವಿವಿಧ ಸ್ಥಳೀಯ ಸಮಿತಿಯವರಿಂದ ಭಜನೆಯ ಮಂಗಳದ ನಂತರ ನಡೆದ ಸಭಾ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ರಘು ಮೂಲ್ಯ ಪಾದೆಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಹಾಗೂ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬೇಬಿ ಬಂಗೇರ, ನೆರೂಲ್ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಜೆ. ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಕೃಪೇಶ್ ಕುಲಾಲ್, ಆಧ್ಯಾತ್ಮಿಕ ಸಮಿತಿಯ ಸುಂದರ್ ಎನ್. ಮೂಲ್ಯ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶೋಭಾ ಎನ್. ಬಂಗೇರ, ಕಾರ್ಯದರ್ಶಿ ಉಷಾ ಆರ್. ಮೂಲ್ಯ, ಕೋಶಾಧಿಕಾರಿ ಪ್ರೇಮಾ ಎಲ್. ಮೂಲ್ಯ ಜೊತೆ ಕೋಶಾಧಿಕಾರಿ ಸಂಚಲಾ ಮೂಲ್ಯ ಉಪಸ್ಥಿತರಿದ್ದರು.

ಪೂಜಾ ವಿಧಿಗಳನ್ನು ನಡೆಸಿದ ಉದಯ್ ಭಟ್ ಮಾತನಾಡುತ್ತಾ, “ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸನಾತನ ಧರ್ಮದ ಪ್ರತೀಕವಾಗಿವೆ. ಈ ರೀತಿಯ ಪೂಜೆ ಹಾಗೂ ಭಜನೆಗಳನ್ನು ಪ್ರತಿಯೊಂದು ಸಂಘ ಸಂಸ್ಥೆಗಳು ಆಯೋಜಿಸುವುದರಿಂದ ಸಮಾಜದ ಎಲ್ಲರೂ ಒಂದೇ ಕುಟುಂಬದಂತೆ ಒಂದಾಗಿ ಸೇರಿ ಬಾಂಧವ್ಯವನ್ನು ಬಲಪಡಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ಹಾಗೆಯೇ, “ಈ ಪೂಜೆಯನ್ನು ಭಯಭಕ್ತಿಯಿಂದ, ನಿರ್ಮಲ ಮನಸ್ಸಿನಿಂದ, ಯಾವುದೇ ಭೇದಭಾವವಿಲ್ಲದೆ ಮಾಡಬೇಕು ಮತ್ತು ಕೇಳಬೇಕು. ಇಡೀ ಜಗತ್ತು ಪರಮಾತ್ಮನ ಅಧೀನದಲ್ಲಿರುವಾಗ, ಮನಸ್ಸಿನಲ್ಲಿರುವ ಕಲಹ, ಬೇಸರ ಮತ್ತು ಕಲ್ಮಶಗಳು ದೂರವಾಗುತ್ತವೆ. ಮನೆಯಲ್ಲಿ ಉಂಟಾಗುವ ದೋಷ-ಬಾಧೆಗಳು ನಿವಾರಣೆಯಾಗುತ್ತವೆ. ಭಕ್ತಿ ಮತ್ತು ಶ್ರದ್ಧೆಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಸರ್ವಸಂಪತ್ತು ದೊರೆಯುತ್ತಾ ಯಶಸ್ಸಿನ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ” ಎಂದು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಸಂಘದ ಅಧ್ಯಕ್ಷರಾದ ರಘು ಮೂಲ್ಯರವರು ಮಾತನಾಡುತ್ತಾ, ಸಂಘದ ಏಳಿಗೆಗಾಗಿ ಎಲ್ಲರೂ ಸಂಘಟನೆಯನ್ನು ಬಲಪಡಿಸಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ನವಿ ಮುಂಬಯಿ ಸ್ಥಳೀಯ ಸಮಿತಿಯವರ ಗುರುವಂದನಾ ಭಜನಾ ಮಂಡಳಿಯ ಮನೆ ಮನೆಗಳಲ್ಲಿ ನಡೆಯುವ 150ನೇ ಭಜನೆ ಕಾರ್ಯಕ್ರಮವು ಬಹಳ ವೈಭವದಿಂದ ನೆರವೇರಿತು. ಸಂಘವನ್ನು ಉನ್ನತಿಯತ್ತ ಕೊಂಡೊಯ್ಯಬೇಕು ಎಂಬ ಮಹತ್ವದ ಉದ್ದೇಶದಿಂದ ಬಹುಕೋಟಿ ವೆಚ್ಚದಲ್ಲಿ ನಿರ್ಮಿತವಾಗಿರುವ ಕುಲಾಲ ಭವನ, ಮಂಗಳೂರು ಇದರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ. ಈ ಯೋಜನೆಗೆ ನೀಡುವ ನಿಮ್ಮ ಆರ್ಥಿಕ ಸಹಾಯವು ಅವಶ್ಯಕತೆ ಬಂದಾಗ ನಿಮಗೆ ಮರಳಿ ದೊರೆಯುತ್ತದೆ ಎಂಬ ವಿಶ್ವಾಸವನ್ನು ನೀಡಲಾಗಿದೆ. ಆದ್ದರಿಂದ ಯಾರೂ ಮನಸ್ಸಿನಲ್ಲಿ ಯಾವುದೇ ಸಂಶಯ ಇಟ್ಟುಕೊಳ್ಳದೆ, ಸಂಘದ ಹಿತಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಸುಚಿತಾ ಡಿ. ಬಂಜನ್ ಅವರು ಮಾತನಾಡುತ್ತಾ ಇಂದಿನ ಪೂಜಾ ವಿಧಿ ವಿಧಾನಗಳ ಮಹತ್ವವನ್ನು ವಿವರಿಸಿದರು. ಹಳದಿ ಕುಂಕುಮ ಕಾರ್ಯಕ್ರಮವು ಕಾರ್ಯಾಧ್ಯಕ್ಷೆ ಬೇಬಿ ಬಂಗೇರ ಅವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಮೂಲಕ ಮಹಿಳೆಯರ ಶಿಸ್ತು, ಸಹಕಾರ ಹಾಗೂ ಒಗ್ಗಟ್ಟಿನ ಮನೋಭಾವ ಸ್ಪಷ್ಟವಾಗಿ ತೋರಿಬಂದಿತು. ಎಲ್ಲರೂ ಒಂದಾಗಿ ಕೆಲಸ ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಕಾರಣ, ಸ್ಥಳೀಯ ಸಮಿತಿ ಎಲ್ಲರಿಗೂ ಮಾದರಿಯಾಯಿತು. ಹೆಚ್ಚು ಹೆಚ್ಚು ಯುವ ವಿಭಾಗದವರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂಘದ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ನುಡಿದರು.
ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘ ಉನ್ನತಿಯತ್ತ ಸಾಗುತ್ತಿರುವ ಮಹತ್ತರ ಸಂಸ್ಥೆಯಾಗಿದೆ. ಮಣಿಲ ಶ್ರೀ ಮೋಹನ್ ದಾಸ್ ಸ್ವಾಮೀಜಿಯವರ ಆಶೀರ್ವಾದದಿಂದ ಸ್ಥಾಪಿತವಾದ ಗುರುವಂದನಾ ಭಜನಾ ಮಂಡಳಿ ಸಮಾಜದಲ್ಲಿ ಆತ್ಮೀಯತೆ ಮತ್ತು ಭಕ್ತಿಭಾವವನ್ನು ಬೆಳೆಸುತ್ತಿದೆ. ಕುಲಾಲ ಭವನ ನಿರ್ಮಾಣಕ್ಕೆ ಯಾವುದೇ ಭೇದಭಾವವಿಲ್ಲದೆ ಎಲ್ಲಾ ಧರ್ಮದವರು ಸಹಕರಿಸಿರುವುದು ಸಂಘದ ವೈಶಿಷ್ಟ್ಯವಾಗಿದೆ. ಮಹತ್ತರ ಕಾರ್ಯಕ್ಕೆ ಕೈಜೋಡಿಸಿದ ಎಲ್ಲಾ ದಾನಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿದ ಶೈಲಾ ಜೆ. ಪಾಟೀಲ್ ಕುಲಾಲ್ ಅವರು ಮಾತನಾಡುತ್ತಾ, ಇಂತಹ ಸಾರ್ಥಕ ಮತ್ತು ಸಂಸ್ಕೃತಿಪರ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿ ಸನ್ಮಾನಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಈ ಗೌರವವು ನನಗೆ ಮತ್ತಷ್ಟು ಸಮಾಜ ಸೇವೆಗೆ ಪ್ರೇರಣೆಯಾಗುತ್ತದೆ. ನಮ್ಮ ಬಾಂಧವರ ಸಂಘಟನೆ ಬಲಿಷ್ಠವಾಗಬೇಕು ಎಂಬುದು ನನ್ನ ಆಶಯವಾಗಿದ್ದು, ಅದರ ಅಭಿವೃದ್ಧಿಗೆ ನಾನು ಸದಾ ಬೆಂಬಲವಾಗಿ ನಿಂತುಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅತ್ಯಂತ ಅಗತ್ಯ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಹಿಳೆಯರು ಮತ್ತು ಯುವಕರು ಯಾವುದೇ ಹಿಂಜರಿಕೆಯಿಲ್ಲದೆ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಂದಿನ ಯುವ ಪೀಳಿಗೆ ಸಮಾಜ ಸೇವೆಯತ್ತ ಹೆಚ್ಚು ಗಮನ ಹರಿಸಿದರೆ ನಮ್ಮ ಕುಲಾಲ ಸಮುದಾಯ ಮತ್ತಷ್ಟು ಪ್ರಗತಿಪರವಾಗುತ್ತದೆ. ಶಿಕ್ಷಣ, ಶಿಸ್ತು ಮತ್ತು ಸೇವಾ ಮನೋಭಾವದಿಂದ ನಾವು ನಮ್ಮ ಸಮಾಜವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ತಿಳಿಸಿದರು.
ಸತ್ಯನಾರಾಯಣ ಪೂಜೆಯು ಸಿ.ಎ. ಅಕ್ಷತ್ ಶೀನಾ ಮೂಲ್ಯ ದಂಪತಿಗಳ ಯಜಮಾನಿಕೆಯಲ್ಲಿ ಉದಯ್ ಭಟ್ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಬಿಲ್ಡಿಂಗ್ ಕಮಿಟಿ ಉಪ ಕಾರ್ಯಾಧ್ಯಕ್ಷರಾದ ಸುನಿಲ್ ಆರ್. ಸಾಲಿಯಾನ್ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸದಾನಂದ್ ಕುಲಾಲ್, ಸುರೇಶ್ ಕುಲಾಲ್, ಪ್ರಸಾದ್ ಮೂಲ್ಯ, ವಾಸು ಬಂಗೇರ, ಪಿ. ಶೇಖರ್ ಮೂಲ್ಯ, ಅಕ್ಷತ್ ಮೂಲ್ಯ, ಆನಂದ್ ಆರ್. ಮೂಲ್ಯ, ಬಿ.ಜಿ. ಅಂಚನ್, ದೇವಕಿ ಸುನಿಲ್ ಸಾಲಿಯಾನ್, ಮಂಗಳೂರಿನಿಂದ ಮಲ್ಲಿಕಾ ದಯಾನಂದ ಕುಲಾಲ್, ಸೀವುಡ್ಸ್‌ನ ದಯಾನಂದ್ ಮೂಲ್ಯ, ಆಶಾ ಮೂಲ್ಯ, ಶಶಿಕಲಾ ಮೂಲ್ಯ, ಭವ್ಯಾ ಕುಲಾಲ್ ಕಾರ್ಯಕ್ರಮಕ್ಕೆ ಸಹಕರಿಸಿದರು.
ಪ್ರತಿ ಸ್ಥಳೀಯ ಸಮಿತಿಯವರಿಂದ ಅರ್ಧ ಗಂಟೆಯ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎಲ್.ಆರ್. ಮೂಲ್ಯ ಸ್ವಾಗತಿಸಿದರು, ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಆರ್. ಮೂಲ್ಯ ಮತ್ತು ರೇಖಾ ಮೂಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಪೂಜಾ ನೃತ್ಯವನ್ನು ನವೀಸ್ತಾ ಮೂಲ್ಯ ಮಾಡಿದರೆ, ಸ್ಥಳೀಯ ಸಮಿತಿಯ ಆಧ್ಯಾತ್ಮಿಕ ಸಮಿತಿಯ ಸುನೀತಾ ಎಸ್. ಮೂಲ್ಯ ಮತ್ತು ಶಕುಂತಲಾ ಬಂಜನ್ ಪ್ರಾರ್ಥನೆಗೈದರು. ಸಂಚಲಾ ಮೂಲ್ಯ ವಂದನಾರ್ಪಣೆ ಮಾಡಿದರು. ನವಿ ಮುಂಬಯಿ ರಾಘವೇಂದ್ರ ಕ್ಯಾಟರರ್ಸ್ ಮಾಲೀಕರಾದ ಉದಯ್ ಭಟ್ ಅವರಿಂದ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಹಳದಿ ಕುಂಕುಮಕ್ಕೆ ಸನಾತನ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದೆ: ಸರೋಜಿನಿ ಜೆ. ಪೂಜಾರಿ
ಮುಖ್ಯ ಅತಿಥಿಯಾಗಿ ಆಗಮಿಸಿದ ನೆರೂಲ್ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಜೆ. ಪೂಜಾರಿಯವರು ಮಾತನಾಡುತ್ತಾ, “ಸನಾತನ ಹಿಂದೂ ಧರ್ಮದಲ್ಲಿ ಹಳದಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಅರಿಶಿನದಲ್ಲಿ ಇರುವ ರೋಗನಿರೋಧಕ ಶಕ್ತಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ದುಷ್ಟಶಕ್ತಿಗಳನ್ನು ನಿವಾರಿಸಿ ಮನೆಗೆ ಶುಭ ತರುತ್ತದೆ” ಎಂದು ಅದರ ಮಹತ್ವವನ್ನು ತಿಳಿಸಿದರು.
ಸದಸ್ಯರ ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ಸು: ಬೇಬಿ ವಾಸು ಬಂಗೇರ
ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬೇಬಿ ವಾಸು ಬಂಗೇರ ಸ್ವಾಗತಿಸಿ, ಸಮಿತಿಯ ಸದಸ್ಯರ ಸ್ಪಂದನೆ ಮತ್ತು ಒಗ್ಗಟ್ಟಿನಿಂದಾಗಿ ಪ್ರತಿ ತಿಂಗಳು ಭಜನಾ ಸಂಕೀರ್ತನೆ ಯಶಸ್ವಿಯಾಗಿ ನಡೆಯುತ್ತಿದೆ. ಇದರಿಂದ ಸಮಾಜ ಬಾಂಧವರಲ್ಲಿ ಧಾರ್ಮಿಕ ಮನೋಭಾವನೆ ಮತ್ತು ಸಂಬಂಧಗಳು ಗಟ್ಟಿಯಾಗಿದೆ ಎಂದರು.




