31 C
Mumbai
September 11, 2026
Mumbai News Kannada
ಸುದ್ದಿ

ಮೂಡುಬಿದಿರೆ ಪುರಸಭೆಯ ಘೋರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ, ಕಂಬಳದ ಗದ್ದೆಯಂತಾದ ಸಮಗಾರಗುಂಡಿ : ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳ ಪರವಾಗಿ ಸಮಾಜ ಸೇವಕ ಸತೀಶ್ ಬಂಗೇರ ತೀವ್ರ ಆಕ್ಷೇಪ





ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಸಮಗಾರಗುಂಡಿ ರಸ್ತೆಯು ಸದ್ಯ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಹ ಅತ್ಯಂತ ಕಳವಳಕಾರಿ ಸ್ಥಿತಿ ನಿರ್ಮಾಣವಾಗಿದೆ. ಸಮಗಾರಗುಂಡಿ(NH-66) ಬಾಂಬೆ ಶಾಂತ್ ಡ್ರೈ ಕ್ಲೀನ್ ಸಂಸ್ಥೆಯ ಎದುರು ಯಾವುದೇ ಸಮರ್ಪಕ ಚರಂಡಿ ಹಾಗೂ ವೈಜ್ಞಾನಿಕ ನೀರು ಹರಿವಿನ ವ್ಯವಸ್ಥೆ ಇಲ್ಲದೇ ಇರುವುದರಿಂದ, ಕೇವಲ ಸಾಧಾರಣ ಮಳೆ ಬಂದರೂ ಸಾಕು, ಇಡೀ ರಸ್ತೆ ಹೊಂಡದಂತಾಗಿ ಮಾರ್ಪಡುತ್ತಿದೆ.

ಮಳೆ ನಿಂತ ಗಂಟೆಗಳ ಬಳಿಕವೂ ರಸ್ತೆಯ ಮೇಲಿನ ನೀರು ಕಿಂಚಿತ್ತೂ ಕದಡದೆ ಹಾಗೇ ನಿಲ್ಲುತ್ತಿರುವುದರಿಂದ ಇಡೀ ರಸ್ತೆ ಒಂದು ಕೃತಕ ಈಜುಕೊಳದಂತೆ ಭಾಸವಾಗುತ್ತಿದೆ. ರಸ್ತೆಯ ಮೇಲ್ಭಾಗದ ಏರು ಪ್ರದೇಶದಿಂದ ಹರಿದು ಬರುವ ಅಪಾರ ಪ್ರಮಾಣದ ಮಳೆನೀರು ಮತ್ತು ಕೆಸರು ರಸ್ತೆಯ ಕೆಳಭಾಗದಲ್ಲಿರುವ ಪ್ರಮುಖ ಸಮಾಜ ಸೇವಕರಾದ ಸತೀಶ್ ಬಂಗೇರ ಅವರ ‘ಬಂಗೇರ ನಿವಾಸ’ದ ಮುಂಭಾಗದಲ್ಲೇ ಬಂದು ಜಮಾವಣೆಗೊಳ್ಳುತ್ತಿದ್ದು, ಇಡೀ ವಸತಿ ಪ್ರದೇಶವು ಸಾಂಪ್ರದಾಯಿಕ ಕಂಬಳದ ಗದ್ದೆಯ ದುಸ್ಥಿತಿಗೆ ತಲುಪಿದೆ.


ರಸ್ತೆಯುದ್ದಕ್ಕೂ ಮೊಣಕಾಲುದ್ದಕ್ಕೆ ಕೆಸರು ಮಿಶ್ರಿತ ನೀರು ಆವರಿಸಿರುವುದರಿಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ರಸ್ತೆ ದಾಟಲು ಅಸಾಧ್ಯವಾಗಿ ತೀವ್ರ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಅತ್ಯಂತ ಗಂಭೀರ ಹಾಗೂ ನಿರಂತರ ಸಮಸ್ಯೆಯ ಕುರಿತು ಸಮಾಜ ಸೇವಕ ಸತೀಶ್ ಬಂಗೇರ ಅವರು ಮುಂಬೈ ನ್ಯೂಸ್ ಪ್ರತಿನಿಧಿಯೊಂದಿಗೆ ವಿಶೇಷವಾಗಿ ಮಾತನಾಡಿ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. “ಇಲ್ಲಿನ ಸಾರ್ವಜನಿಕರ ಮತ್ತು ಕಷ್ಟಗಳ ಕುರಿತು ಪುರಸಭೆಗೆ ಈ ಹಿಂದೆಯೇ ಲಿಖಿತವಾಗಿ ಹಲವಾರು ಬಾರಿ ಅಧಿಕೃತ ದೂರುಗಳನ್ನು ನೀಡಲಾಗಿದೆ. ಆದರೆ ದುರದೃಷ್ಟವಶಾತ್, ಪುರಸಭೆಯ ಉನ್ನತ ಅಧಿಕಾರಿಗಳಾಗಲಿ ಅಥವಾ ಈ ಭಾಗದ ಜನಪ್ರತಿನಿಧಿಗಳಾಗಲಿ ಸಾರ್ವಜನಿಕರ ಈ ಜೀವನ್ಮರಣ ಸಮಸ್ಯೆಯನ್ನು ಕನಿಷ್ಠ ಸೌಜನ್ಯಕ್ಕೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳ ಈ ಉಡಾಫೆ ಮತ್ತು ತೀವ್ರ ಬೇಜವಾಬ್ದಾರಿತನವೇ ಇಂದಿನ ಈ ದುಸ್ಥಿತಿಗೆ ನೇರ ಕಾರಣ” ಎಂದು ತೀವ್ರ ಅಸಮಾಧಾನದೊಂದಿಗೆ ತಮ್ಮ ಅಳಲನ್ನು ಮತ್ತು ಆಕ್ರೋಶವನ್ನು ತೋಡಿಕೊಂಡಿದ್ದಾರೆ.
ಪುರಸಭೆಯ ಈ ನಿರಂತರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದ ಧೋರಣೆಯ ವಿರುದ್ಧ ಸ್ಥಳೀಯ ನಿವಾಸಿಗಳು ಹಾಗೂ ನಿತ್ಯ ಸಂಚರಿಸುವ ವಾಹನ ಸವಾರರು ಈಗ ರೊಚ್ಚಿಗೆದ್ದಿದ್ದಾರೆ. ತೆರಿಗೆ ಪಾವತಿಸುವ ನಾಗರಿಕರಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಲಾಗದ ಪುರಸಭೆ ನಮಗೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ನಗರಾಡಳಿತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಇಲ್ಲಿನ ಚರಂಡಿ ವ್ಯವಸ್ಥೆಯನ್ನು ಯುದ್ಧೋಪಾದಿಯಲ್ಲಿ ಶಾಶ್ವತವಾಗಿ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆಯ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಜಂಟಿಯಾಗಿ ಎಚ್ಚರಿಸಿದ್ದಾರೆ.



Related posts

ಶಬರಿಮಲೆ ಯಾತ್ರೆಗೆ ನವೆಂಬರ್ 1ರಿಂದ ಆನ್‌ಲೈನ್ ಬುಕ್ಕಿಂಗ್ ಆರಂಭ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರದ ಗೌ ಅಧ್ಯಕ್ಷ, , ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಸುರೇಶ್ ಎಸ್.ಪೂಜಾರಿ ಪಡುಕೋಣೆ ವಿಧಿವಶ.

Mumbai News Desk

ಇಂದಿನಿಂದ ರೈಲು ಪ್ರಯಾಣ ದರ ಏರಿಕೆ : ರೈಲ್ವೆಯಿಂದ ಪ್ರಯಾಣದರ ಏರಿಕೆ ಅಧಿಸೂಚನೆ

Mumbai News Desk

ಸಾಧಕ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಭವ್ಯ ಸನ್ಮಾನ: ದೇಶದ ಭವಿಷ್ಯ ಕಟ್ಟಲು ಮಕ್ಕಳಿಗೆ ಸಂಸ್ಕಾರ ಅಗತ್ಯ – ಶ್ರೀ ಶೀರೂರು ಶ್ರೀಗಳು

Mumbai News Desk

ದಿಶಾ ಸಾಲ್ಯಾನ್ ಅವರ ತಂದೆಯ ಅರ್ಜಿಯನ್ನು ಸೂಕ್ತ ಪೀಠದ ಮುಂದೆ ಇಡಲು ಬಾಂಬೆ ಹೈಕೋರ್ಟ್ ನಿರ್ದೇಶನ

Mumbai News Desk

ಯುವ ಸಿಂಚನ ಪತ್ರಿಕೆಯ ಸಂಪಾದಕ, ಎನ್ ಎಸ್ ಸಿಡಿಎಫ್ ನ ಪ್ರಧಾನ ಕಾರ್ಯದರ್ಶಿ ದಿನಕರ್ ಡಿ. ಬಂಗೇರ ಅವರಿಗೆ ಮಾತೃ ವಿಯೋಗ.

Mumbai News Desk