29.8 C
Mumbai
June 28, 2026
Mumbai News Kannada
ಲೇಖನ

ಶಿಕ್ಷಣದ ಜೊತೆಗೆ ಸಂಸ್ಕೃತಿಯ ಆರಾಧನೆ: ಪಂಬದ ಸಮುದಾಯದ ಹೆಮ್ಮೆಯ ಕುಲಕಸುಬನ್ನು ಮೈಗೂಡಿಸಿಕೊಂಡ ಮಹೇಶ್ ಗುಜರನ್





ಕರ್ನಾಟಕದ ದಕ್ಷಿಣ ಭಾಗವಾದ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಜನಜೀವನದಲ್ಲಿ ಕುಲದೈವಗಳ ಆರಾಧನೆಗೆ ವಿಶಿಷ್ಟ ಸ್ಥಾನವಿದೆ. ವಿಶೇಷವಾಗಿ ತುಳುನಾಡಿನ ಜನರು ತಮ್ಮ ಕುಲದೈವಗಳ ಮೇಲಿನ ಭಕ್ತಿ, ನಂಬಿಕೆ ಮತ್ತು ಗೌರವವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದ್ದಾರೆ. ತುಳುನಾಡಿನ ಸಂಸ್ಕೃತಿ, ಆಚರಣೆಗಳು ಹಾಗೂ ದೈವಾರಾಧನೆಗಳು ಸಮಾಜದ ಐಕ್ಯತೆ, ನ್ಯಾಯ ಮತ್ತು ನೈತಿಕ ಮೌಲ್ಯಗಳ ಪ್ರತೀಕಗಳಾಗಿವೆ.

ತುಳುನಾಡಿನ ದೈವಪರಂಪರೆಯಲ್ಲಿ ಹೆಣ್ಣು ಸಂತತಿಯ ಪ್ರಾಮುಖ್ಯತೆ ಹಾಗೂ ಮಾವನಿಂದ ಸೋದರಳಿಯನಿಗೆ ಅಧಿಕಾರ ಹಸ್ತಾಂತರವಾಗುವ ಸಂಪ್ರದಾಯಗಳು ವಿಶಿಷ್ಟವಾಗಿವೆ. ಈ ಕುರಿತು ಅನೇಕ ವಿದ್ವಾಂಸರು, ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಹಿಂದಿನ ಕಾಲದಲ್ಲಿ ದೈವಪೂಜೆ, ನೇಮ-ಕೋಲಗಳು ಮತ್ತು ಜಾನಪದ ಆಚರಣೆಗಳು ಕಟ್ಟುನಿಟ್ಟಿನ ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಗಳ ಅಡಿಯಲ್ಲಿ ನಡೆಯುತ್ತಿದ್ದವು. ದೈವಚಾಕರ್ಯ ನಿರ್ವಹಿಸುವವರು ಸಮಾಜದ ಹಿತಾಸಕ್ತಿಯನ್ನು ಕಾಪಾಡುವುದು ತಮ್ಮ ಕರ್ತವ್ಯವೆಂದು ಭಾವಿಸುತ್ತಿದ್ದರು.

ಇಂದಿಗೂ ತುಳುನಾಡಿನ ಜನರು ಉದ್ಯೋಗ, ವ್ಯಾಪಾರ ಅಥವಾ ಶಿಕ್ಷಣಕ್ಕಾಗಿ ಮುಂಬೈ, ವಿದೇಶಗಳು ಅಥವಾ ಇತರ ರಾಜ್ಯಗಳಿಗೆ ತೆರಳುವಾಗ ತಮ್ಮ ಕುಲದೈವದ ಆಶೀರ್ವಾದ ಪಡೆದು, ಗಂಧಪ್ರಸಾದವನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಾರೆ. ಕುಟುಂಬದ ಆಸ್ತಿ-ಪಾಸ್ತಿ ಅಥವಾ ಇತರ ವ್ಯಾಜ್ಯಗಳ ಸಂದರ್ಭದಲ್ಲಿ ಸಹ ಅನೇಕರು ನ್ಯಾಯಾಲಯದ ಮೊರೆ ಹೋಗುವ ಮುನ್ನ ದೈವದ ಸಾನ್ನಿಧ್ಯದಲ್ಲಿ ಮೊರೆಯಿಡುವ ಸಂಪ್ರದಾಯವನ್ನು ಅನುಸರಿಸುತ್ತಾರೆ.

ತುಳುನಾಡಿನ ದೈವಾರಾಧನೆ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಸಮಾಜದಲ್ಲಿ ಸೌಹಾರ್ದತೆ, ನ್ಯಾಯ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುವ ಶಕ್ತಿಯಾಗಿದೆ. ನೇಮ, ಕೋಲ, ಅಂಕ, ಆಯನ, ಜಾತ್ರೆ ಮತ್ತು ಉತ್ಸವಗಳ ಮೂಲಕ ದೈವಗಳು ಜನರ ಬದುಕಿನೊಂದಿಗೆ ಬೆರೆತು ನಿಂತಿವೆ. ದೈವದ ಸಾನ್ನಿಧ್ಯದಲ್ಲಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬದುಕುವ ಸಂದೇಶವನ್ನು ಈ ಪರಂಪರೆ ಸಾರುತ್ತದೆ.

ಈ ಮಹತ್ವದ ಸಂಸ್ಕೃತಿಯನ್ನು ಜೀವಂತವಾಗಿಡುವವರಲ್ಲಿ ಪಂಬದ ಸಮುದಾಯದ ದೈವ ನರ್ತಕರ ಪಾತ್ರ ಅನನ್ಯವಾಗಿದೆ. ದೈವದ ವೇಷಭೂಷಣ ಧರಿಸಿ, ದೈವದ ರೂಪದಲ್ಲಿ ಜನರಿಗೆ ಆಶೀರ್ವಚನ ನೀಡುವ ಈ ಸೇವೆ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ.

ಅಂತಹ ಪ್ರಸಿದ್ಧ ದೈವ ನರ್ತಕರಲ್ಲಿ ಉಡುಪಿ ತಾಲ್ಲೂಕಿನ ಕುತ್ಪಾಡಿ ಗ್ರಾಮದ ಬಡಕಾಯಿ ಮೂಲದ ಮಹೇಶ್ (ಮಯಿ) ಕೃಷ್ಣ ಗುಜರನ್ ಅವರ ಹೆಸರು ವಿಶೇಷವಾಗಿ ಉಲ್ಲೇಖನೀಯವಾಗಿದೆ. ಇವರು ಕೃಷ್ಣ (ಕಿಟ್ಟ) ಗುಜರನ್ ಹಾಗೂ ಸುಮತಿ ಗುಜರನ್ ದಂಪತಿಗಳ ನಾಲ್ಕು ಮಕ್ಕಳಲ್ಲಿ ಕಿರಿಯರು.

ಶಿಕ್ಷಣದ ಜೊತೆಗೆ ಧಾರ್ಮಿಕ ಸಂಸ್ಕಾರಗಳೂ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವೆಂಬುದನ್ನು ಮಹೇಶ್ ಅವರ ಬದುಕು ಸಾಬೀತುಪಡಿಸುತ್ತದೆ. ಶಾಲೆ ಹಾಗೂ ಕಾಲೇಜು ದಿನಗಳಲ್ಲೇ ತಂದೆಯೊಂದಿಗೆ ರಾಜನ್ ದೈವಗಳ ನೇಮ-ಕೋಲಗಳಿಗೆ ತೆರಳುತ್ತಿದ್ದ ಅವರು, ಮನೆಯ ಹಿರಿಯರಿಂದ ದೈವ ನರ್ತನೆಯ ಹೆಜ್ಜೆಗಳು, ಆಚರಣೆಗಳು ಹಾಗೂ ಸಂಪ್ರದಾಯಗಳನ್ನು ಕಲಿತು ಆಸಕ್ತಿ ಬೆಳೆಸಿಕೊಂಡರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ನಂತರ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರೂ, ತುಳುನಾಡಿನ ಧಾರ್ಮಿಕ ಪರಂಪರೆಯ ಮೇಲಿನ ಅವರ ಆಸಕ್ತಿ ಎಂದಿಗೂ ಕಡಿಮೆಯಾಗಲಿಲ್ಲ. ತಮ್ಮ ಪಂಬದ ಸಮುದಾಯದ ಕುಲಕಸುಬನ್ನು ಕೇವಲ ವೃತ್ತಿಯೆಂದು ಅಲ್ಲ, ದೈವಸೇವೆಯೆಂದು ಪರಿಗಣಿಸಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ಮಹೇಶ್ ಅವರು 2011ರಲ್ಲಿ ಮೂಲ ಮೈಸಂದಾಯ ದೈವಕ್ಕೆ ಕೋಲ ಕಟ್ಟುವ ಮೂಲಕ ದೈವ ನರ್ತಕರಾಗಿ ಸೇವೆ ಆರಂಭಿಸಿದರು. ವಿಶೇಷವಾಗಿ ಗಂಗೆನಾಡಿ ಕುಮಾರ ಓಡಿಲ್ತಾಯ ದೈವಗಳ ಕೋಲ ಕಟ್ಟುವಲ್ಲಿ ಅವರು ಹೆಚ್ಚಿನ ಖ್ಯಾತಿ ಗಳಿಸಿದ್ದಾರೆ. 2026ರ ಬೇಸಿಗೆಯ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 60 ಕೋಲಗಳನ್ನು ಕಟ್ಟುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕುತ್ಪಾಡಿ ಗರಡಿ, ಕಿದಿಯೂರು ಗರಡಿ, ಪಕ್ಕಿಬೆಟ್ಟು ಗರಡಿ, ತೊನ್ಸೆ ಗರಡಿ, ಕಪ್ಪೆಟ್ಟು ಗರಡಿ ಹಾಗೂ ಮೂಡ ನಿಡಂಬೂರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು ದೈವಸೇವೆ ಸಲ್ಲಿಸಿದ್ದಾರೆ.

ಸಂದರ್ಶನದ ಕೆಲವು ಪ್ರಶ್ನೋತ್ತರಗಳು

ಪ್ರಶ್ನೆ: ನೀವು ಪದವಿ ಶಿಕ್ಷಣ ಪಡೆದಿದ್ದರೂ ಕಚೇರಿ ಕೆಲಸವನ್ನು ಆಯ್ಕೆ ಮಾಡದೇ ದೈವಸೇವೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?

ಉತ್ತರ:
“ನಾನು ನಮ್ಮ ಸಮುದಾಯದ ಕುಲಕಸುಬನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ನಮ್ಮ ಹಿಂದೂ ಧಾರ್ಮಿಕ ಸಂಸ್ಕೃತಿ ಹಾಗೂ ದೈವಾರಾಧನೆಯ ಬಗ್ಗೆ ನನಗೆ ಅಪಾರ ಆಸಕ್ತಿ ಇದೆ. ನಮ್ಮ ಪೂರ್ವಜರು ಆರಾಧಿಸಿದ ದೈವಗಳೊಂದಿಗೆ ನಮ್ಮ ಬದುಕಿಗೆ ಇರುವ ಸಂಬಂಧವನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಆತ್ಮೀಯ ಅನುಭವ.”

ಪ್ರಶ್ನೆ: ದೈವ ನರ್ತಕರಾಗಲು ನಿಮಗೆ ಪ್ರೇರಣೆ ನೀಡಿದವರು ಯಾರು?

ಉತ್ತರ:
“ನನ್ನ ತಂದೆ, ನಮ್ಮ ಮನೆಯ ಹಿರಿಯರಾದ ಶಂಬು ಅಜ್ಜ , ಶಂಕರ ಅಜ್ಜ ಹಾಗೂ ಬೊಗ್ರ ಸೇರಿಗಾರ ಅವರು ನನಗೆ ಪ್ರೋತ್ಸಾಹ ನೀಡಿದವರು. ಅವರ ಮಾರ್ಗದರ್ಶನವನ್ನು ನಾನು ಎಂದಿಗೂ ಮರೆಯುವುದಿಲ್ಲ.”

ಇಂದು ಮಹೇಶ್ (ಮಯಿ) ಗುಜರನ್ ಅವರು ತುಳುನಾಡಿನ ಪ್ರಸಿದ್ಧ ದೈವ ನರ್ತಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸೇವೆಯ ಮೂಲಕ ಯುವಜನರಲ್ಲಿ ದೈವಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅವರು ಆರಾಧಿಸುವ ದೈವಗಳು ಜನರ ಸುಖ-ದುಃಖಗಳಲ್ಲಿ ಜೊತೆಗಿದ್ದು, ಸಮಾಜಕ್ಕೆ ಶಾಂತಿ, ನ್ಯಾಯ ಮತ್ತು ನೆಮ್ಮದಿಯನ್ನು ನೀಡಲಿ ಎಂಬ ಹಾರೈಕೆಯೊಂದಿಗೆ ಅವರ ಸೇವೆ ಇನ್ನಷ್ಟು ವಿಸ್ತಾರವಾಗಲಿ.

– ಜಯ ಸಿ. ಪೂಜಾರಿ ಕೆಳಾರ್ಕಳ ಬೆಟ್ಟು



Related posts

ಉಡುಪಿ ಜಿಲ್ಲೆಯಲ್ಲಿದೆ ಮಹಿಷಾಸುರ ದೇವಾಲಯ,ಮಹಿಷನಿಗೆ ನಡೆಯುತ್ತಿದೆ ಪೂಜೆ

Mumbai News Desk

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

ಮಕ್ಕಳು ಮುಂದಿನ ಭವಿಷ್ಯ. ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಬೇಕಾದ   ವಿಶಿಷ್ಟ ಕಾರ್ಯಕ್ರಮ  ಬಂಟ ಭವಿಷ್ಯ,

Mumbai News Desk

ತುಳು-ಕನ್ನಡಿಗರ ಮನ ಸೆಳೆದ ಅಭಿನಯ ಮಂಟಪ ಮುಂಬೈಯ ತುಳು ಜಾನಪದ ಐತಿಹಾಸಿಕ ನಾಟಕ – ಕಲ್ಕುಡ-ಕಲ್ಲುರ್ಟಿ, 

Mumbai News Desk

ಕರೆದಲ್ಲಿ ಬರುವ, ಕೇಳಿದ ವರ ಕೊಡುವ ಮೆಟ್ಕಲ್ ಗುಡ್ಡ ಗಣಪತಿ

Chandrahas

ಮುಂಬಯಿಯಲ್ಲಿ ಆಗಸ್ಟ್ 15ರಿಂದ ನಾಗಶ್ರೀ ಜಿ ಎಸ್ ತಂಡ ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ

Mumbai News Desk