
ಉಡುಪಿ, ಸೆ. 23: ಕಿನ್ನಿಮುಲ್ಕಿ ಕನ್ನರ್ಪಾಡಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಶ್ರೀ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 14ರಿಂದ 23ರವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡರು. ಹತ್ತು ದಿನಗಳ ಕಾಲ ನಡೆದ ಈ ಉತ್ಸವವು ಭಕ್ತಿ, ಸಂಭ್ರಮ ಹಾಗೂ ಸಾಮಾಜಿಕ ಸೌಹಾರ್ದತೆಗೆ ಸಾಕ್ಷಿಯಾಯಿತು. ಸೆ. 23ರಂದು ನಡೆದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಅಂದು ಸಂಜೆ 5 ಗಂಟೆಗೆ ಪುರೋಹಿತರ ಪೌರೋಹಿತ್ಯದಲ್ಲಿ ವಿಸರ್ಜನಾ ಪೂಜೆ ನೆರವೇರಿದ ಬಳಿಕ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ಆರಂಭಗೊಂಡಿತು. ಅಗ್ನಿಶಾಮಕ ಠಾಣೆ (ಫೈರ್ಸ್ಟೇಷನ್) ರಸ್ತೆ, ಬ್ರಹ್ಮಗಿರಿ ವೃತ್ತ, ಜೋಡುಕಟ್ಟೆ ಮಾರ್ಗವಾಗಿ ಕಿನ್ನಿಮುಲ್ಕಿ ಮುಖ್ಯ ರಸ್ತೆ, ಬಲಾಯಿಪಾದೆ ಹಾಗೂ ಸ್ವಾಗತ ಗೋಪುರದ ಮೂಲಕ ಮೆರವಣಿಗೆ ಸಾಗಿತು.
ಬಳಿಕ ಮೆರವಣಿಗೆಯು ಕನ್ನರ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಣ್ವಪುಷ್ಕರಣಿಯ ಬಳಿ ತಲುಪಿತು. ಅಲ್ಲಿ ಗಣೇಶ ಮೂರ್ತಿಗೆ ಭಕ್ತಿಪೂರ್ವಕವಾಗಿ ಪುಷ್ಪಾರ್ಚನೆ ಸಲ್ಲಿಸಿ, ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪಂಚಾರತಿ ಬೆಳಗಿಸಲಾಯಿತು. ಬಳಿಕ ಪುಷ್ಕರಣಿಯಲ್ಲಿ ಗಣೇಶ ಮೂರ್ತಿಯನ್ನು ಜಲಸ್ತಂಭನದ ಮೂಲಕ ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ, ಸಂಭ್ರಮ ಸಮಿತಿ ಹಾಗೂ ಸಂಭ್ರಮ ಮಹಿಳಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ಸೆ. 22ರಂದು ಮಂಗಳವಾರ ಸಂಜೆ 7 ಗಂಟೆಗೆ ಗಣೇಶೋತ್ಸವದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸುಭಾಷ್ ಎಂ. ಸಾಲಿಯಾನ್ (ಮಣಿಪುರ) ಮಾತನಾಡಿ, “ಶ್ರೀ ಕೃಷ್ಣಮೂರ್ತಿ ಹಾಗೂ ಅವರ ಪತ್ನಿ ಶ್ರೀಮತಿ ಅಮೃತಾ ಕೃಷ್ಣಮೂರ್ತಿ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಈ ವರ್ಷ ನಮ್ಮ ತುಳು ಭಾಷೆಗೆ ಮಾನ್ಯತೆ ದೊರೆತಿರುವುದು ಕೂಡ ಹೆಮ್ಮೆಯ ಸಂಗತಿ. ಗಣೇಶೋತ್ಸವದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು” ಎಂದರು.
ಮತ್ತೋರ್ವ ಅತಿಥಿ, ಉದ್ಯಮಿ ಮಂಜುನಾಥ್ ಮಾತನಾಡಿ, “ನಮ್ಮ ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ಗಣಪತಿಯ ಆಶೀರ್ವಾದ ಸದಾ ನಮ್ಮನ್ನು ಕಾಪಾಡುತ್ತದೆ. ನಮ್ಮ ನೆಲದ ಸಂಸ್ಕೃತಿ ಹಾಗೂ ಜನರ ಒಗ್ಗಟ್ಟು ಅಪಾರ ಶಕ್ತಿಯನ್ನು ನೀಡುತ್ತದೆ” ಎಂದು ಹೇಳಿದರು.
ಇದೇ ವೇಳೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಥೈಲ್ಯಾಂಡ್ನಲ್ಲಿ ನಡೆದ ಫ್ಯಾಷನ್ ಶೋ ಮಾಡೆಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದ ಸಚಿತ್ ರಾವ್ ಹಾಗೂ ಮಾರ್ಟಿನ್ ಜತ್ತನ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶೇಖರ್ ಮತ್ತು ಬೇಬಿ ಅವರಿಗೆ ಆರೋಗ್ಯ ನಿಧಿಯ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಪುರುಷೋತ್ತಮ ಮೆಂಡನ್, ಗುಣಾಕರ್ ಸನಿಲ್, ಅಭಿಜಿತ್ ಸುವರ್ಣ, ಹರೀಶ್ ದೇವಾಡಿಗ, ಗಣನಾಥ್ ಹೆಗ್ಡೆ, ಡಾ. ವೀಣಾ, ಸುಧಾಕರ್ ಪೂಜಾರಿ, ವಿದ್ಯಾಧರ ಶೆಟ್ಟಿಗಾರ್, ಸುಂದರ್ ಶೆಟ್ಟಿ ಹಾಗೂ ಮಂಜುನಾಥ್ ಕೆ. ಬೈಲೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಮೂಲ್ಯ ಪ್ರಾರ್ಥಿಸಿದರು. ಶ್ರೀ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಮೆರವಣಿಗೆಯಲ್ಲಿ 40ಕ್ಕೂ ಅಧಿಕ ಸ್ತಬ್ಧಚಿತ್ರಗಳ (ಟ್ಯಾಬ್ಲೋ) ವ್ಯವಸ್ಥೆಗೆ ಜಯಕರ್ ಶೆಟ್ಟಿಗಾರ್, ವಿಜಯ ಪೂಜಾರಿ, ಪ್ರವೀಣ್ ಭಂಡಾರಿ ಹಾಗೂ ಸುದೇಶ್ ಭಂಡಾರಿ ಸಹಕರಿಸಿದರು. ಜಯಕರ್ ಶೆಟ್ಟಿಗಾರ್ ವಂದಿಸಿದರು.
ವರದಿ: ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು



